ನಂಜನಗೂಡು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಸಂಬಂಧ ನಂಜನಗೂಡು ತಾಲೂಕಿನ ತಾಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷ ಜಾಥಾ ನಡೆಸಿ ಜಾಗೃತಿ ಮೂಡಿಸಲಾಯಿತು.
ಎಲ್ಲ ಸಾರ್ವಜನಿಕರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ಸಹಕಾರ ನೀಡುವಂತೆ ಸರ್ಕಾರಿ ಶಾಲೆ ಮಕ್ಕಳು ಜಾಗೃತಿ ಫಲಕ ಹಿಡಿದು, ಘೋಷವಾಕ್ಯಗಳನ್ನು ಕೂಗುತ್ತಾ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಜಾಥಾ ನಡೆಸಿ ಅರಿವು ಮೂಡಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್ ಮತನಾಡಿ, ಮತದಾನ ಹಕ್ಕಿಗಾಗಿ ಎಲ್ಲ ಸಾರ್ವಜನಿಕರು ಎಸ್‌ಐಆರ್‌ನಲ್ಲಿ ಕಡ್ಡಾಯ ಭಾಗಿಯಾಗಬೇಕು, ಯಾವೊಬ್ಬ ಮತದಾರನು ಈ ಮತದಾರರ ಪರಿಷ್ಕರಣೆಯಿಂದ ಹಿಂದುಳಿಯಬಾರದು ಎಂದು ತಿಳಿಸಿದರು.
ಕಾರ್ಯದರ್ಶಿ ನವೀನ್, ಬಿ.ಎಲ್.ಒ ಗೌರಮ್ಮ, ನಾಗಮ್ಮ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.