ಎಚ್.ಡಿ.ಕೋಟೆ ತಾಲೂಕಿನ ಕಾರಪುರ ಗ್ರಾಮದಲ್ಲಿ ರೆಸಾರ್ಟ್‌ಗಳ ಅಡುಗೆ ತಯಾರಕರಿಗೆ ಮತ್ತು ಸಿಬ್ಬಂದಿಗೆ ಆಯೋಜಿಸಿದ್ದ ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ತಹಸೀಲ್ದಾರ್ ಶ್ರೀನಿವಾಸ್, ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್, ಜಂಗಲ್ ಲಾಡ್ಜ್ ರೆಸಾರ್ಟ್ ಮ್ಯಾನೇಜರ್ ಕಾರ್ತಿಕ್, ವಿಶ್ವನಾಥ್ ಆರಾಧ್ಯ, ದೀಪಾ, ರಾಘವೇಂದ್ರ ಶೆಟ್ಟಿ, ರಶ್ಮಿ, ಶರಣ್ಣಪ್ಪ, ರವಿರಾಜ್, ಪ್ರತಾಪ್ ಇದ್ದರು.
ಎಚ್.ಡಿ.ಕೋಟೆ: ರೆಸಾರ್ಟ್‌ಗಳಲ್ಲಿ ಗುಣಮಟ್ಟದ ಆಹಾರ ನೀಡುವುದರ ಜತೆಗೆ ಕಡ್ಡಾಯವಾಗಿ ಸ್ವಚ್ಛತಾ ಪ್ರಮಾಣ ಪತ್ರ ಪಡೆಯಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.
ತಾಲೂಕಿನ ಕಾರಪುರ ಗ್ರಾಮದಲ್ಲಿರುವ ಜಂಗಲ್ ಲಾಡ್ಜ್ ರೆಸಾರ್ಟ್‌ನಲ್ಲಿ ಬುಧವಾರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹಾಗೂ ತಾಲೂಕು ಆಹಾರ ಸುರಕ್ಷತಾಧಿಕಾರಿಗಳ ಕಚೇರಿ ವತಿಯಿಂದ ತಾಲೂಕಿನ ಎಲ್ಲ ರೆಸಾರ್ಟ್‌ಗಳ ಅಡುಗೆ ತಯಾರಕರಿಗೆ ಮತ್ತು ಸಿಬ್ಬಂದಿಗೆ ಆಯೋಜಿಸಿದ್ದ ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೆಸಾರ್ಟ್‌ಗೆ ಬರುವ ಪ್ರವಾಸಿಗರಿಗೆ ಗುಣಮಟ್ಟದ ಆಹಾರ ನೀಡಬೇಕು. ಯಾವುದೇ ರೀತಿಯ ಕಲಬೆರಕೆ ಆಹಾರ ನೀಡಬಾರದು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯು ಗ್ರಾಹಕರಿಗೆ ಸುರಕ್ಷಿತ ಆಹಾರ ಖಚಿತಪಡಿಸಿಕೊಳ್ಳಲು ವಿಜ್ಞಾನ ಆಧಾರಿತ ಮಾನದಂಡಗಳನ್ನು ರೂಪಿಸುತ್ತದೆ. ಹಾಗಾಗಿ ಪ್ರವಾಸಿಗರಿಗೆ ಗುಣಮಟ್ಟದ ಆಹಾರ ನೀಡಬೇಕು ಎಂದರು.
ಅಡುಗೆ ಕೋಣೆಯನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಅಡುಗೆ ಮಾಡಿದ ನಂತರ ಆಹಾರವನ್ನು ಮುಚ್ಚಿಡಬೇಕು. ಜನರಿಗೆ ಕುಡಿಯಲು ಬಿಸಿ ನೀರನ್ನೇ ನೀಡಬೇಕು. ಪಾತ್ರೆಗಳನ್ನು ಶುದ್ಧವಾದ ನೀರಿನಿಂದ ತೊಳೆಯಬೇಕು ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ, ಎಲ್ಲರೂ ಕಡ್ಡಾಯವಾಗಿ ಲೈಸನ್ಸ್ ಪಡೆದು ವ್ಯಾಪಾರ ಮಾಡಬೇಕು. ಪ್ರವಾಸಿಗರಿಗೆ ಗುಣಮಟ್ಟದ ಆಹಾರ ನೀಡಿ ಯಾವುದೇ ಸಮಸ್ಯೆ ಬಾರದಂತೆ ಎಚ್ಚರವಹಿಸಬೇಕು ಎಂದರು.