ರೈತ ಸಂಘದ ಪದಾಧಿಕಾರಿಗಳ ಪ್ರತಿಭಟನೆ

ಹುಣಸೂರು ತಾಲೂಕು ರೈತಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಹೊಸೂರು ಕುಮಾರ್, ಬೆಂಕಿಪುರ ಚಿಕ್ಕಣ್ಣ, ಉಂಡುವಾಡಿ ಸಿ.ಚಂದ್ರೇಗೌಡ, ಅಗ್ರಹಾರ ರಾಮೇಗೌಡ ಇತರರಿದ್ದರು.
ಹುಣಸೂರು ತಾಲೂಕು ರೈತಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಹೊಸೂರು ಕುಮಾರ್, ಬೆಂಕಿಪುರ ಚಿಕ್ಕಣ್ಣ, ಉಂಡುವಾಡಿ ಸಿ.ಚಂದ್ರೇಗೌಡ, ಅಗ್ರಹಾರ ರಾಮೇಗೌಡ ಇತರರಿದ್ದರು.
Published on
ಹುಣಸೂರು: ಡೀಸೆಲ್, ಪೆಟ್ರೋಲ್ ಮತ್ತು ರಸಗೊಬ್ಬರಗಳ ಬೆಲೆ ಏರಿಕೆ ಖಂಡಿಸಿ ರೈತ ಸಂಘದ ಸದಸ್ಯರು ಮತ್ತು ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಮುಂಗಾರು ಕೃಷಿ ಚಟುವಟಿಕೆಗೆಳು ಆರಂಭಗೊಂಡ ಈ ಸಂದರ್ಭದಲ್ಲಿ ರೈತರಿಗೆ ಅಗತ್ಯವಿರುವ ರಸಗೊಬ್ಬರ, ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಬರೆ ರೈತರನ್ನು ಕಂಗೆಡಿಸಿದೆ. ಅದರಲ್ಲೂ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಕೃಷಿ ಕಾರ್ಯವೇ ಬೇಡ ಎನ್ನುವ ಸ್ಥಿತಿ ತಲುಪಿದ್ದಾರೆ. ರಸಗೊಬ್ಬರಗಳಾದ ಡಿಎಪಿ, ಯೂರಿಯಾ, ಎಸ್‌ಒಪಿ ಮುಂತಾದವುಗಳ ಬೆಲೆ ಏರಿಕೆಯಿಂದಾಗಿ ಉತ್ಪಾದನಾ ವೆಚ್ಚವೂ ಗಣನೀಯವಾಗಿ ಏರಿಕೆಯಾಗಿದೆ. ರೈತರು ಸಾಲದ ಸುಳಿಗೆ ಸಿಲುಕುವಂತಾಗಿದೆ ಎಂದು ದೂರಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಪ-ಪ್ರತ್ಯಾರೋಪ ಮಾಡುತ್ತಲೇ ರೈತರನ್ನು ಬಾವಿಗೆ ತಳ್ಳುತ್ತಿವೆ. ಸರ್ಕಾರ ಕೂಡಲೇ ರಾಸಾಯನಿಕ ಗೊಬ್ಬರಗಳಿಗೆ ಇನ್ನಷ್ಟು ಸಬ್ಸಿಡಿ ನೀಡಿ ಕೈಗೆಟುಕುವ ದರದಲ್ಲಿ ರಸಗೊಬ್ಬರ ಸಿಗುವಂತೆ ಮಾಡಬೇಕು. ರಸಗೊಬ್ಬರ ಖರೀದಿಸಲು ಇತರ ಅನವಶ್ಯಕ ಗೊಬ್ಬರ, ಕೀಟನಾಶಕ ಖರೀದಿ ಕಡ್ಡಾಯಗೊಳಿಸುತ್ತಿರುವ ವರ್ತಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಡೀಸೆಲ್ ಮತ್ತು ಪೆಟ್ರೋಲ್ ದರವನ್ನು ಇಳಿಸಿ ಕಾರ್ಡ್ ಮೂಲಕ ರೈತರಿಗೆ ಆದ್ಯತೆ ಮೇಲೆ ವಿತರಿಸಬೇಕು. ರೈತರು ಬೆಳೆದ ಬೆಳೆಗಳಿಗೆ ಸ್ವಾಮಿನಾಥನ್ ವರದಿಯನ್ವಯ ವೈಜ್ಞಾನಿಕ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ ಮಾತನಾಡಿ, ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗುವ ಮೂಲಕ ಪಕ್ಕದ ಕೇರಳ ರಾಜ್ಯಕ್ಕೆ ರವಾನೆಯಾಗುತ್ತಿದೆ. ಮುಖ್ಯವಾಗಿ ಯೂರಿಯಾ ರಸಗೊಬ್ಬರ ಲಾರಿ ಗಟ್ಟಲೆ ರವಾನೆಯಾಗುತ್ತಿದ್ದು, ಈ ಕುರಿತು ಕೃಷಿ ಅಧಿಕಾರಿಗಳು ಗಮನಿಸುತ್ತಿಲ್ಲ. ಕಾಳಸಂತೆ ವ್ಯಾಪಾರ ಜೋರಾಗುವ ಮೂಲಕ ಕೃತಕ ಅಭಾವ ಸೃಷ್ಟಿಯಾಗುತ್ತಿದ್ದು ರೈತರು ದುಪ್ಪಟ್ಟು ಹಣ ತೆತ್ತು ಬಲಿಪಶುವಾಗುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ಭೂಮಾಪಕರು ಪ್ರತಿಭಟನೆ ನಡೆಸಿದ್ದು ಜಮೀನಿನ ದುರಸ್ತು, ಸರ್ವೇ ಕಾರ್ಯಗಳು ಸ್ಥಗಿತಗೊಂಡಿವೆ. ಸರ್ಕಾರ ಈ ಕುರಿತು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಉಪವಿಭಾಗಾಧಿಕಾರಿ ಕಾವ್ಯಾರಾಣಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಮುಖಂಡರಾದ ಕಿರಿಜಾಜಿ ಶಿವಶಂಕರ್, ಉಂಡುವಾಡಿ ಸಿ.ಚಂದ್ರೇಗೌಡ, ಮೋದೂರು ಶಿವಣ್ಣ, ಈಶ್ವರ, ಹರಳಹಳ್ಳಿ ಬಸವರಾಜೇಗೌಡ, ಧನಂಜಯ, ಮಹದೇವು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net