More

    ಅಂಬೇಡ್ಕರ್ ರಾಜೀನಾಮೆ ನೀಡಿದ್ದರ ಹಿನ್ನೆಲೆ ಏನು?: ಆ ಬಗ್ಗೆ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ ಏನು ಹೇಳ್ತಾರೆ?

    ಅಂಬೇಡ್ಕರ್ ಶ್ರಮದ ಫಲವಾಗಿ ಇಂತಹ ಸದೃಢ ಸಂವಿಧಾನ ನಮಗೆ ಸಿಕ್ಕಿದೆ. ಅವರೇ ಬಯಸಿದ್ದ ಕೆಲವೊಂದು ವಿಚಾರಗಳು ಸಂವಿಧಾನದಲ್ಲಿ ಬಿಟ್ಟು ಹೋಗಿವೆ. ಇಂದು ದೇಶದಲ್ಲಿ ಜನಪರವಾದ ಶಿಕ್ಷಣ ಹಕ್ಕು, ಆಹಾರ ಹಕ್ಕು, ಆರೋಗ್ಯ ಮಿಷನ್, ನರೇಗಾದಂತಹ ಯೋಜನೆಗಳು ಬಂದಿವೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನ ಹಕ್ಕು ನೀಡಿದ ಸಂವಿಧಾನವೇ ಕಾರಣ.

    ಅಂಬೇಡ್ಕರ್ ರಾಜೀನಾಮೆ ನೀಡಿದ್ದರ ಹಿನ್ನೆಲೆ ಏನು?: ಆ ಬಗ್ಗೆ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ ಏನು ಹೇಳ್ತಾರೆ?ಭಾರತಕ್ಕೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕೊಡುಗೆ ಅನನ್ಯವಾದದ್ದು. ಆದರೆ ಬಹಳಷ್ಟು ಜನರಿಗೆ ಆ ಬಗ್ಗೆ ಮಾಹಿತಿಯೇ ಇಲ್ಲ. ಅಂಬೇಡ್ಕರ್ ಕೇವಲ ದಲಿತರು, ಅಸ್ಪಶ್ಯತೆ ಬಗ್ಗೆ ಹೋರಾಟ ಮಾಡಿದವರೆಂದು ಗುರುತಿಸುತ್ತಾರೆ. ಬುದ್ಧಿವಂತರು, ವಿದ್ಯಾವಂತರೆನಿಸಿಕೊಂಡವರು ಸಹ ‘ದಲಿತ ನಾಯಕ’ ಅವರನ್ನು ಎಂದು ಸೀಮಿತ ಮಾಡಿದ್ದಾರೆ. ಹೆಚ್ಚೆಂದರೆ ಅವರನ್ನು ‘ಸಂವಿಧಾನ ಶಿಲ್ಪಿ’ ಎಂದು ಹೇಳುತ್ತಾರೆ. ಆದರೆ ಅವರೊಬ್ಬ ಪತ್ರಕರ್ತ, ಆರ್ಥಿಕ ಚಿಂತಕ, ನೀರಾವರಿ ತಜ್ಞ, ದೂರದೃಷ್ಟಿಯ ನಾಯಕ ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಮರೆಮಾಚಲಾಗುತ್ತದೆ. ಅಂಬೇಡ್ಕರ್ ಜನಿಸಿದ ಸಮುದಾಯಕ್ಕೆ ಮಾನವೀಯ ಹಕ್ಕುಗಳು ಸಿಗದಿರುವುದರಿಂದಲೇ ಅವರು ಆ ಸಮಾಜದ ದನಿಯಾದರು. ಆ ವರ್ಗದ ಮೇಲೆ ನಡೆಯುವ ದೌರ್ಜನ್ಯ, ಶೋಷಣೆ, ಅನ್ಯಾಯ, ಅತ್ಯಾಚಾರಗಳನ್ನು ಅವರು ಸಮಾಜಕ್ಕೆ ತೋರಿಸಬೇಕಾಗಿತ್ತು. ಮನುಸ್ಮೃತಿ ಆಧಾರದಲ್ಲಿ ಕಟ್ಟಿದ ಚಾತುರ್ವರ್ಣ ಸಮಾಜದಲ್ಲಿ ಅತಿಶೂದ್ರರಿಗೆ ಜಾಗ ಇರಲಿಲ್ಲ. ನಾಲ್ಕು ವರ್ಗಗಳೂ ದೂರವಿಟ್ಟರು. ಅತಿಶೂದ್ರರು ಹಾಗೂ ಶೂದ್ರರು ಪರಸ್ಪರ ಸೇರದಂತೆ ನೋಡಿಕೊಳ್ಳಲಾಯಿತು. ಶೇಕಡ 18ರಿಂದ 20ರಷ್ಟು ಇರುವ ಈ ವರ್ಗದ ಪರವಾಗಿ ಹೋರಾಟ ಮಾಡುವುದಕ್ಕೆ ಅಂಬೇಡ್ಕರ್ ತಮ್ಮನ್ನು ತಾವು ಅರ್ಪಿಸಿಕೊಂಡರು.

