

ಹುಣಸೂರು:
ಭೂ ರಹಿತ ಲಕ್ಷಾಂತರ ಕುಟುಂಬಗಳಿಗೆ ಭೂಮಿ ಕಲ್ಪಿಸಿದ, ಶೋಷಿತ, ಅಲೆಮಾರಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ಪರಿಶಿಷ್ಟ ಸಮುದಾಯಗಳಿಗೆ ಶಕ್ತಿ ತುಂಬಿದ, ರಾಜಕೀಯ ಅಧಿಕಾರ ಕಲ್ಪಿಸಿದ ದೇವರಾಜ ಅರಸು ನಮ್ಮ ನಾಡಿನ ಆಸ್ತಿ, ಅಸ್ಮಿತೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಬಣ್ಣಿಸಿದರು.
ಹುಣಸೂರಿನ ಅರಸು ಭವನ ನನೆಗುದಿಗೆ ಬಿದ್ದಿರುವ ಪತ್ರಿಕಾ ವರದಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದ ಮೇಲೆ ಒತ್ತಡ ಹಾಕಿ ಒಂದು ಕೋಟಿ ರೂ. ಅನುದಾನದಡಿ ಒಳಾಂಗಣ ಸೇರಿದಂತೆ ಎಲ್ಲ ಕಾಮಗಾರಿಗಳು ಮುಗಿದಿದೆ. ಮುಂಭಾಗದ ಆವರಣದಲ್ಲಿ ಇಂಟರ್ ಲಾಕ್, ಪಾರ್ಕ್ ಹಾಗೂ ಉದ್ಯಾನವನ ನಿರ್ಮಿಸಲು ಒಂದು ಕೋಟಿ ರೂ. ಅಗತ್ಯವಿದ್ದು, ಸರ್ಕಾರದಿಂದ ಮಂಜೂರು ಮಾಡಿಸಿ ಉದ್ಘಾಟನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
225 ಕೋಟಿ ರೂ. ವೆಚ್ಚದಡಿ ಉಂಡವಾಡಿ ಯೋಜನೆ ಮೂಲಕ 170 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ, ಮರೂರು ಮತ್ತು ಕೆ.ಎಂ.ವಾಡಿ ನಾಲಾ ಆಧುನೀಕರಣ ಯೋಜನೆ ಸಾಕಾರಗೊಳ್ಳುತ್ತಿದೆ. 71ಕೋಟಿ ವೆಚ್ಚದ ನಗರದ ಯುಜಿಡಿ ಯೋಜನೆಗೆ ಒಳಚರಂಡಿ ಮಂಡಳಿ ಒಪ್ಪಿಗೆ ನೀಡಿದ್ದು, ಸಂಪುಟ ಅನುಮೋದನೆ ಕೊಡಿಸುವಂತೆ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಕೋರಲಾಗಿದೆ ಎಂದರು.