ತಂಬಾಕು ಬೆಳೆಗಾರರ ಸಂಘಗಳ ಒಕ್ಕೂಟ ಪ್ರತಿಭಟನೆ

: ಕೇಂದ್ರ ಸರ್ಕಾರವು ಜಾರಿಗೊಳಿಸುತ್ತಿರುವ ಅಬಕಾರಿ ತಿದ್ದುಪಡಿ ವಿಧೇಯಕ ಹಿಂಪಡೆಯಬೇಕೆಂದು ಒತ್ತಾಯಿಸಿ ಕರ್ನಾಟಕ ತಂಬಾಕು ಬೆಳೆಗಾರರ ಸಂಘಗಳ ಒಕ್ಕೂಟದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ನಿಸರ್ಗ ಪ್ರಿಯ ಅವರ ಮೂಲಕ  ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಎಚ್.ಜಿ.ಪರಮೇಶ್, ಎಚ್.ಎ.ಚಂದ್ರು, ವಿಕ್ರಂರಾಜೇ ಅರಸ್, ವಿಶ್ವನಾಥ್, ಚಂದ್ರೇಶ್, ಮಹೇಂದ್ರ, ಕರುಣಾಕರ, ರೋಮನ್, ಮೈಲಾರಿಗೌಡ, ಅಪ್ಪಾಜಪ್ಪ, ಕೆ.ಹೊಲದಪ್ಪ, ಮುತ್ತುರಾಜು ಇದ್ದರು.
: ಕೇಂದ್ರ ಸರ್ಕಾರವು ಜಾರಿಗೊಳಿಸುತ್ತಿರುವ ಅಬಕಾರಿ ತಿದ್ದುಪಡಿ ವಿಧೇಯಕ ಹಿಂಪಡೆಯಬೇಕೆಂದು ಒತ್ತಾಯಿಸಿ ಕರ್ನಾಟಕ ತಂಬಾಕು ಬೆಳೆಗಾರರ ಸಂಘಗಳ ಒಕ್ಕೂಟದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ನಿಸರ್ಗ ಪ್ರಿಯ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಎಚ್.ಜಿ.ಪರಮೇಶ್, ಎಚ್.ಎ.ಚಂದ್ರು, ವಿಕ್ರಂರಾಜೇ ಅರಸ್, ವಿಶ್ವನಾಥ್, ಚಂದ್ರೇಶ್, ಮಹೇಂದ್ರ, ಕರುಣಾಕರ, ರೋಮನ್, ಮೈಲಾರಿಗೌಡ, ಅಪ್ಪಾಜಪ್ಪ, ಕೆ.ಹೊಲದಪ್ಪ, ಮುತ್ತುರಾಜು ಇದ್ದರು.
Published on
ಪಿರಿಯಾಪಟ್ಟಣ: ಕೇಂದ್ರ ಸರ್ಕಾರವು ಜಾರಿಗೊಳಿಸುತ್ತಿರುವ ಅಬಕಾರಿ ತಿದ್ದುಪಡಿ ವಿಧೇಯಕ ಹಿಂಪಡೆದು ತಂಬಾಕು ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ತಂಬಾಕು ಬೆಳೆಗಾರರ ಸಂಘಗಳ ಒಕ್ಕೂಟದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಎಚ್.ಜಿ.ಪರಮೇಶ್ ಮಾತನಾಡಿ, ಕೇಂದ್ರ ಸರ್ಕಾರ ಜಿಎಸ್‌ಟಿ ಘೋಷಿಸುವಾಗ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಬದಲಾಗದೆ ಹಾಗೆಯೇ ಕಾಯ್ದುಕೊಳ್ಳಲಾಗುವುದು ಎಂದು ಭರವಸೆ ನೀಡಿತ್ತು. ದೇಶಾದ್ಯಂತ ರೈತ ಸಮೂಹವು ಈ ಭರವಸೆಯನ್ನು ನಂಬಿ ಕೃಷಿ ಆರಂಭಿಸಿತು. ಆದರೆ, ಇಂದು ಕೇಂದ್ರ ಸರ್ಕಾರವು ತೆರಿಗೆಯನ್ನು ಗಣನೀಯವಾಗಿ ಹೆಚ್ಚಿಸಿರುವುದು ತಂಬಾಕು ರೈತರಿಗೆ ಜೀವನೋಪಾಯಕ್ಕೆ ಮಾರಕವಾಗಿದೆ ಎಂದರು.