    ಪತ್ರಕರ್ತರಾಗಿ ಅಂಬೇಡ್ಕರ್: ತನ್ನ ಸಮುದಾಯಕ್ಕೆ ಆಗುವ ಶೋಷಣೆಯನ್ನು ಸಮಾಜಕ್ಕೆ ತೋರಿಸುವ ಸಲುವಾಗಿ ಮಾಧ್ಯಮವನ್ನು ಅವರು ಆಯ್ಕೆ ಮಾಡಿಕೊಂಡರು; ಆ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸಿದರು. ಅದಕ್ಕಾಗಿ ‘ಮೂಕನಾಯಕ’ ಎಂಬ ಪತ್ರಿಕೆ ಆರಂಭಿಸಿದರು. ‘ಮೂಕನಾಯಕ’ ಸ್ಥಗಿತಗೊಂಡ ನಂತರ ‘ಬಹಿಷ್ಕೃತ ಭಾರತ’ ಪತ್ರಿಕೆ ಆರಂಭಿಸಿದರು. ಬಹಳ ಕಾಲ ನಡೆದ ಈ ಪತ್ರಿಕೆ ಸ್ವಾತಂತ್ರ್ಯ ಚಳವಳಿಯಲ್ಲಿಯೂ ಪ್ರಮುಖ ಪಾತ್ರ ವಹಿಸಿತು. ‘ಬಹಿಷ್ಕೃತ ಭಾರತ’ ನಂತರ ‘ಜನತಾ’ ಎಂದು ಬದಲಾಯಿತು. ಅವರು ಬೌದ್ಧ ಧರ್ಮ ಸ್ವೀಕಾರ ಮಾಡಿದ ನಂತರ ‘ಪ್ರಬುದ್ಧ ಭಾರತ’ ಎಂಬ ಹೊಸ ಪತ್ರಿಕೆ ನಡೆಸಿದರು.

    ಅಂಬೇಡ್ಕರ್ ರಾಜೀನಾಮೆ ನೀಡಿದ್ದರ ಹಿನ್ನೆಲೆ ಏನು?: ಆ ಬಗ್ಗೆ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ ಏನು ಹೇಳ್ತಾರೆ?ಲೇಖಕರಾಗಿ: ಪತ್ರಿಕಾ ಮಾಧ್ಯಮ ಮಾತ್ರವಲ್ಲದೆ, ಭಾಷಣ, ಲೇಖನ, ಪುಸ್ತಕ ರಚನೆ ಮೂಲಕವೂ ಅವರು ಕೆಲಸ ಮಾಡಿದರು. ‘Castes in India: Their Mechanism, Genesis and Development’, ‘The Problem of the Rupee: its origin and its solution’, ‘The Annihilation of Caste’, ‘Thoughts on Pakistan; Ranade, Gandhi and Jinnah’, ‘Buddha Or Karl Marx’, ‘What Congress and Gandhi have done to the Untouchables’ ‘Who were the Shudras’… ಹೀಗೆ ಅನೇಕ ಪುಸ್ತಕಗಳನ್ನು ರಚನೆ ಮಾಡಿ ಸಮಾಜದಲ್ಲಿನ ಮೇಲು-ಕೀಳುಗಳ ವಿರುದ್ಧ ಅಹಿಂಸಾತ್ಮಕವಾದ ಹೋರಾಟವನ್ನೇ ನಡೆಸಿದರು. ಅವರಲ್ಲಿ ಹಣ ಇರಲಿಲ್ಲ, ದೇಣಿಗೆಗಳ ಮೂಲಕವೇ ಅವರ ಹೋರಾಟ ನಡೆಯಿತು. ಕುಡಿಯುವ ನೀರಿಗಾಗಿ ಹೋರಾಟ, ನಾಸಿಕ್​ನ ಮಂದಿರ ಪ್ರವೇಶದ ಹೋರಾಟ ಹೀಗೆ ಅನೇಕ ಚಳವಳಿಗಳು ಗಮನಾರ್ಹವಾಗಿವೆ. ಸಮಾಜದಲ್ಲಿದ್ದ ಅಂಧಶ್ರದ್ಧೆ, ಮೂಢನಂಬಿಕೆ, ತಪು್ಪ ತಿಳಿವಳಿಕೆಗಳ ಬಗ್ಗೆ ಅರಿವು ಮೂಡಿಸಿ, ಸಾಮಾಜಿಕ ಕ್ರಾಂತಿಯನ್ನೇ ಮಾಡಿದರು. ಆದರೆ ನಮ್ಮ ಜನ ಅಂಬೇಡ್ಕರರ ಈ ಕೊಡುಗೆಯ ಬಗ್ಗೆ ಮಾತನಾಡುವುದೇ ಇಲ್ಲ.

