ದಲಿತರ ಆಶ್ರಯ ಬಡಾವಣೆಗೆ ಸೌಕರ್ಯ ಕಲ್ಪಿಸಿ

ಹುಣಸೂರು ತಾಲೂಕು ಬಿಳಿಗೆರೆಯಲ್ಲಿ ಆಯೋಜಿಸಿದ್ದ ಕುಂದುಕೊರತೆ ಸಭೆಯಲ್ಲಿ ದಲಿತ ಕಾಲನಿಯಲ್ಲಿ ಮೂಲಸೌಕರ್ ಕಲ್ಪಿಸಲು ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಇಒ ಕೆ.ಹೊಂಗಯ್ಯ, ಮುಖಂಡರಾದ ನಿಂಗರಾಜ್ ಮಲ್ಲಾಡಿ, ಸಣ್ಣಯ್ಯ, ತಮ್ಮಣ್ಣಯ್ಯ, ಪಿಡಿಒ ಶೀಲಾ ಇತರರಿದ್ದರು.
ಹುಣಸೂರು ತಾಲೂಕು ಬಿಳಿಗೆರೆಯಲ್ಲಿ ಆಯೋಜಿಸಿದ್ದ ಕುಂದುಕೊರತೆ ಸಭೆಯಲ್ಲಿ ದಲಿತ ಕಾಲನಿಯಲ್ಲಿ ಮೂಲಸೌಕರ್ ಕಲ್ಪಿಸಲು ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಇಒ ಕೆ.ಹೊಂಗಯ್ಯ, ಮುಖಂಡರಾದ ನಿಂಗರಾಜ್ ಮಲ್ಲಾಡಿ, ಸಣ್ಣಯ್ಯ, ತಮ್ಮಣ್ಣಯ್ಯ, ಪಿಡಿಒ ಶೀಲಾ ಇತರರಿದ್ದರು.
Published on
ಹುಣಸೂರು: ತಾಲೂಕಿನ ಗಾವಡಗೆರೆ ಹೋಬಳಿ ಬಿಳಿಗೆರೆ ಗ್ರಾಮದ ದಲಿತರ ಆಶ್ರಯ ಬಡಾವಣೆಗೆ ಮೂಲ ಸೌಲಭ್ಯ ಕಲ್ಪಿಸುವಂತೆ ದಲಿತ ಸಂಘಟನೆ ಮುಖಂಡರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು.
ಮಂಗಳವಾರ ಗ್ರಾಮದಲ್ಲಿ ಗ್ರಾ.ಪಂ.ವತಿಯಿಂದ ಆಯೋಜಿಸಿದ್ದ ಕುಂದುಕೊರತೆ ಸಭೆಯಲ್ಲಿ ಮನವಿ ಸಲ್ಲಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ನಿಂಗರಾಜ್ ಮಲ್ಲಾಡಿ, ಶಾಸಕ ಜಿ.ಡಿ.ಹರೀಶ್‌ಗೌಡರ ನಿರ್ದೇಶನದಂತೆ ತಾಲೂಕು ಪಂಚಾಯಿತಿ ವತಿಯಿಂದ ಗ್ರಾಮದಲ್ಲಿ ಕುಂದುಕೊರತೆ ಸಭೆ ಆಯೋಜಿಸಿರುವುದು ಶ್ಲಾಘನೀಯ. ಬಿಳಿಗೆರೆ ಗ್ರಾಮದ 65 ದಲಿತ ಕುಟುಂಬಗಳಿಗೆ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಆಶ್ರಯ ಯೋಜನೆಯಡಿ ನಿವೇಶನಗಳ ಹಕ್ಕುಪತ್ರಗಳನ್ನು ಈಗಾಗಲೇ ವಿತರಣೆ ಮಾಡಲಾಗಿದೆ. ಈ ನಿವೇಶನದ ಫಲಾನುಭವಿಗಳಿಗೆ ಪಂಚಾಯಿತಿ ವತಿಯಿಂದ ಇ-ಸ್ವತ್ತು ಸಹ ನೀಡಲಾಗಿದೆ. ಆದರೆ ಹೊಸ ಬಡಾವಣೆಯಲ್ಲಿ ಗಿಡಗಂಟಿಗಳು ಬೆಳೆದು ನಿಂತು ನಿವೇಶನಗಳೇ ಕಾಣುವ ಸ್ಥಿತಿಯಲ್ಲಿಲ್ಲ. ಮೂಲ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ಬೀದಿ ದೀಪ, ಮುಂತಾದ ಸೌಲಭ್ಯಗಳಿಲ್ಲದೆ ದಲಿತ ಕುಟುಂಬಗಳು ವಾಸ ಮಾಡಲು ಆಗುತ್ತಿಲ್ಲ. ಸಂಘಟನೆ ಮತ್ತು ತಾಲೂಕು ಆದಿಜಾಂಬವ ಸಂಘವು ಕಳೆದ 10 ವರ್ಷಗಳಿಂದಲೂ ನಿರಂತರವಾಗಿ ಹೋರಾಟ ಮಾಡಿದ ಫಲವಾಗಿ ಬಿಳಿಗೆರೆ ಗ್ರಾಮದ ದಲಿತ ಕುಟುಂಬಗಳಿಗೆ ನಿವೇಶನಗಳು ಕಲ್ಪಿಸಿಕೊಡಲಾಗಿದೆ.