ಭಾರತ ಈಗಾಗಲೇ ಗಂಭೀರವಾದ ಸಿಗರೇಟು ಕಳ್ಳ ಸಾಗಣೆ ಸವಾಲನ್ನು ಎದುರಿಸುತ್ತಿದೆ. ಜಾಗತಿಕವಾಗಿ ನಾಲ್ಕನೇ ಅತೀ ದೊಡ್ಡ ಅಕ್ರಮ ಸಿಗರೇಟು ಮಾರುಕಟ್ಟೆಯಾಗಿ ಹೊರ ಹೊಮ್ಮಿದೆ. ಅತಿಯಾದ ತೆರಿಗೆಯಿಂದಾಗಿ ಕಾನೂನು ಬದ್ಧ ಉತ್ಪನ್ನಗಳಿಗಿಂತ ಕಳ್ಳ ಸಾಗಣೆ ಮಾಡಿದ ಉತ್ಪನ್ನಗಳು ಅಗ್ಗವಾಗುತ್ತದೆ. ಇದು ಅಕ್ರಮ ಮಾರುಕಟ್ಟೆಯನ್ನು ವಿಸ್ತರಿಸುತ್ತದೆ ಮತ್ತು ಸರ್ಕಾರಕ್ಕೆ ಸಾಕಷ್ಟು ನಷ್ಟ ಉಂಟು ಮಾಡುತ್ತದೆ ಎಂದು ಹೇಳಿದರು.
ಕಳೆದ ದಶಕದಲ್ಲಿ ತಂಬಾಕು ಕೃಷಿ ಕ್ಷೇತ್ರವು ತೀವ್ರ ಏರಿಳಿತ ಕಂಡಿದೆ. ಇದೇ ಸಂದರ್ಭದಲ್ಲಿ ತಂಬಾಕಿಗೆ ಬೇಕಾಗುವ ಗೊಬ್ಬರ, ಕಾರ್ಮಿಕ ಮತ್ತು ಸಾರಿಗೆ ವೆಚ್ಚಗಳು ಗಣನೀಯವಾಗಿ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಠಾತ್ ಬೆಲೆ ಏರಿಕೆಯಿಂದ ಉಂಟಾಗುವ ಬೇಡಿಕೆಯ ಕುಸಿತವನ್ನು ತಡೆದುಕೊಳ್ಳುವ ಶಕ್ತಿ ಬೆಳೆಗಾರರಿಗೆ ಇಲ್ಲ. ಇದನ್ನು ಕೇಂದ್ರ ಸರ್ಕಾರ ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಸರ್ಕಾರ ತಕ್ಷಣ ಅಧಿಸೂಚಿತ ಅಬಕಾರಿ ದರಗಳನ್ನು ಹಿಂಪಡೆದು ಮತ್ತು ಇಡೀ ಕೃಷಿ ವ್ಯವಸ್ಥೆಯ ಮೇಲೆ ಉಂಟಾಗುವ ಹಾನಿಯನ್ನು ತಡೆದು ತೆರಿಗೆ ಹೊರೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಕ್ರಾಪ್ ಕಮಿಟಿ ಮಾಜಿ ಅಧ್ಯಕ್ಷ ಎಚ್.ಎ.ಚಂದ್ರು ಮಾತನಾಡಿ, ಕೇಂದ್ರ ಅಬಕಾರಿ ನೀತಿ 2025 ತಂಬಾಕು ಮೇಲಿನ ಉತ್ಪನ್ನ ಹಠಾತ್ ಹೆಚ್ಚಳವು ರೈತರಿಗೆ ತೀವ್ರ ಕಳವಳ ಮೂಡಿಸಿದೆ. ಫೆಬ್ರವರಿ ಒಂದರಿಂದ ಜಾರಿಗೆ ಬರುವಂತೆ ಸಿಗರೇಟ್ ಬೆಲೆ ಹೆಚ್ಚು ಮಾಡಿದ್ದು ತಂಬಾಕು ಬೆಳೆಗಾರರಿಗೆ ಮಾತ್ರ ದರವನ್ನು ಕಡಿಮೆ ಮಾಡಲಾಗಿದೆ. ಇದರಿಂದ ರೈತರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆಂಧ್ರಪ್ರದೇಶದಲ್ಲಿ ಹೆಚ್ಚುವರಿ ತಂಬಾಕಿಗೆ ದಂಡ ವಿಧಿಸಿಲ್ಲ. ಆದರೆ, ಕರ್ನಾಟಕದಲ್ಲಿ ಹೆಚ್ಚುವರಿ ತಂಬಾಕಿಗೆ ದಂಡ ವಿಧಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಿಂದ ಬಿ.ಎಂ.ರಸ್ತೆಯ ಮೂಲಕ ಕಾಲ್ನಡಿಗೆಯಲ್ಲಿ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ತಾಲೂಕು ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿ ಮನವಿ ಪತ್ರವನ್ನು ತಹಸೀಲ್ದಾರ್ ನಿಸರ್ಗ ಪ್ರಿಯ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರೈತ ಮುಖಂಡರಾದ ವಿಶ್ವನಾಥ್, ಮಹೇಂದ್ರ, ಕರುಣಾಕರ, ರೋಮನ್, ಮೈಲಾರಿ ಗೌಡ, ಅಪ್ಪಾಜಪ್ಪ, ಕೆ.ಹೊಲದಪ್ಪ, ಮುತ್ತುರಾಜು, ಶಂಕರೇಗೌಡ, ರವಿ, ವಿಕ್ರಂರಾಜೇ ಅರಸ್, ಮಹದೇವ್, ಚಂದ್ರೇಶ್, ಮಹೇಂದ್ರ, ರಮೇಶ್, ಮಹೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net