ಪೊಲೀಸ್ ಎಸ್ಕಾರ್ಟ್‌ಗೋಸ್ಕರ ಖರ್ಗೆ ಜೀವ ಬೆದರಿಕೆ ನೆಪ: ಕಟೀಲ್ ಆರೋಪ

Nalin Kumar Kateel 8 Feb 20
Published on

ಕಲಬುರಗಿ: ತಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಮತ್ತು ತಮಗೆ ಅಪರಿಚಿತರಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂಬುದಾಗಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಕೊಟ್ಟಿದ್ದು ನಿಮಗೆ ಗೊತ್ತು. ಅದಕ್ಕೆ ಕಾರಣ ಏನು ಎಂಬುದನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಬುಧವಾರ ಬಹಿರಂಗಪಡಿಸಿದ್ದಾರೆ.

‘‘ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇವಲ ಕಾರಿನಲ್ಲಿ ತಿರುಗಾಡಲು ಮುಜುಗರವಾಗುವುದರಿಂದ ಎಸ್ಕಾರ್ಟ್ ವಾಹನ ಮತ್ತು ಭದ್ರತೆ ಹೆಚ್ಚಿಸಿಕೊಳ್ಳಲು ಜೀವ ಬೆದರಿಕೆ ಹಾಕಿದ್ದಾರೆ ಎಂಬ ತಂತ್ರ ಹೆಣೆದಿದ್ದಾರೆ’’ ಎಂದು ಕಟೀಲ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

‘‘ಕೇಂದ್ರ ಸಚಿವರಾಗಿದ್ದಾಗ ಮತ್ತು ವಿರೋಧ ಪಕ್ಷದ ನಾಯಕರಾಗಿದ್ದ ವೇಳೆಯಲ್ಲಿ ಖರ್ಗೆ ಅವರಿಗೆ ಬೆಂಗಾವಲು ವಾಹನ ಮತ್ತು ಪೊಲೀಸ್ ಬಂದೋಬಸ್ತ್ ಇರುತ್ತಿತ್ತು. ಚುನಾವಣೆಯಲ್ಲಿ ಸೋತ ಬಳಿಕ ಅವರು ಅದನ್ನು ಕಳೆದುಕೊಂಡಿದ್ದಾರೆ’’ ಎಂದು ವಿವರಿಸಿದರು.

‘‘ಈಗ ರಾಜ್ಯಸಭಾ ಸದಸ್ಯರಾಗುತ್ತಿರುವುದರಿಂದ ಅವರಿಗೆ ಕೇವಲ ಕಾರ್ ಮಾತ್ರ ಇರುತ್ತದೆ. ಹೀಗಾಗಿ ಜೀವಭಯ ಇದೆ ಅಂತ ಪೊಲೀಸರಿಗೆ ದೂರು ನೀಡಿದ್ದಾರೆ. ಭದ್ರತೆ ಹೆಚ್ಚಿಸಿಕೊಳ್ಳಲು ಇಲ್ಲದ ಸುಳ್ಳು ದೂರು ನೀಡಿರುವಂತಿದೆ’’ ಎಂದು ಲೇವಡಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net