ಒಂದೊಂದು ಮನೆಯಲ್ಲಿ 4-5 ಮನೆಗಳು ಇಕ್ಕಟ್ಟಿನಲ್ಲಿ ವಾಸ ಮಾಡುತ್ತಿದ್ದ ದಲಿತರು ಹೊಸದಾಗಿ ಹಕ್ಕುಪತ್ರ ಕೊಟ್ಟಿದ್ದರೂ ಅದೇ ಸ್ಥಿತಿಯಲ್ಲಿ ವಾಸ ಮಾಡುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಮೂಲಸೌಲಭ್ಯಗಳಿಂದ ವಂಚಿತರಾಗಿರುವ ಬಿಳಿಗೆರೆ ಗ್ರಾಮದ ಹೊಸ ಬಡಾವಣೆಗೆ ಕೂಡಲೇ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ದಲಿತರು ಘನತೆ ಮತ್ತು ಗೌರವದಿಂದ ಬದುಕುವಂತೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಇಒ ಕೆ.ಹೊಂಗಯ್ಯ ಮನವಿ ಸ್ವೀಕರಿಸಿ ಮಾತನಾಡಿ, ಶಾಸಕರ ನಿರ್ದೇಶನದಂತೆ ಗ್ರಾಮದಲ್ಲಿ ಕುಂದುಕೊರತೆ ಸಭೆ ಆಯೋಜಿಸಲಾಗಿದ್ದು, ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಹಂತಹಂತವಾಗಿ ಪರಿಹರಿಸಲಾಗುವುದು. ಮೂಲಸೌಕರ್ಯಗಳ ಕೊರತೆಯನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ತಿಳಿಸಿದರು.
ಗ್ರಾಮೀಣ ನೀರು ಸರಬರಾಜು ಇಲಾಖೆಯ ಸಹಾಯಕ ಇಂಜಿನಿಯರ್ ರಾಜೇಂದ್ರ, ಹೌಸಿಂಗ್ ಬೋರ್ಡ್ ಅಧಿಕಾರಿ ಲೋಕೇಶ್, ಬಿಳಿಗೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೀಲಾ, ಕಾರ್ಯದರ್ಶಿ ಆನಂದ, ಪಂಚಾಯಿತಿ ನೌಕರ ಮಧು, ಬಿಳಿಗೆರೆ ಗ್ರಾಮದ ದಲಿತ ಮುಖಂಡರಾದ ಮೋಹನ, ಯ.ಸಣ್ಣಯ್ಯ, ತಮ್ಮಣ್ಣಯ್ಯ, ಪುಟ್ಟಯ್ಯ, ರಾಜಯ್ಯ, ಸಣ್ಣತಮ್ಮಯ್ಯ, ಪುಟ್ಟಯ್ಯ, ದೊಡ್ಡತಮ್ಮಯ್ಯ, ಚಂದ್ರ, ಸಣ್ಣಯ್ಯ, ಚೆಲುವರಾಜು, ರಾಮಯ್ಯ, ಹರೀಶ, ದೇವರಾಜು, ಸಂದೇಶ, ವೀರಭದ್ರಯ್ಯ, ಮಹೇಶ ಮುಂತಾದವರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net