ವಾಲ್ಮೀಕಿ ಒಂದು ಸಮುದಾಯಕ್ಕೆ ಮೀಸಲಲ್ಲ

ನಂಜನಗೂಡಿನ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಶಾಸಕರಾದ ದರ್ಶನ್ ಧ್ರುವನಾರಾಯಣ, ಡಾ.ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದರು. ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಕುಂಬರಹಳ್ಳಿ ಸುಬ್ಬಣ್ಣ ಇದ್ದರು.
ನಂಜನಗೂಡಿನ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಶಾಸಕರಾದ ದರ್ಶನ್ ಧ್ರುವನಾರಾಯಣ, ಡಾ.ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದರು. ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಕುಂಬರಹಳ್ಳಿ ಸುಬ್ಬಣ್ಣ ಇದ್ದರು.
Published on
ನಂಜನಗೂಡು: ಶ್ರೀ ಮಹರ್ಷಿ ವಾಲ್ಮೀಕಿ ಅವರು ಒಂದು ಸಮುದಾಯಕ್ಕೆ ಸೇರಿದವರಲ್ಲ. ಶ್ರೀ ರಾಮಾಯಣದ ಮೂಲಕ ಇಡೀ ದೇಶದ ಎಲ್ಲ ವರ್ಗದ ಜನರಿಗೂ ಉತ್ತಮ ಸಂದೇಶವನ್ನು ನೀಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ನಗರದ ಚಾಮರಾಜನಗರ-ಮೈಸೂರು ಬೈಪಾಸ್ ರಸ್ತೆಯಲ್ಲಿರುವ ವಾಲ್ಮೀಕಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಅಡುಗೆಮನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ವಾಲ್ಮೀಕಿ ಅವರನ್ನು ಆದಿ ಕವಿ ಎಂದು ಕರೆಯುತ್ತಾರೆ. ಜಗತ್ತಿಗೆ ಮೊಟ್ಟ ಮೊದಲು ಶ್ರೀ ರಾಮಾಯಣ ಮಹಾ ಕಾವ್ಯವನ್ನು ಕೊಟ್ಟಿದ್ದಾರೆ. ಬೇಟೆಗಾರರಾಗಿದ್ದ ವಾಲ್ಮೀಕಿ ಮಹಾಕವಿಯಾದರು. ಸ್ವಂತ ಪರಿಶ್ರಮ ಇದ್ದರೆ ಏನಾದರೂ ಸಾಧಿಸಬಹುದು ಎಂಬುದನ್ನು ಇಡೀ ಜಗತ್ತಿಗೆ ತಿಳಿಸಿದರು ಎಂದರು.
ಜಗತ್ತು ಮುಂದುವರಿದಿದ್ದರೂ ಈಗಲೂ ಜಾತಿ ವ್ಯವಸ್ಥೆ ಇದೆ. ಜಾತಿ-ಭೇದ ಮಾಡುವವರನ್ನು ಖಂಡಿಸಿದರೆ ಮಾತ್ರ ಹೋಗಲಾಡಿಸಲು ಸಾಧ್ಯ. ವಾಲ್ಮೀಕಿ ಭವನ ನಿರ್ಮಾಣಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಹಲವು ಮುಖಂಡರ ಕೊಡುಗೆ ಇದೆ. ಭವನವನ್ನು ಒಂದು ವರ್ಗಕ್ಕೆ ಸೀಮಿತಗೊಳಿಸದೆ ಎಲ್ಲ ವರ್ಗದವರಿಗೂ ನೀಡಿ ಎಂದು ಹೇಳಿದರು.
ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ವಾಲ್ಮೀಕಿ ಅವರ ತತ್ವ, ಸಿದ್ಧಾಂತಗಳು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಶ್ರೀ ರಾಮಾಯಣ ಮಹಾ ಕಾವ್ಯ ಇಂದು ಕೂಡ ಜೀವಂತವಾಗಿದೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗಳಿಗೆ ಮಹತ್ವ ಬರುತ್ತದೆ. ನಂಜನಗೂಡಿನ ವಾಲ್ಮೀಕಿ ಭವನಕ್ಕೆ ಸಾಕಷ್ಟು ಇತಿಹಾಸವಿದೆ. ಎಲ್ಲ ಪಕ್ಷದ ಪ್ರಮುಖರ ಸಹಕಾರದೊಂದಿಗೆ ಇಂದು ಪೂರ್ಣಗೊಂಡಿದೆ. ತಾಲೂಕಿನ ಹಲವು ಹಳ್ಳಿಗಳಲ್ಲೂ ವಾಲ್ಮೀಕಿ ಸಮುದಾಯ ಭವನಗಳು ಬಾಕಿ ಉಳಿದುಕೊಂಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ತಂದು ಪೂರ್ಣಗೊಳಿಸಲು ಬದ್ಧನಿದ್ದೇನೆ ಎಂದರು.
ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಪರಿವರ್ತನೆ ಎಂಬುದು ಜಗದ ನಿಯಮ. ಆತ್ಮ ಕಲ್ಯಾಣದ ಜತೆಗೆ ಲೋಕಕಲ್ಯಾಣವನ್ನು ಮಾಡಿದ್ದಾರೆ. ಸರ್ಕಾರಗಳು ಎಲ್ಲ ಮಹಾತ್ಮರ ಜಯಂತಿಗಳನ್ನು ಆಚರಣೆ ಮಾಡುತ್ತಿವೆ. ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಅಧಿಕಾರಕ್ಕಾಗಿ ಹೋರಾಡುತ್ತಾನೆ. ತ್ಯಾಗವೇ ನಿಜವಾದ ಧರ್ಮ ಎಂದರು.
ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ನಗರದ ಜೂನಿಯರ್ ಕಾಲೇಜು ಮೈದಾನದಿಂದ ವಾಲ್ಮೀಕಿ ಭವನದವರೆಗೆ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.
ರಾಮು ಜಾರಕಿಹೊಳಿ, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಂಬರಹಳ್ಳಿ ಸುಬ್ಬಣ್ಣ, ರಾಮಪ್ಪ, ರಮೇಶ್, ಮೂರ್ತಿ, ಮಾಲಿನಿ, ಗಾಯತ್ರಿ, ಕುರಹಟ್ಟಿ ಮಹೇಶ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಮಾರುತಿ, ನಾಯಕರ ಸಂಘದ ಅಧ್ಯಕ್ಷ ನಾಗರಾಜು, ತಹಸೀಲ್ದಾರ್ ಶಿವಕುಮಾರ್ ಕಾಸನೂರು, ಜೆರಾಲ್ಡ್ ರಾಜೇಶ್, ನಾಯಕರ ಸಂಘದ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net