

ನವದೆಹಲಿ: ಮೇಡಂ... ನಿಮ್ಮ ಮನೆ 2ನೇ ಮಹಡಿ. ಮೆಟ್ಟಿಲು ಹತ್ತಿ ಇಲ್ಲೀವರೆಗೆ ಗ್ಯಾಸ್ ಸಿಲಿಂಡರ್ ತಂದುದಕ್ಕೆ 30 ರೂಪಾಯಿ ಕೊಡಲೇಬೇಕು. ಗ್ರೌಂಡ್ ಫ್ಲೋರ್ ಆಗಿದ್ರೆ ಏನೋ ನೋಡ್ಬೋದಿತ್ತು...
ಸರ್... ನೀವು ಸಿಲಿಂಡರ್ ನಿಮ್ಮ ಬಾಗಿಲಿಗೆ ತಂದುಕೊಟ್ಟಿದ್ದಕ್ಕೆ ಕಾಸು ಕೊಡಲೇಬೇಕು. ಇದು ರೂಲ್ಸ್. ಕೊಡಲ್ಲ ಅಂದ್ರೆ ಮುಂದಿನ ಸಲದಿಂದ ತರಲ್ಲ ಅಷ್ಟೇ...
ಏನ್ ಮೇಡಂ ಹೀಗೆ ಹೇಳ್ತೀರಾ? ಲಿಫ್ಟ್ನಲ್ಲಿ ಬಂದ್ರೆ ಏನಂತೆ? ಮನೆ ಬಾಗಿಲವರೆಗೂ ತಂದುಕೊಟ್ಟಿಲ್ವಾ ಸಿಲಿಂಡರ್ನ್ನ? ಹಣ ಕೊಡಲ್ಲ ಅಂದ್ರೆ...
- ಹೀಗೆಲ್ಲಾ ಅಡುಗೆ ಅನಿಲದ ಸಿಲಿಂಡರ್ ತಂದುಕೊಡುವವರು ನಿಮಗೆ ಹೇಳಿರಲಿಕ್ಕೆ ಸಾಕು, ಇಲ್ಲವೇ ತಮಗೆ ಹಣವನ್ನು ಕೊಡುವುದು ಕಡ್ಡಾಯ ಎಂದು ಹೇಳಿರಬಹುದು, ಅದನ್ನು ನೀವು ನಂಬಿರಲೂಬಹುದು.
ಆದರೆ ವಾಸ್ತವ ಏನು ಗೊತ್ತಾ? ಹೀಗೆ ಮನೆಗೆ ಸಿಲಿಂಡರ್ ತಂದುಕೊಡುವ ವ್ಯಕ್ತಿಗೆ ಗ್ರಾಹಕರು ಡೆಲಿವರಿ ಶುಲ್ಕ ನೀಡುವ ಅಗತ್ಯವಿಲ್ಲ, ಇದು ನಿಯಮವೂ ಅಲ್ಲ ಎಂದಿದೆ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಎಚ್‌ಪಿಸಿಎಲ್). ನೀವು ಯಾವುದೇ ಕಂಪೆನಿಯ ಸಿಲಿಂಡರ್ ಪಡೆದುಕೊಂಡರೂ ಈ ನಿಯಮ ಅನ್ವಯ ಆಗುತ್ತದೆ. ಯಾರು ಕೂಡ ಡೆಲಿವರಿಮ್ಯಾನ್ಗೆ ಹಣ ಕೊಡುವುದು ಕಡ್ಡಾಯವಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಹಣವನ್ನು ನೀಡುವಂತೆ ಹಲವರು ಒತ್ತಾಯ ಮಾಡುತ್ತಿರುವುದರಿಂದ ಸಂದೇಹಗೊಂಡ ಹೈದರಾಬಾದ್‌ನ ಗ್ರಾಹಕರೊಬ್ಬರು ಮಾಹಿತಿ ಹಕ್ಕು ಕಾಯ್ದೆ ಅಡಿ ಈ ಪ್ರಶ್ನೆ ಕೇಳಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಎಚ್‌ಪಿಸಿಎಲ್ ಇದು ಕಡ್ಡಾಯವಲ್ಲ ಎಂದು ಉತ್ತರ ನೀಡಿದೆ.
'ಗ್ರಾಹಕರ ಮನೆಗೆ ಗ್ಯಾಸ್ ಸಿಲಿಂಡರ್ ತಲುಪಿಸುವುದು ವಿತರಕರ ಜವಾಬ್ದಾರಿ. ಮನೆಯು ಯಾವುದೇ ಮಹಡಿಯಲ್ಲಿ ಇರಲಿ, ಅವರು ಹಣವನ್ನು ಕೇಳುವಂತಿಲ್ಲ ಎಂದಿರುವ ಎಚ್‌ಪಿಸಿಎಲ್, ಬಿಲ್‌ನಲ್ಲಿ ನಮೂದಾಗಿರುವುದಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಇಷ್ಟವಿಲ್ಲದಿದ್ದರೆ ಕೊಡುವಂತಿಲ್ಲ ಎಂದು ಹೇಳಿದೆ. ಒಂದು ವೇಳೆ ಈ ರೀತಿ ಹಣ ಕೇಳಿದರೆ ಗ್ರಾಹಕರು ತಾವು ಕೊಡುವುದಿಲ್ಲ ಎಂದು ಹೇಳಬಹುದು. ಆ ಸಂದರ್ಭದಲ್ಲಿ ಡೆಲಿವರಿ ಮಾಡುವ ವ್ಯಕ್ತಿಗಳು ಒತ್ತಾಯ ಮಾಡುವಂತಿಲ್ಲ ಎಂದು ಉತ್ತರಿಸಿದೆ.
ಅಷ್ಟಕ್ಕೂ... ಭಾರವಾದ ಸಿಲಿಂಡರ್ ಹೊತ್ತು 2-3 ಮಹಡಿ ಹತ್ತಿಕೊಂಡೋ, ಮನೆಯ ಒಳಗಡೆ ಇಡುವ ಕಷ್ಟವನ್ನು ತೆಗೆದುಕೊಳ್ಳುವ ಡೆಲಿವರಿಮ್ಯಾನ್ಗಳನ್ನು ನೋಡಿ ನಿಮಗೇ ಅಯ್ಯೋ ಎನಿಸಿ ಹಣ ಕೊಟ್ಟರೆ ಅದು ಬೇರೆ ಮಾತು. ಅವರು ಪಡುವ ಕಷ್ಟವನ್ನು ನೋಡಿ ಅವರು ಕೇಳಿದ್ದಕ್ಕಿಂತ ಹೆಚ್ಚಿನ ಹಣವನ್ನೂ ಕೊಡುವವರು ಇದ್ದಾರೆ ಎನ್ನುವುದೂ ಅಷ್ಟೇ ಸತ್ಯ. 20-30 ರೂಪಾಯಿಗಳಲ್ಲಿ ಏನಾಗುತ್ತೆ ಮಹಾ ಎಂದುಕೊಂಡು ದುಡ್ಡು ಕೊಡುತ್ತಿದ್ದಾರೆ ಹಲವರು. ಅದು ಅವರವರ ಇಷ್ಟಕ್ಕೆ ಬಿಟ್ಟ ವಿಷಯ. ಆದರೆ ನಿಯಮದ ಪ್ರಕಾರ ಮಾತ್ರ ನಿಮಗೆ ಇಷ್ಟವಿಲ್ಲದಿದ್ದರೆ ಅವರು ಹಣ ವಸೂಲಿ ಮಾಡುವಂತಿಲ್ಲ ಅಷ್ಟೇ...