ಸರಗೂರು ತಾಲೂಕಿನ ಪಟ್ಟಣದ ಪಡುವಲ ವಿರಕ್ತ ಮಠದ ಶ್ರೀ ಕಾಳ ಓಡಯ ಗುರುಗಳ ಮಹಾವಿಧ್ಯಾಪೀಠ ಗುರುಕುಲೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು, ಮಹದೇವಸ್ವಾಮಿ ಗಳು.ವಿಜಯಕುಮಾರ್.ಬಾಸ್ಕರ್.ಚಲುವಕೃಷ್ಣ.ಇತ್ತರರು ಇದ್ದರು.
ಸರಗೂರು: ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿ ಮುಂದೆ ಬರಬೇಕು. ಮಕ್ಕಳ ಬಗ್ಗೆ ಪಾಲಕರಿಗೆ ಇರುವಷ್ಟೇ ಕಾಳಜಿ ಶಿಕ್ಷಕರಿಗೂ ಇರುತ್ತದೆ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈಸೂರು ಜಿಲ್ಲಾ ನಿರ್ದೇಶಕ ವಿ. ವಿಜಯಕುಮಾರ್ ನಾಗನಾಳ ತಿಳಿಸಿದರು.
ಪಟ್ಟಣದ 11ನೇ ವಾರ್ಡಿನ ವ್ಯಾಪ್ತಿಯ ಪಡುವಲ ವಿರಕ್ತ ಮಠದ ಗುರುಕುಲೋತ್ಸವ- 2026 ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಹೆಚ್ಚಿನ ಸಮಯವನ್ನು ಶಾಲೆಯಲ್ಲಿ ಶಿಕ್ಷಕರೊಂದಿಗೆ ಕಳೆಯುತ್ತಾರೆ. ಮಕ್ಕಳ ಮೇಲೆ ಶಿಕ್ಷಕರು ಪ್ರಭಾವ ಬೀರುವುದರಿಂದ ಮಕ್ಕಳ ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಹೇಳಿದರು.
ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆ ಅಷ್ಟೇ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿ ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಶಿಕ್ಷಣದೊಂದಿಗೆ ಉತ್ತಮ ದೇಹದಾರ್ಢ್ಯ ಹಾಗೂ ಆರೋಗ್ಯ ಹೊಂದುವಂತೆ ತಿಳಿಸಿದರು.
ಮಠದ ಶ್ರೀ ಮಹದೇವಸ್ವಾಮೀಜಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಾಲೆಗಳು ಹೊಣೆಗಾರಿಕೆ
ಬಹುಮುಖ್ಯವಾದರೂ ಪಾಲಕರ ಜವಾಬ್ದಾರಿಯೂ ಅಷ್ಟೇ ಪ್ರಮುಖವಾಗಿದೆ. ವಿದ್ಯೆ ಮನುಷ್ಯನ ಬಾಳು ಬೆಳಸುತ್ತದೆ. ಎತ್ತರಕ್ಕೆ ಬೆಳದ ವ್ಯಕ್ತಿ ಸಮಾಜದ ಪ್ರಗತಿ, ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಪಟ್ಟಣ ಪಂಚಾಯತಿ ಸದಸ್ಯ ಚೆಲುವ ಕೃಷ್ಣ ಮಾತನಾಡಿ ಗ್ರಾಮಸ್ಥರು ಹಾಗೂ ದಾನಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಅಗತ್ಯ. ಪೋಷಕರು ಮಕ್ಕಳ ಪ್ರೌಢಶಿಕ್ಷಣ ಮುಗಿದ ನಂತರ ಪಿಯುಸಿ ವ್ಯಾಸಂಗಕ್ಕೆ ಪಟ್ಟಣ ಹಾಗೂ ನಗರ ಪ್ರದೇಶದ ಉತ್ತಮ ಕಾಲೇಜುಗಳಿಗೆ ಸೇರಿಸಿ ಅವರಿಗೆ ಉನ್ನತ ಶಿಕ್ಷಣ ಕೊಡಿಸುವತ್ತ ಚಿಂತನೆ ಹರಿಸಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಯೋಜನಾಧಿಕಾರಿ ವಿ ಭಾಸ್ಕರ್ ಮಾತನಾಡಿ, ಪೋಷಕರು ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಹಾಗೂ ಹವ್ಯಾಸಗಳನ್ನು ಕಲಿಸುವತ್ತ ಗಮನ ಹರಿಸಬೇಕು. ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರುವಾಗಿದ್ದು, ಉತ್ತಮ ಪರಿಸರದಲ್ಲಿ ಮಕ್ಕಳು ಬೆಳೆಯುವ ವಾತಾವರಣ ನಿರ್ಮಿಸಬೇಕು ಎಂದರು.
ಶಾಲೆಯ ಆಡಳಿತಾಧಿಕಾರಿ ಕೆ ಕೆಂಪಣ್ಣ ಶಾಲಾ ಚಟುವಟಿಕೆಗಳ ಹಾಗೂ ಶಾಲೆಯ ವರದಿಯನ್ನು ಮಂಡಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು ಮನರಂಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಶಿಕ್ಷಕಿ ಎಸ್ ಪೂಜಾ,ಕೆಂಪಣ್ಣ,ನಂದಿನಿ, ಸೌಜನ್ಯ, ಪಲ್ಲವಿ, ವೈಷ್ಣವಿ ,ಚಂದನ , ಉಮ್ಮ ಮಹೇಶ್ವರಿ, ಹರಿಪ್ರಿಯಾ, ನವೀನ್ ಕುಮಾರ್, ಶಿಕ್ಷಕ ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.