    ರಾಜಕೀಯ ಪ್ರಯತ್ನ: ರಾಜಕೀಯ ಅಧಿಕಾರದ ಬಗ್ಗೆಯೂ ಅವರಿಗೆ ಆಸಕ್ತಿ ಇತ್ತು. ಮೊದಲಿಗೆ ಅವರು ಕಟ್ಟಿದ್ದು ‘ಇಂಡಿಪೆಂಡೆಂಟ್ ಲೇಬಲ್ ಪಾರ್ಟಿ’. ಜತೆಗೆ ‘ಶೆಡ್ಯೂಲ್ ಕಾಸ್ಟ್ ಫೆಡರೇಷನ್’ ರಚಿಸಿದರು. ಒಂದು ಸಮಾಜಕ್ಕೆ ಸೀಮಿತವಾಗಿರಬಾರದು, ಎಲ್ಲ ಸಮಾಜ, ದೇಶಕ್ಕೆ ಸಹಾಯ ಮಾಡುವಂತಹ ಜನರನ್ನು ಒಂದೆಡೆ ತರುವ ಪ್ರಯತ್ನವನ್ನು ಮಾಡುವ ಸಲುವಾಗಿಯೇ ಅವರು ರಿಪಬ್ಲಿಕ್ ಪಕ್ಷ ಸ್ಥಾಪಿಸಿದರು. ಬೌದ್ಧ ಧರ್ಮ ಸ್ವೀಕಾರದ ನಂತರ ಆ ಪಕ್ಷಕ್ಕೆ ಬೆಂಬಲ ಸಿಗಲಿಲ್ಲ. 1957-58ರ ನಂತರ ಆ ಪಕ್ಷ ಚೆಲ್ಲಾಪಿಲ್ಲಿಯಾಯಿತು.

    ನೀರಾವರಿ ತಜ್ಞ: ಅಂಬೇಡ್ಕರ್ ಸಂವಿಧಾನ, ಕಾನೂನು ತಜ್ಞ ಮಾತ್ರವಲ, ನೀರಾವರಿ ವಿಚಾರದಲ್ಲಿಯೂ ದೂರದೃಷ್ಟಿ ಹೊಂದಿದ್ದರು. 1945-46ರ ವೇಳೆಗೆ ಅವರು ‘ನ್ಯಾಷನಲ್ ವಾಟರ್ ಕಮೀಷನ್ ಅಂಡ್ ಇರಿಗೇಷನ್’ನ ಸದಸ್ಯರಾಗಿ ದಾಮೋದರ್ ವ್ಯಾಲಿ ಕಾಪೋರೇಷನ್ ಮೂಲಕ ಅನೇಕ ನೀರಾವರಿ ಯೋಜನೆಗಳ ಜಾರಿಗೆ ಮಹತ್ವದ ಪಾತ್ರ ವಹಿಸಿದರು. ಹೀರಾಕುಡ್ ಡ್ಯಾಂ, ಬಾಕ್ರಾನಾಂಗಲ್, ಸೋನೆ, ಕೋಶಿಯಂತಹ ನೀರಾವರಿ ಯೋಜನೆಗಳ ನಿರ್ವಣಕ್ಕೆ ಸಲಹೆ ನೀಡಿದರು.

