ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 621 ಅಂಕ ಗಳಿಸಿದ ಬನ್ನೂರಿನ ಜೈಭೀಮ್ ನಗರದ ನಿವಾಸಿ ಶಿವಣ್ಣ ಮತ್ತು ಮಹದೇವಮ್ಮ ಪುತ್ರಿ ಸುಶ್ಮಿತಾಳನ್ನು ಸನ್ಮಾನಿಸಲಾಯಿತು. ಎಲ್.ಪಿ.ಮನು, ಸಿದ್ದೇಶ್ವರ, ಶಿವಕುಮಾರ್, ಬಿ.ಎಂ.ಜೈಕುಮಾರ್, ಬಿ.ಎಂ.ಮಹೇಶ್ ಉಪಸ್ಥಿತರಿದ್ದರು.
ಬನ್ನೂರು: ಕಲಿಕೆಯಲ್ಲಿ ಸಾಧನೆ ಮಾಡುವಂತ ವಿದ್ಯಾರ್ಥಿಗಳಿಗೆ ಬಡತನ ಮತ್ತು ಆರ್ಥಿಕ ಪರಿಸ್ಥಿತಿ ಅಡ್ಡಿಯಾಗಲಾರದು ಎಂದು ಕಾಂಗ್ರೆಸ್ ಮುಖಂಡ ಎಲ್.ಪಿ.ಮನು ತಿಳಿಸಿದರು.
ಪಟ್ಟಣದ ಜೈಭೀಮ್ ನಗರದ ನಿವಾಸಿ ಶಿವಣ್ಣ ಮತ್ತು ಮಹದೇವಮ್ಮ ಅವರ ಪುತ್ರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 621 ಅಂಕ ಗಳಿಸಿದ ಸುಶ್ಮಿತಾಳನ್ನು ಶುಕ್ರವಾರ ಸನ್ಮಾನಿಸಿ ಮಾತನಾಡಿದರು. ಶೈಕ್ಷಣಿಕ ಉನ್ನತಿಗೆ ನಿರಂತರ ಪರಿಶ್ರಮ ಮತ್ತು ಅಧ್ಯಯನ ಅಗತ್ಯ. ಬಡತನವನ್ನು ಲೆಕ್ಕಿಸದೆ ನಿರಂತರ ಪರಿಶ್ರಮದಿಂದ ಬಾಲಕಿ ಉತ್ತಮ ಸಾಧನೆ ಮಾಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸಾಧಿಸುವ ಛಲ, ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಗೌರವ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಬಳಿಕ ಉನ್ನತ ಸ್ಥಾನಗಳು ಸಿಗುತ್ತವೆ ಎಂದು ಹೇಳಿದರು.
ಎಂಪಿಇಡಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ದೇಶ್ವರ ಮಾತನಾಡಿ, ಬಡ ಕುಟುಂಬದ ವಿದ್ಯಾರ್ಥಿಗಳ ಸಾಧನೆ ಉಳಿದವರಿಗೆ ದಾರಿ ದೀಪವಾಗುತ್ತದೆ ಎಂದರು.
ಕಾಂಗ್ರೆಸ್ ಮುಖಂಡ ಎಲ್.ಪಿ.ಮನು ವಿದ್ಯಾರ್ಥಿನಿಗೆ 5 ಸಾವಿರ ರೂ.ನಗದು ಬಹುಮಾನ ನೀಡಿದರು. ಐಒಬಿ ಶಿವಕುಮಾರ್, ಬಿ.ಎಂ.ಜೈಕುಮಾರ್, ಬಿ.ಎಂ.ಮಹೇಶ್ ಉಪಸ್ಥಿತರಿದ್ದರು.