ಸಾಲಿಗ್ರಾಮ: ತಹಸೀಲ್ದಾರ್ ರುಕೀಯಾ ಬೇಗಮ್ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಪ್ರತಿಭಟನೆಗೆ ಕರೆ ನೀಡಿರುವ ಗ್ರಾಮ ಲೆಕ್ಕಿಗರ ವರ್ತನೆಯನ್ನು ಸಾರ್ವಜನಿಕರು ಮತ್ತು ದಲಿತ ಸಂಘಟನೆಗಳು ಖಂಡಿಸಿವೆ.
ಸಾಲಿಗ್ರಾಮ ತಾಲೂಕಿನ ಹಳೇ ಶಾಲೆ ಮೈದಾನದಲ್ಲಿ ಶನಿವಾರ ನಡೆದ ಸಾರ್ವಜನಿಕರ ಸಭೆಯಲ್ಲಿ ವಿರೋಧ ವ್ಯಕ್ತಪಡಿಸುವ ಮೂಲಕ ಮೇ 19 ರಂದು ನಡೆಯಲಿರುವ ಗ್ರಾಮ ಲೆಕ್ಕಿಗರ ಪ್ರತಿಭಟನೆಯಲ್ಲೇ ಅವರ ಕಾರ್ಯವೈಖರಿ ಬಗ್ಗೆ ಪ್ರಶ್ನಿಸುತ್ತೇವೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮನುಗನಹಳ್ಳಿ ದೇವರಾಜ ಮಾತನಾಡಿ, ತಹಸೀಲ್ದಾರ್ ಅವರು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಸಮಸ್ಯೆ ಹೇಳಿಕೊಂಡು ಸಾರ್ವಜನಿಕರು ಅವರ ಕಚೇರಿಗೆ ಬಂದರೆ ಅವರನ್ನು ಕೂರಿಸಿ ಮಾತನಾಡಿ ಕೆಲಸ ಮಾಡಿ ಕೊಡುವ ಭರವಸೆ ಕೊಡುತ್ತಾರೆ. ಆದರೆ ಆ ಕೆಲಸಗಳನ್ನು ವಿಳಂಬ ಮಾಡುತ್ತಿರುವುದು ಗ್ರಾಮ ಲೆಕ್ಕಿಗರು. ಇದನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗಂಗಾಧರ್, ಸೈಯದ್ ಸೌಕತ್, ಶಂಭು, ರಾಜೇಗೌಡ, ಎಸ್ ಪಿ ರವಿಕುಮಾರ್, ಗಿರೀಶ್, ಮುಶೀರ್ ಮುಕ್ತಾರ್, ಮುಬಾರಕ್ ಇತರರು ಇದ್ದರು.