    ಅರ್ಥಶಾಸ್ತ್ರಜ್ಞ: ದೇಶದ ಏಳ್ಗೆಯನ್ನು ಬಯಸುತ್ತಿದ್ದ ಅಂಬೇಡ್ಕರ್ ಅರ್ಥಶಾಸ್ತ್ರಜ್ಞ ಸಹ ಆಗಿದ್ದರು. ಆರ್ಥಿಕ ಸಂಸ್ಥೆಯೊಂದನ್ನು ಸ್ಥಾಪನೆ ಮಾಡುವಂತೆ ಅವರು ಬ್ರಿಟಿಷರಿಗೆ ಸಲಹೆ ನೀಡಿದ್ದರು. ನಮ್ಮ ರೂಪಾಯಿಗೆ ಪ್ರಪಂಚದಲ್ಲಿ ಬೆಲೆ ಸಿಗಬೇಕಾದರೆ ಇಂತಹ ಸಂಸ್ಥೆಯ ಅಗತ್ಯ ಮನಗಂಡಿದ್ದರು. ಅದರ ಫಲವಾಗಿಯೇ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾಯಿತು. ‘ದಿ ಪ್ರಾಬ್ಲಂ ಆಫ್ ರೂಪಾಯಿ’ ಪುಸ್ತಕದಲ್ಲಿ ವಿವರವಾಗಿ ಎಲ್ಲ ಅಂಶವನ್ನು ತಿಳಿಸಿದ್ದಾರೆ.

    ಮಹಿಳಾ ಮೀಸಲಾತಿ:ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ್ದು ಅಂಬೇಡ್ಕರ್. ಆದ್ದರಿಂದ ಮಹಿಳೆಯರಿಗೂ ರಾಜಕೀಯ ಅಧಿಕಾರ ಲಭ್ಯವಾಯಿತು. ಅನೇಕ ಮುಂದುವರಿದ ರಾಷ್ಟ್ರಗಳಿಗೂ ಇದು ಮಾದರಿಯಾಯಿತು.

    ಸಂವಿಧಾನದ ರಚನೆ: ಯಾವುದೇ ಒಂದು ಸಮಾಜ, ಜಾತಿ ಅಥವಾ ಜಾತಿಗಳ ಗುಂಪಿಗಾಗಿ ಅಂಬೇಡ್ಕರ್ ಸಂವಿಧಾನವನ್ನು ರಚಿಸಲಿಲ್ಲ. ಸಂವಿಧಾನದ ಪೀಠಿಕೆಯಲ್ಲಿಯೇ ಹೇಳಿರುವಂತೆ ಸಾರ್ವಭೌಮ, ಸಮಾಜವಾದ, ಜಾತ್ಯತೀತ, ಪ್ರಜಾಪ್ರಭುತ್ವ ಮತ್ತು ಗಣತಂತ್ರ ಆಧಾರದಲ್ಲಿ ರಚನೆ ಮಾಡಿದರು. ಇವರು ಸಂವಿಧಾನ ಕರಡು ರಚನೆ ಸಮಿತಿಯ ಅಧ್ಯಕ್ಷರಾಗುವುದು ಆ ಸಮಿತಿಯಲ್ಲಿದ್ದ ಅನೇಕರಿಗೆ ಸಹಿಸಲು ಆಗಲಿಲ್ಲ. ಅನೇಕ ಸದಸ್ಯರಲ್ಲಿ, ಪ್ರಗತಿಪರ ವಿಚಾರಧಾರೆ ಇರಲಿಲ್ಲ, ಆದ್ದರಿಂದ ಅವರು ಬೆಂಬಲ ನೀಡಲು ಹಿಂದೇಟು ಹಾಕಿದ್ದರು.

    ಆದರೆ ನಾವಿಲ್ಲಿ ಒಂದು ಮಾತು ಒಪ್ಪಬೇಕು, ಗಾಂಧೀಜಿ ಸಮಾಜ, ಸ್ವಾತಂತ್ರ್ಯದ ಬಗ್ಗೆ ಹೊಂದಿದ್ದ ವಿಶೇಷ ಧೋರಣೆ, ಚಿಂತನೆಯ ಸಾಮ್ಯತೆ ಅಂಬೇಡ್ಕರ್ ಅವರಲ್ಲಿಯೂ ಇತ್ತು. ದೇಶವನ್ನು ಒಗ್ಗಟ್ಟಾಗಿ ಕಟ್ಟಬೇಕೆಂಬ ಕಾರಣಕ್ಕೆ ಅಂಬೇಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಸೂಚಿಸಿದಾಗ ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭ ಭಾಯ್ ಪಟೇಲ್ ಸಹ ಒಪ್ಪಿದರು.

