ಜೆಡಿಎಸ್ ಅಡ್ರೆಸ್ ಇಲ್ಲ, ಕಾಂಗ್ರೆಸ್ ಸೋತು ಸುಣ್ಣವಾಗಿದೆ: ಸಿಎಂ ಯಡಿಯೂರಪ್ಪ

Belagavi F
Published on

ಬೆಳಗಾವಿ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರಾಜ್ಯವೇ ಬೆಚ್ಚಿಬೀಳುವ ರೀತಿಯಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಸೋಲನುಭವಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಜನಸಾಏವಕ ಸಭೆಯಲ್ಲಿ ಮಾತನಾಡಿದ ಅವರು, ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದೆಲ್ಲವೂ ಕಾರ್ಯಕರ್ತರ ಶ್ರಮದಿಂದ ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದೆ ಪಕ್ಷದ ಚಿಹ್ನೆಯಡಿ ನಡೆಯುವ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲೂ ಸ್ಪರ್ಧಿಸಿ ಅಧಿಕಾರ ಹಿಡಿಯುವ ಆತ್ಮವಿಶ್ವಾಸ ಇದೆ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು. ಒಂದು ಕಾಲದಲ್ಲಿ ಹಣ, ಹೆಂಡ ಹಾಗೂ ಅಧಿಕಾರದ ಬಲದಿಂದ ಗೆಲುವು ಸಾಧಿಸುತ್ತೇವೆಂದು ಕಾಂಗ್ರೆಸ್ ಅಂದುಕೊಂಡಿತ್ತು. ಆದರೆ, ರಾಜ್ಯದಲ್ಲಿ ನಡೆದ ಎಲ್ಲ ಉಪಚುನಾವಣೆಗಳಲ್ಲಿ ಗೆದ್ದು, 25 ಲೋಕಸಭೆ ಕ್ಷೇತ್ರಗಳನ್ನು ಬಿಜೆಪಿ ಅರಳಿದೆ ಎಂದು ಸಿಎಂ ಹೇಳಿದರು.

ಈ ಭಾಗದಲ್ಲಿ ಜೆಡಿಎಸ್ ಅಡ್ರೆಸ್ ಇಲ್ಲ, ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಮುಂದಿನ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಗೆಲ್ಲುವ ನಿಟ್ಟಿನಲ್ಲಿ ಶ್ರಮಿಸಬೇಕು. ಹಳ್ಳಿಗಳ ಅಭಿವೃದ್ಧಿಗಾಗಿ ಗ್ರಾಮ ಪಂಚಾಯತ್​ಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಹೆಚ್ಚಿನ ಅನುದಾನ ನೀಡಲಿದ್ದಾರೆ. ಅವೆಲ್ಲವನ್ನೂ ಸದ್ಬಳಕೆ ಮಾಡಿಕೊಂಡು, ಭ್ರಷ್ಟಾಚಾರ ರಹಿತರ ಅಧಿಕಾರ ಚಲಾಯಿಸಿ ಅಭಿವೃದ್ಧಿ ಸಾಧಿಸಬೇಕು ಎಂದು ಹೇಳಿದರು.

ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿಯವರನ್ನು ಕಳೆದುಕೊಂಡು ಕ್ಷೇತ್ರವಲ್ಲ, ಇಡೀ ರಾಜ್ಯದ ಬಿಜೆಪಿ ತಬ್ಬಲಿಯಾಗಿದೆ. ಅವರ ಕನಸುಗಳನ್ನು ನನಸಾಗಿಸಲು ಉಪಚುನಾವಣೆಗೆ ಯಾರೇ ನಿಂತರೂ ಅವರನ್ನು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಬಿಎಸ್​ವೈ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net