15 ದಿನಗಳೊಳಗೆ ನಿವೇಶನ ಹಸ್ತಾಂತರಿಸಲಿ

ಇಂಟೆಕ್ ರಾಜು
ಇಂಟೆಕ್ ರಾಜು
Published on
ಹುಣಸೂರು: ಆಶ್ರಯ ಸಮಿತಿ ವತಿಯಿಂದ 22 ವರ್ಷಗಳ ಹಿಂದೆ ಆಯ್ಕೆಯಾಗಿ ಹಕ್ಕುಪತ್ರ ಹೊಂದಿರುವ 870 ಫಲಾನುಭವಿಗಳಿಗೆ ಮುಂದಿನ 15 ದಿನಗಳೊಳಗೆ ನಿವೇಶನ ಗುರುತಿಸಿ ಹಸ್ತಾಂತರಿಸುವ ಕಾರ್ಯವನ್ನು ನಗರಸಭೆ ನಡೆಸದಿದ್ದರೆ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಸಮಿತಿ ಉಪಾಧ್ಯಕ್ಷ ಇಂಟೆಕ್ ರಾಜು ಎಚ್ಚರಿಸಿದರು.
ಮೂವತ್ತು ವರ್ಷಗಳಿಂದ ನಗರ ವ್ಯಾಪ್ತಿಯ ಸಾವಿರಾರು ಬಡಕುಟುಂಬಗಳಿಗೆ ನಗರಸಭೆ ವತಿಯಿಂದ ಒಂದೇ ಒಂದು ನಿವೇಶನ ಹಂಚಿಕೆ ಮಾಡಿಲ್ಲ. 15 ವರ್ಷಗಳ ಕಾಲ ಕ್ಷೇತ್ರದ ಶಾಸಕರಾಗಿ, ಆಶ್ರಯ ಸಮಿತಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರಾಗಲಿ, ಹಾಲಿ ಶಾಸಕ ಜಿ.ಡಿ.ಹರೀಶ್‌ಗೌಡ ಅವರಾಗಲಿ ಬಡಜನರಿಗೆ ಶಾಶ್ವತ ಸೂರು ಕಲ್ಪಿಸುವತ್ತ ಗಮನಹರಿಸದಿರುವುದು ವಿಷಾದನೀಯ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ನಗರಸಭೆ ಪೌರಾಯುಕ್ತೆ ಎಂ.ಮಾನಸಾ, ತಾಲೂಕಿನ ಬಡಕುಟುಂಬಗಳ ಕುರಿತು ಕಾಳಜಿ ವಹಿಸಲಿಲ್ಲ. ಆಶ್ರಯ ಸಮಿತಿ ಸಭೆಗಳು ಪ್ರಕರಣವನ್ನು ಮುಂದೂಡುವ ನಿರ್ಣಯ ತೆಗೆದುಕೊಂಡವೇ ಹೊರತು ಜಾರಿಗೊಳಿಸಲು ನಿರ್ಧರಿಸಲೇ ಇಲ್ಲ. ಇದೀಗ ಮೊದಲ ಹಂತವಾಗಿ 250 ಫಲಾನುಭವಿಗಳ ಬಳಿ ಅಧಿಕೃತ ಹಕ್ಕುಪತ್ರ ಇರುವುದು ಖಚಿತವಾದರೂ ಅವರಿಗಾದರೂ ನಿವೇಶನ ಗುರುತಿಸಿ ಕೊಡುವ ಕಾರ್ಯವನ್ನು ಜನಪ್ರತಿನಿಧಿಗಳು ಮಾಡದಿರುವುದು ದುರಂತ.
15 ವರ್ಷಗಳಲ್ಲಿ ನಗರಸಭೆಗೆ ಆಯ್ಕೆಯಾದ ಜನಪ್ರತಿನಿಧಿಗಳು ಕೂಡ ಸಾಮಾನ್ಯ ಸಭೆಯಲ್ಲಿ ಈ ಕುರಿತು ಒಂದು ಬಾರಿಯೂ ಚರ್ಚಿಸಿಲ್ಲ. ಇದು ನಗರದ ಜನತೆಗೆ ಮಾಡಿರುವ ಮಹಾದ್ರೋಹ. ಸಮಸ್ಯೆ ಕುರಿತು ನಾಗರಿಕ ಹಿತರಕ್ಷಣಾ ಸಮಿತಿ ಹಲವು ಬಾರಿ ಹೋರಾಟ ನಡೆಸಿದೆ. ಮುಂದಿನ 15 ದಿನಗಳೊಳಗೆ ಮೊದಲ ಹಂತದ ಫಲಾನುಭವಿಗಳಿಗಾದರೂ ನಿವೇಶನ ಗುರುತಿಸಿ ವಿತರಿಸುವ ಕಾರ್ ನಡೆಸದೆ ಹೋದಲ್ಲಿ ನಗರಸಭೆ ಮುಂಭಾಗ ಸಮಿತಿ ಸದಸ್ಯರು ಮತ್ತು ಫಲಾನುಭವಿಗಳನ್ನು ಒಳಗೊಂಡು ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಮಿತಿ ಅಧ್ಯಕ್ಷ ಸ್ವಾಮಿಗೌಡ ಮಾತನಾಡಿ, 22 ವರ್ಷಗಳ ಹಿಂದೆ ಜಿಲ್ಲಾಧಿಕಾರಿಯಿಂದ ಅನುಮೋದನೆಗೊಂಡಿರುವ ಫಲಾನುಭವಿಗಳ ಪಟ್ಟಿಯನ್ನು ಇದೀಗ ಮರು ಪರಿಶೀಲಿಸುವ ಅಗತ್ಯವೇನಿದೆ? ಅಂತೆಯೇ ಪರಿಶೀಲಿಸಿದ ನಂತರ ಖಚಿತಗೊಂಡಿರುವ 250 ಫಲಾನುಭವಿಗಳಿಗಾದರೂ ನಿವೇಶನ ನೀಡುವ ಕಾರ್ಯ ನಗರಸಭೆ ಏಕೆ ಮಾಡುತ್ತಿಲ್ಲ? ಇತ್ತೀಚೆಗೆ ನಡೆದ ಆಶ್ರಯ ಸಮಿತಿ ಸಭೆಯಲ್ಲಿನ ನಿರ್ಣಯದ ಕುರಿತು ಮಾಹಿತಿ ಕೇಳಿದರೆ ನಗರಸಭೆ ಅಧಿಕಾರಿಗಳು ನೀಡುತ್ತಿಲ್ಲ. ಶಾಸಕರನ್ನು ಕೂಡ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ವಿರುದ್ಧ ಹೋರಾಟವೊಂದೆ ದಾರಿಯಾಗಿದೆ ಎಂದರು.
ಸಮಿತಿ ಸಂಚಾಲಕ ಕೆ.ಎಸ್.ಶ್ರೀನಿವಾಸ್, ವಿಷಕಂಠ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net