    ಏಕಾಂಗಿ ಹೋರಾಟ: ಅಂಬೇಡ್ಕರ್ ರಚನೆ ಮಾಡಿದ ಸಂವಿಧಾನದ ಬಗ್ಗೆ ಬೇರೆ ಬೇರೆಯವರು ತಮ್ಮದೇ ವ್ಯಾಖ್ಯಾನ ನೀಡುತ್ತಾರೆ. ಸಂವಿಧಾನ ಕರಡು ರಚನಾ ಸಮಿತಿಯಲ್ಲಿ ಎಂಟು ಜನ ಸದಸ್ಯರಿದ್ದರೂ ಯಾರೊಬ್ಬರೂ ಸಭೆಗಳಿಗೆ ಬರುತ್ತಿರಲಿಲ್ಲ. ಈ ಮಾತನ್ನು ನಾನು ಹೇಳುತ್ತಿಲ್ಲ. ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್, ಸಮಿತಿಯ ಉಪಾಧ್ಯಕ್ಷರಾಗಿದ್ದ ಟಿ.ಟಿ. ಕೃಷ್ಣಮಾಚಾರಿ ಅವರೇ ಹೇಳಿದ್ದಾರೆ.

    ಒಟ್ಟು 272 ಸದಸ್ಯರಿದ್ದ ಅಸೆಂಬ್ಲಿಯ ಮುಂದೆ ಸಂವಿಧಾನದ ಕರಡು ಮಂಡಿಸಿದ್ದು ಅಂಬೇಡ್ಕರ್, 7635 ತಿದ್ದುಪಡಿಗೆ ಆಕ್ಷೇಪಣೆಗಳು ಬಂದಿದ್ದವು, ಅಸೆಂಬ್ಲಿಯ ಮುಂದೆ ಅವೆಲ್ಲವುಗಳಿಗೂ ಉತ್ತರ ನೀಡಿದವರು ಅಂಬೇಡ್ಕರ್. ಆಗ ಪ್ರತಿನಿತ್ಯ ಅವರು 18 ತಾಸು ಕೆಲಸ ಮಾಡಿದ್ದರು.

    ಆದ್ದರಿಂದಲೇ ರಾಜೇಂದ್ರ ಪ್ರಸಾದ್, ‘ಸಮಿತಿಯ ಅಧ್ಯಕ್ಷರಾದ ಅಂಬೇಡ್ಕರ್ ಇಷ್ಟು ಶ್ರದ್ಧೆ ಮತ್ತು ಉತ್ಸುಕತೆಯಿಂದ ಕಾರ್ಯ ನಡೆಸಿದ್ದಕ್ಕೆ ಎಲ್ಲರಿಗಿಂತ ಹೆಚ್ಚು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರನ್ನು ಕರಡು ರಚನೆ ಸಮಿತಿಗೆ ಸೇರಿಸಿದ್ದು ಮತ್ತು ಅದರ ಅಧ್ಯಕ್ಷರನ್ನಾಗಿ ಮಾಡಿದ್ದು ನಾವು ಮಾಡಿದ ಅತ್ಯುತ್ತಮ ಕೆಲಸ’ ಎಂದಿದ್ದಾರೆ.

