ಸಾಲಿಗ್ರಾಮ ತಾಲೂಕು ಮಿರ್ಲೆ ಹೋಬಳಿ ಕುಪ್ಪಳ್ಳಿ ಗ್ರಾಮಕ್ಕೆ ಮಂಜೂರಾಗಿದ್ದ ವಸತಿ ಶಾಲೆಯನ್ನು ಬೇರೆಡೆಗೆ ವರ್ಗಾಯಿಸದಂತೆ ಮಾಜಿ ಸಚಿವ ಸಾ.ರಾ.ಮಹೇಶ್ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ಸಾಲಿಗ್ರಾಮ: ತಾಲೂಕಿನ ಮಿರ್ಲೆ ಹೋಬಳಿ ಕುಪ್ಪಳ್ಳಿ ಗ್ರಾಮಕ್ಕೆ ಮಂಜೂರಾಗಿದ್ದ ಇಂದಿರಾಗಾಂಧಿ ವಸತಿ ಶಾಲೆಯನ್ನು ಸ್ಥಳಾಂತರ ಮಾಡುತ್ತಿರುವುದನ್ನು ವಿರೋಧಿಸಿ ಮಾಜಿ ಸಚಿವ ಸಾ.ರಾ.ಮಹೇಶ್ ನೇತೃತ್ವದಲ್ಲಿ ಕುಪ್ಪಳ್ಳಿ, ಮುದುಗುಪ್ಪೆ, ಮೇಲೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಾಲಿಗ್ರಾಮ ತಾಲೂಕು ಕಚೇರಿ ಎದುರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಕುಪ್ಪಳ್ಳಿಯ ಸರ್ವೇ ನಂಬರ್ 49ರಲ್ಲಿ ಅರಣ್ಯ ಇಲಾಖೆ ಸ್ಥಳದಲ್ಲಿ ಇಂದಿರಾಗಾಂಧಿ ವಸತಿ ಶಾಲೆಗೆ 10 ಎಕರೆ ಜಾಗವನ್ನು ನಾನೇ ಮಂಜೂರು ಮಾಡಿಸಿದ್ದೆ. ಆದರೆ, ಇದೇ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡದೆ 15 ಕೋಟಿ ರೂ.ವೆಚ್ಚದಲ್ಲಿ ಇಂದಿರಾಗಾಂಧಿ ವಸತಿ ಶಾಲೆಯನ್ನು ಮುಂಜನಹಳ್ಳಿ ಸಮೀಪದ ಅರಕೆರೆ ಗ್ರಾಮದಲ್ಲಿ (ಈಗಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆ ಪಕ್ಕದಲ್ಲಿ) ನಿರ್ಮಾಣ ಮಾಡಲು ಸರ್ಕಾರ ಮತ್ತು ಶಾಸಕರು ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕಾನೂನಿನಲ್ಲಿ ಅವಕಾಶವಿದ್ದರೂ ಅರಣ್ಯ ಜಾಗ ಎಂಬ ನೆಪವೊಡ್ಡಿ ಬೇರೊಂದು ಜಾಗಕ್ಕೆ ವಸತಿ ಶಾಲೆಯನ್ನು ಸ್ಥಳಾಂತರ ಮಾಡುತ್ತಿರುವುದು ಸರಿಯಲ್ಲ. ಈ ಭಾಗದ ಜನರ ವಿರೋಧವಿದೆ. ನಾನು ಅಧಿಕಾರದಲ್ಲಿದ್ದಾಗ ಎಲ್ಲ ಹೋಬಳಿಗೆ ಒಂದರಂತೆ ವಸತಿ ಶಾಲೆಗಳನ್ನು ಮಂಜೂರು ಮಾಡಿಸಿದ್ದೆ. ಗಡಿ ಭಾಗವಾದ ಕುಪ್ಪಳ್ಳಿ ಗ್ರಾಮಕ್ಕೆ ವಸತಿ ಶಾಲೆ ಮಂಜೂರಾಗಿದ್ದರಿಂದ ತಾತ್ಕಾಲಿಕವಾಗಿ ಕುಪ್ಪಳ್ಳಿಯಲ್ಲಿ ಶಾಲೆ ಆರಂಭಿಸಲಾಯಿತು. ಅರಣ್ಯ ಇಲಾಖೆ ಜಾಗದಲ್ಲಿ ಈಗಾಗಲೇ ಪ್ರೌಢಶಾಲೆ ಇರುವುದರಿಂದ ಅದೇ ಶಾಲೆಯ ಕಟ್ಟಡದ ಪಕ್ಕದಲ್ಲಿದ್ದ 10 ಎಕರೆ ಸರ್ಕಾರಿ ಜಾಗವನ್ನು ಕಾಯಂ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡಿಸಿದ್ದೆ. ಈಗ ಏಕಾಏಕಿ ಅರಣ್ಯ ಇಲಾಖೆ ಜಾಗ ತನ್ನದೆಂದು ತಗಾದೆ ತೆಗೆದಿದೆ. ಹಾಲಿ ಶಾಸಕರು ಸಮಸ್ಯೆ ಬಗೆಹರಿಸಬಹುದು. ಅವರಿಗೆ ಕಾನೂನಿನ ಪರಿಜ್ಞಾನ ಇಲ್ಲ ಎಂದು ಕಿಡಿ ಕಾರಿದರು.
ಉದ್ದೇಶಿತ ಜಾಗದಲ್ಲೇ ವಸತಿ ಶಾಲೆ ನಿರ್ಮಾಣ ಮಾಡದಿದ್ದರೆ ಹೋರಾಟ ಮಾಡಲಾಗುವುದು. ಕಂದಾಯ, ಅರಣ್ಯ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಬೇಕು. ಶಾಲೆ ನಿರ್ಮಾಣವಾದರೆ ತಾಲೂಕಿನ ಗಡಿ ಗ್ರಾಮವಾಗಿರುವ ಕುಪ್ಪಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.
ಒಕ್ಕಲಿಗರ ಸಂಘದ ಅಧ್ಯಕ್ಷ ಮಹೇಶ್, ಮುಖಂಡರಾದ ಸಾ.ರಾ.ಸತೀಶ್, ಎಸ್.ಆರ್.ಪ್ರಕಾಶ್, ಪಾಪಣ್ಣ, ಅಶೋಕ್, ಮಾದೇವ್, ಸಾ.ರಾ.ಗುರುಪ್ರಸಾದ್, ತಂದ್ರೆ ವೆಂಕಟೇಶ್, ತಿಮ್ಮಪ್ಪ, ಶೋಭಾ, ರಾಧಾ, ಸುನೀತಾ, ಭಾಗ್ಯಾ ಇದ್ದರು.