ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಬೇಲಾಳು ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಸಾಮಾಜಿಕ ಲೆಕ್ಕ ಪರಿಶೋಧನಾ ಕಾರ್ಯಕ್ರಮದಲ್ಲಿ ಪಿಡಿಒ ಪ್ರಕಾಶ್ ಮಾತನಾಡಿದರು. ಪ್ರಕಾಶ್, ಸೋಮಯ್ಯ, ಗುರುಬಸವರಾಜ್, ರಕ್ಷಿತ್, ಮಹೇಶ್, ಗಣೇಶ್ ಇತರರು ಇದ್ದರು.
ಸರ್ಕಾರದಿಂದ ಬರುವ ಅನುದಾನವನ್ನು ಯಾವುದೇ ತಾರತಮ್ಯವಿಲ್ಲದೆ ಸಾರ್ವಜನಿಕರಿಗೆ ಸದುಪಯೋಗಪಡಿಸಿಕೊಳ್ಳಲಾಗುವುದು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಬೇಲಾಳು ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಆಯೋಜಿಸಿದ್ದ ಸಾಮಾಜಿಕ ಲೆಕ್ಕ ಪರಿಶೋಧನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರದಿಂದ ಬರುವ ಅನುದಾನದಲ್ಲಿ ಮೂಲ ಸೌಕರ್ಯ ಒದಗಿಸಲು ಮೊದಲ ಆದ್ಯತೆ ನೀಡಲಾಗುವುದು. ಸರ್ಕಾರದ ನಿಯಮದಡಿ ಜನರಿಗೆ ಬೇಕಾದ ಸೌಕರ್ಯ ಕಲ್ಪಿಸಲಾಗುವುದು ಎಂದರು.
ಸಾಮಾಜಿಕ ಲೆಕ್ಕ ಪರಿಶೋಧಕ ಯೋಗೇಶ್ ಮಾತನಾಡಿ, ಗ್ರಾಮ ಪಂಚಾಯಿತಿಗೆ ಬರುವ ಅನುದಾನಗಳನ್ನು ಸರ್ಕಾರದ ನಿಯಮಾನುಸಾರ ಬಳಿಸಿಕೊಂಡು ಜನಪರ ಕೆಲಸ ನಿರ್ವಹಿಸಬೇಕು. 15ನೇ ಹಣಕಾಸು ಮತ್ತು ಎನ್‌ಆರ್‌ಐಜಿ ಕೆಲಸಕ್ಕೆ ಸಂಬಂಧಿಸಿದಂತೆ ಯಾವುದಾದರೂ ಲೋಪ ಕಂಡು ಬಂದಲ್ಲಿ ಸಾರ್ವಜನಿಕರಿಗೆ ಪ್ರಶ್ನಿಸುವ ಹಕ್ಕಿದೆ ಎಂದರು.
ಗ್ರಾಮ ಪಂಚಾಯಿತಿಯಲ್ಲಿ 2025-26ನೇ ಸಾಲಿನ 15ನೇ ಹಣಕಾಸಿನಲ್ಲಿ 31 ಕಾಮಗಾರಿಗಳಿಗೆ 74.27 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪಶುಸಂಗೋಪನೆ ಸಹಾಯಕ ನಿರ್ದೇಶಕ ಸೋಮಯ್ಯ, ಪಂಚಾಯಿತಿ ಆಡಳಿತ ಅಧಿಕಾರಿ ಗುರುಬಸವರಾಜ್, ಇಂಜಿನಿಯರ್ ರಕ್ಷಿತ್, ಕೃಷಿ ಇಲಾಖೆಯ ಮಹೇಶ್, ಕಾರ್ಯದರ್ಶಿ ಗಣೇಶ್ ಇತರರು ಇದ್ದರು.