    ಸಮಿತಿಯ ಉಪಾಧ್ಯಕ್ಷರಾಗಿದ್ದ ಕೃಷ್ಣಮಾಚಾರಿ, ‘ಸಮಿತಿಯಲ್ಲಿ ಅಧ್ಯಕ್ಷರನ್ನು ಬಿಟ್ಟು 7 ಜನರಿದ್ದರು. ಅದರಲ್ಲಿ ಒಬ್ಬರು ರಾಜೀನಾಮೆ ಕೊಟ್ಟಾಗ ಬೇರೆಯವರನ್ನು ನೇಮಕ ಮಾಡಲಾಯಿತು. ಒಬ್ಬರು ನಿಧನರಾದಾಗ ಆ ಸ್ಥಾನಕ್ಕೆ ಮತ್ತೊಬ್ಬರು ನೇಮಕವಾಗಲಿಲ್ಲ. ಒಬ್ಬರು ಅಮೆರಿಕದಲ್ಲಿದ್ದರು, ಅವರು ಬರಲೇ ಇಲ್ಲ. ಮತ್ತೊಬ್ಬರು ಆಡಳಿತ ಕಾರ್ಯದಲ್ಲಿ ನಿರತರಾಗಿದ್ದರು. ಇನ್ನೊಂದಿಬ್ಬರು ಅನಾರೋಗ್ಯದ ಕಾರಣ ದೆಹಲಿಯಿಂದ ದೂರ ಉಳಿದರು. ಇದರಿಂದ ಸಂಪೂರ್ಣ ಜವಾಬ್ದಾರಿ ಅಂಬೇಡ್ಕರ್ ಮೇಲೆ ಬಿತ್ತು. ಹಗಲು-ರಾತ್ರಿ ಅವರು ಏಕಾಂಗಿಯಾಗಿ ಕಾರ್ಯನಿರ್ವಹಿಸಿದರು. ನಾವೆಲ್ಲ ಯಾವುದೇ ಅನುಮಾನವಿಲ್ಲದೆ ಅವರಿಗೆ ಚಿರಋಣಿಯಾಗಿರಬೇಕು’ ಎಂದಿದ್ದಾರೆ.

    ಅಂಬೇಡ್ಕರ್ ಶ್ರಮದ ಫಲವಾಗಿ ಇಂತಹ ಸದೃಢ ಸಂವಿಧಾನ ನಮಗೆ ಸಿಕ್ಕಿದೆ. ಅವರೇ ಬಯಸಿದ್ದ ಕೆಲವೊಂದು ವಿಚಾರಗಳು ಸಂವಿಧಾನದಲ್ಲಿ ಬಿಟ್ಟು ಹೋಗಿವೆ. ಇಂದು ದೇಶದಲ್ಲಿ ಜನಪರವಾದ ಶಿಕ್ಷಣ ಹಕ್ಕು, ಆಹಾರ ಹಕ್ಕು, ಮಾಹಿತಿ ಹಕ್ಕು, ಆರೋಗ್ಯ ಮಿಷನ್, ನರೇಗಾದಂತಹ ಯೋಜನೆಗಳು ಬಂದಿವೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನ ಹಕ್ಕು ನೀಡಿದ ಸಂವಿಧಾನವೇ ಕಾರಣ. ಈ ಸಂವಿಧಾನದ ಆಧಾರದಲ್ಲಿಯೇ ಜನ ತಮ್ಮ ಹಕ್ಕನ್ನು ಕೋರ್ಟ್, ಕಚೇರಿಗೆ ಹೋಗಿ ಪಡೆಯುತ್ತಿದ್ದಾರೆ. ಅದಕ್ಕಾಗಿಯೇ ಅಂಬೇಡ್ಕರ್ ಸಂವಿಧಾನವನ್ನು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಎಂಬ ಮೂರು ಅಂಗಗಳಲ್ಲಿ ಪ್ರತ್ಯೇಕಿಸಿದ್ದಾರೆ.

    ನಮ್ಮ ದೇಶ ಅನೇಕ ಜಾತಿ, ಉಪಜಾತಿ, ಧರ್ಮ, ಸಂಸ್ಕೃತಿಯನ್ನು ಒಳಗೊಂಡಿದ್ದು ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸುತ್ತದೆ. ಧರ್ಮದಲ್ಲಿ ಐಕ್ಯತೆ, ಸಮಾನತೆ, ಸಾಮಾಜಿಕ ಬದಲಾವಣೆ ತರಲು ‘ಹಿಂದು ಕೋಡ್ ಬಿಲ್’ ತರಲು ಮುಂದಾದರು. ಸೂಕ್ತ ಬೆಂಬಲ ಸಿಗದೆ ರಾಜೀನಾಮೆ ನೀಡಿದರು. ಮುಂದೆ ನೆಹರು ಅದನ್ನು ನಾಲ್ಕು ಭಾಗದಲ್ಲಿ ಜಾರಿಗೆ ತಂದರು.

