

ಧಾರವಾಡ: ಮೊನ್ನೆ ಶುಕ್ರವಾರ ಧಾರವಾಡದ ಬಳಿ ನಡೆದ ಭೀಕರ ಅಪಘಾತದಲ್ಲಿ ಪ್ರವಾಸಕ್ಕೆ ಹೊರಟಿದ್ದ 11 ಮಂದಿ ಮಹಿಳೆಯರು ಪ್ರಾಣ ಕಳೆದುಕೊಳ್ಳುವುದಕ್ಕೆ ನೇರ ಕಾರಣವಾಗಿರುವುದು ನೈಸ್ (ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್) ಸಂಸ್ಥೆ ಮಾಲೀಕ ಅಶೋಕ ಖೇಣಿಯೇ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ಇಟಗಟ್ಟಿ ಕ್ರಾಸ್ ಬಳಿ ನಡೆದಿರುವ ಈ ದುರಂತಕ್ಕೆ ಖೇಣಿ ಅವರನ್ನೇ ನೇರ ಹೊಣೆ ಮಾಡಬೇಕು ಎಂದು ಐಸಿಸಿ ಸದಸ್ಯ ದೀಪಕ ಚಿಂಚೋರೆ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಮೊನ್ನೆ ಶುಕ್ರವಾರ ನಡೆದಿರುವ ದುರಂತ ಮಾತ್ರವಲ್ಲ. ಇದೇ ಸ್ಥಳದ ಆಸುಪಾಸಿನಲ್ಲಿ ಹಲವಾರು ಅಪಘಾತಗಳು ನಡೆದಿದ್ದು ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಈ ರಸ್ತೆ ನಿರ್ಮಾಣ, ನಿರ್ವಹಣೆ ಹಾಗೂ ಶುಲ್ಕ ಸಂಗ್ರಹಿಸುತ್ತಿರುವ ನೈಸ್ ಸಂಸ್ಥೆ ಮಾತ್ರ ಕಣ್ಮುಚ್ಚಿ ಕುಳಿತುಕೊಂಡಿದೆ. ಇಷ್ಟು ಬಲಿಯಾದರೂ ಇದುವರೆಗೆ ಕ್ರಮ ತೆಗೆದುಕೊಂಡಿಲ್ಲ. ಆದ್ದರಿಂದ ಎಲ್ಲಾ ಸಾವಿಗೂ ಖೇಣಿಯವರೇ ನೇರ ಹೊಣೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಅಶೋಕ ಖೇಣಿ ಅವರಿಗೆ ಈ ರಸ್ತೆ ನಿರ್ಮಾಣ, ನಿರ್ವಹಣೆ ಹಾಗೂ ಶುಲ್ಕ ಸಂಗ್ರಹ ಆಧಾರದ ಮೇಲೆ ನೀಡಲಾಗಿದೆ. ಇವರು ಇಲ್ಲಿ ರಸ್ತೆಯನ್ನು ವಿಸ್ತರಣೆ ಮಾಡದಂತೆ ತಡೆಯುತ್ತಲೇ ಬಂದಿದ್ದಾರೆ. ಪ್ರತಿ ತಿಂಗಳು ಕೋಟ್ಯಂತರ ರುಪಾಯಿ ಟೋಲ್ ಸಂಗ್ರಹಿಸುತ್ತಿರುವ ಇವರು ಅಧಿಕಾರಿಗಳಿಗೆ ಬ್ಲ್ಯಾಕ್ಮೇಲ್ ಮಾಡುತ್ತಾ ವಿಸ್ತರಣೆಗೆ ತಡೆಯೊಡ್ಡುತ್ತಿದ್ದಾರೆ ಎಂದು ಚಿಂಚೋರೆ ಆರೋಪಿಸಿದ್ದಾರೆ.
ಈ ವಿಷಯದಲ್ಲಿ ಖೇಣಿ ಜತೆಗೆ ಮಾತುಕತೆ ಆಗುತ್ತಿದೆ ಎಂದು ಹಲವು ವರ್ಷಗಳಿಂದಲೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ರಾಜ್ಯ ಸಚಿವ ಜಗದೀಶ ಶೆಟ್ಟರ್ ಹೇಳುತ್ತಲೇ ಬಂದಿದ್ದಾರೆ. ಆದರೆ ಏನೊಂದೂ ಕೆಲಸವಾಗಿಲ್ಲ. ಬರೀ ಆಶ್ವಾಸನೆಗಳಷ್ಟೇ ಸಿಕ್ಕಿವೆ. ಆದ್ದರಿಂದ ಅಪಘಾತಗಳು ಸಂಭವಿಸುತ್ತಲೇ ಇವೆ. ಜನರ ಜೀವ ಉಳಿಸಲು ಶೀಘ್ರ ರಸ್ತೆ ವಿಸ್ತರಣೆ ಅಗತ್ಯವಾಗಿದೆ ಎಂದಿರುವ ಅವರು, ಈ ಕುರಿತು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ.