ಪಿರಿಯಾಪಟ್ಟಣ: ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿದ್ದರೂ ಸಚಿವ ಕೆ.ವೆಂಕಟೇಶ್ ಅವರು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ ಆರೋಪಿಸಿದರು.
ತಾಲೂಕಿನಲ್ಲಿರುವ ಎಲ್ಲ ರಾಗಿ ಖರೀದಿ ಕೇಂದ್ರಗಳಲ್ಲೂ ತೂಕದ ಅಳತೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ 4 ಕೆ.ಜಿ.ರಾಗಿಯನ್ನು ಕಳೆಯುತ್ತಾರೆ. ರಾಗಿ ಖರೀದಿಸಲು ಲಂಚ ನೀಡಬೇಕು ಎಂದು ರೈತರು ಸಂಕಷ್ಟ ತೋಡಿಕೊಳ್ಳುತ್ತಿದ್ದಾರೆ. ತಂಬಾಕಿಗೆ ಸೂಕ್ತ ಬೆಲೆ ಸಿಗದೆ ಬೆಳೆಗಾರರ ಪರಿಸ್ಥಿತಿ ಶೋಚನೀಯವಾಗಿದೆ. ರೈತ ಸಂಘಟನೆಗಳು ತಂಬಾಕು ಮಂಡಳಿಯಲ್ಲಿ ಅಹೋರಾತ್ರಿ ಪ್ರತಿಭಟನೆ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ರೈತರೊಂದಿಗೆ ಕೈಜೋಡಿಸಬೇಕಾದ ಸಚಿವ ಕೆ.ವೆಂಕಟೇಶ್ ಮೌನವಹಿಸಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಪ್ರತಿ ವಿಚಾರಕ್ಕೂ ಕೇಂದ್ರ ಸರ್ಕಾರದ ಮೇಲೆ ಬೆಟ್ಟು ತೋರಿಸುವ ಸಚಿವರು ಜಿಎಸ್‌ಟಿ ರೂಪದಲ್ಲಿ ತಂಬಾಕಿನಿಂದ ಬರುವ ಶೇ.40 ಆದಾಯವನ್ನು ರಾಜ್ಯ ಸರ್ಕಾರ ಪಡೆಯುತ್ತಿದ್ದು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದಷ್ಟೇ ಜವಾಬ್ದಾರಿ ಇದೆ. ರಾಜ್ಯ ಸರ್ಕಾರ ರೈತರ ಕಣ್ಣೀರ ಮೇಲೆ ರಾಜಕೀಯ ಮಾಡುವುದನ್ನು ಬಿಟ್ಟು ಇಂತಹ ವಿಚಾರಗಳಲ್ಲಿ ಒಗ್ಗಟ್ಟಾಗಿ ಹೋರಾಟ ಮಾಡಿ ರೈತರಿಗೆ ನ್ಯಾಯ ಕೊಡಿಸಬೇಕಾಗಿದೆ ಎಂದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಕ್ಸ್-ರೇ ಯಂತ್ರ ಕೆಟ್ಟು ಹೋಗಿ ವರ್ಷಗಳೇ ಕಳೆದರೂ ಅದನ್ನು ಸರಿಪಡಿಸಿಲ್ಲ. ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದೆ. ವೈದ್ಯರ ಕೊರತೆ ಜತೆಗೆ ರೋಗಿಗಳಿಗೆ ವೈದ್ಯರು ಸ್ಪಂದಿಸುತ್ತಿಲ್ಲ. ಕಗ್ಗುಂಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಪರೋಕ್ಷವಾಗಿ ನನ್ನ ಮೇಲೆ ದ್ವೇಷ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹಿಂದೆ ನಮ್ಮ ನಾಯಕರಾದ ಮಾಜಿ ಶಾಸಕ ಕೆ.ಮಹದೇವ್ ಅವರು ತಾಲೂಕಿನ ಶಕ್ತಿ ದೇವತೆ ಶ್ರೀ ಮಸಣಿಕಮ್ಮ ದೇವಾಲಯದ ನಿರ್ಮಾಣಕ್ಕೆ ಮತ್ತು ಬೆಟ್ಟದಪುರ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ರಸ್ತೆ ನಿರ್ಮಾಣಕ್ಕೆ ಬಿಜೆಪಿ ಸರ್ಕಾರವಿದ್ದಾಗ ಅನುದಾನ ಮಂಜೂರು ಮಾಡಿಸಿದ್ದರು. ಈಗ ಸಚಿವ ವೆಂಕಟೇಶ್ ಅದೇ ಕಾಮಗಾರಿಗೆ ನಾನು ಅನುದಾನ ತಂದಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿ ಭೂಮಿಪೂಜೆ ನಡೆಸುತ್ತಿರುವುದು ವಿಪರ್ಯಾಸ ಎಂದು ತಿಳಿಸಿದರು.
ಪಟ್ಟಣದ ಪಾರೆಕೊಪ್ಪಲು ರಸ್ತೆಯಲ್ಲಿ ಕುವೆಂಪು ಭವನ ನಿರ್ಮಾಣಕ್ಕೆ ಮುಂದಾಗಿರುವುದು ಸ್ವಾಗತಾರ್ಹ ವಿಷಯ. ಆದರೂ ಅಲ್ಲಿರುವ ಸಮಿತಿ ಸದಸ್ಯರನ್ನು ಗಮನಿಸಿದರೆ ಅದು ಕಾಂಗ್ರೆಸ್ ಒಕ್ಕಲಿಗರ ಭವನ ನಿರ್ಮಾಣ ಎಂಬಂತಾಗಿದೆ. ನಿಜವಾಗಿ ಇವರಿಗೆ ಒಕ್ಕಲಿಗರ ಮೇಲೆ ಕಾಳಜಿ ಇದ್ದಿದ್ದರೆ ತಾಲೂಕಿನ ಎಲ್ಲ ಒಕ್ಕಲಿಗರನ್ನು ಸಭೆಗೆ ಕರೆದು ಸಮಿತಿ ಸದಸ್ಯರನ್ನು ಆಯ್ಕೆ ಮಾಡಿ ಭವನ ನಿರ್ಮಾಣಕ್ಕೆ ಮುಂದಾಗಬೇಕಿತ್ತು. ಆದರೆ, ಮಾಜಿ ಶಾಸಕ ಕೆ.ಮಹದೇವ್ ಅವರನ್ನು ಸೌಜನ್ಯಕ್ಕೂ ಕರೆಯುವ ಪ್ರಯತ್ನ ಮಾಡಿಲ್ಲ ಎಂದು ದೂರಿದರು.
ತಾಪಂ ಮಾಜಿ ಸದಸ್ಯ ಎಸ್.ರಾಮು, ಎ.ಟಿ.ರಂಗಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಕೆ.ಮಹೇಶ್, ಮುಖಂಡರಾದ ಸಿ.ಎನ್.ರವಿ, ಕೆ.ಕುಮಾರ್, ವಿದ್ಯಾಶಂಕರ್, ಕುಮಾರ್, ಗಣೇಶ್, ಅಪೂರ್ವ ಮೋಹನ್ ಹಾಜರಿದ್ದರು.