    ಬಸವಣ್ಣ, ಫುಲೆ, ನಾರಾಯಣಗುರು ಮೊದಲಾದ ದಾರ್ಶನಿಕರು ಪ್ರತಿಪಾದಿಸಿದ ರೀತಿಯಲ್ಲಿ ಎಲ್ಲ ಧರ್ಮವೂ ಮನುಷ್ಯರ ಏಳ್ಗೆಗಾಗಿ ಇರಬೇಕೆಂದೇ ಅಂಬೇಡ್ಕರ್ ಪ್ರತಿಪಾದಿಸಿದರು. ಅಸ್ಪಶ್ಯರಿಗಾಗಿ ಮೀಸಲಾತಿ ಕೊಡಿಸಿದರು. ಅದನ್ನು ಸಂವಿಧಾನದಲ್ಲಿಯೂ ಅಳವಡಿಸಿದರು. ರೈತರು, ಜನಸಾಮಾನ್ಯರಿಗೆ ಹಕ್ಕುಗಳನ್ನು ಕೊಟ್ಟರು.

    ಅಂಬೇಡ್ಕರ್ ಬದುಕಿನ ಮಹತ್ವದ ಘಟ್ಟ ಎಂದರೆ 1935ರ ಘೋಷಣೆ, ‘ಯಾವ ಧರ್ಮದಲ್ಲಿ ಹುಟ್ಟಿದೆನೋ ಅದು ನನ್ನ ಕೈಯಲ್ಲಿ ಇರಲಿಲ್ಲ, ಆದರೆ ಸಾವು ನನ್ನ ಕೈಯಲ್ಲಿ ಇದೆ. ಆದ್ದರಿಂದ ಬೌದ್ಧ ಧರ್ಮ ಸ್ವೀಕಾರ ಮಾಡುವೆ’ ಎಂದು ಹೇಳುವ ಮೂಲಕ ದೇಶದಲ್ಲಿ ಐಕ್ಯತೆಗೆ ಕಾರಣೀಭೂತರಾದರು. ಇಂತಹ ಮಹಾಪುರುಷನನ್ನು ಯಾವುದೇ ಜಾತಿಗೆ ಸೀಮಿತ ಮಾಡಿ ಹಣೆಪಟ್ಟಿ ಕಟ್ಟಬಾರದು.

    ‘ದೇಶಕ್ಕಾಗಿ ಹೋರಾಟ ಮಾಡದೆ ಈ ಬಾರಿ ಸ್ವಾತಂತ್ರ್ಯ ಕಳೆದುಕೊಂಡರೆ, ಮತ್ತೆ ಬರುವುದಿಲ್ಲ. ಆದ್ದರಿಂದ ನಮ್ಮ ರಕ್ತದ ಕೊನೆಯ ಹನಿ ಇರುವ ತನಕ ಹೋರಾಟ ಮಾಡಬೇಕು’ ಎಂದು ಅಂಬೇಡ್ಕರ್ ಹೇಳುತ್ತಿದ್ದರು. ಅವರ ಕೆಲಸವನ್ನು ನೆನಪಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ.

    ನಮ್ಮ ಸಂವಿಧಾನ ಬಿಕ್ಕಟ್ಟಿನಲ್ಲಿರುವ ಈ ಸಂದರ್ಭದಲ್ಲಿ ಅದನ್ನು ರಕ್ಷಿಸಲು ನಾವೆಲ್ಲ ಶ್ರಮಿಸಬೇಕಾಗಿದೆ. ಸಾಮಾಜಿಕ ನ್ಯಾಯವನ್ನು ಒದಗಿಸಿಕೊಂಡು, ಧರ್ಮ, ಜಾತಿ ಮತ್ತು ಲಿಂಗಭೇದವಿಲ್ಲದೆ ಇಡೀ ಸಮಾಜವನ್ನು ಜತೆಯಲ್ಲಿ ತೆಗೆದುಕೊಂಡು ಮುಂದೆ ಸಾಗೋಣ, ಸಂವಿಧಾನ ಓದಿ ತಿಳಿದುಕೊಂಡು ಅದನ್ನು ಉಳಿಸೋಣ.

    (ಲೇಖಕರು ಕೇಂದ್ರದ ಮಾಜಿ ಸಚಿವರು)

    ಕರೊನಾ ಸೋಂಕು ಪರೀಕ್ಷೆ ವಿಚಾರದಲ್ಲಿ ಬಡವರ ಪರವಾಗಿ ನಿಂತ ಸುಪ್ರೀಂಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts