ಹುಣಸೂರು: ತಾಲೂಕಿನ ಮೋದೂರು ಗ್ರಾಮದಲ್ಲಿ ಓಕುಳಿ ಹಬ್ಬವನ್ನು ಗ್ರಾಮಸ್ಥರು ಸೋಮವಾರ ಸಂಭ್ರಮದಿಂದ ಆಚರಿಸಿದರು.
ಮಕ್ಕಳು ವೃದ್ಧರಾದಿಯಾಗಿ ಬಣ್ಣದ ಓಕುಳಿ ನೀರಲ್ಲಿ ಮಿಂದೆದ್ದರು. ಕೈಗೆ ಕಟ್ಟಿದ್ದ ನೀರಿನ ಅಂಡಿನಲ್ಲಿ(ನೀರೆರೆಚುವ ಮರದ ಮಗ್) ಹುಡುಗರು ಒಬ್ಬರಿಗೊಬ್ಬರು ನೀರು ಹೊಡೆದುಕೊಳ್ಳಲು ಪೈಪೋಟಿ ನಡೆಸಿದರು. ಗ್ರಾಮದ ತುಂಬೆಲ್ಲಾ ಅಟ್ಟಾಡಿಸಿಕೊಂಡು ಗೆಳೆಯರಿಗೆ ನೀರಿನ ಏಟಿನ ರುಚಿ ತೋರಿಸಿದರು. ಸಗಣಿ ಓಕುಳಿಯೊಂದಿಗೆ ಪ್ರಾರಂಭಗೊಂಡ ಶ್ರೀ ಬಸವೇಶ್ವರ ಸ್ವಾಮಿ ಉತ್ಸವದ ಅಂಗವಾಗಿ ನೀರಿನ ಒಕುಳಿಯಾಟವನ್ನು ಆಡಿ ಸಂತೋಷಗೊಂಡರು.
ಗ್ರಾಮದ ಗೌರಿಕೆರೆಯಿಂದ ಮಹಿಳೆಯರು ಬಿಂದಿಗೆಯಲ್ಲಿ ಗಂಗೆಗೆ ಪೂಜೆ ಸಲ್ಲಿಸಿ ನೀರನ್ನು ಹೊತ್ತು ಗ್ರಾಮದ ಬಸವೇಶ್ವರ ಸ್ವಾಮಿ ದೇವಾಲಯದ ಆವರಣಕ್ಕೆ ತಂದರು. ಮೆರವಣಿಗೆಯಲ್ಲಿ ಕೊಂಬು, ಕಹಳೆ, ಛತ್ರಿ ಛಾಮರ, ಮಂಗಳವಾದ್ಯದವರೊಂದಿಗೆ ಬಾಯಿಗೆ ಬೀಗ ಹಾಕಿಸಿಕೊಂಡವರು ಮೆರವಣಿಗೆಯಲ್ಲಿ ಬಂದರು. ಮೋದೂರು ಎಂ.ಕೊಪ್ಪಲಿನ ಜನರು ಸಿಂಗಾರಗೊಂಡ ಎತ್ತಿನ ಗಾಡಿಯಲ್ಲಿ ಡ್ರಂಗಳ ಮೂಲಕ ಕೆರೆಯಿಂದ ನೀರನ್ನು ತಂದು ದೇವಾಲಯದ ಪ್ರಾಂಗಣದ ಮುಂಭಾಗ ಸಾಲಾಗಿ ನಿಲ್ಲಿಸಿದರು.
ದೇವಾಲಯದ ಆವರಣದ ಮುಂಭಾಗವಿರುವ ಓಕುಳಿ ತೊಟ್ಟಿಗೆ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದ ನಂತರ ಹೆಂಗಳೆಯರು ತಂದಿದ್ದ ಬಿಂದಿಗೆ ನೀರಿನ್ನು ತೊಟ್ಟಿಗೆ ಹಾಕಿದರು. ನಂತರ ತೊಟ್ಟಿಯ ನೀರಿಗೆ ಅರ್ಚಕರು ಪೂಜೆ ಸಲ್ಲಿಸಿದರು. ಮೋದೂರು ಪಿ.ಕೊಪ್ಪಲು ಗ್ರಾಮಸ್ಥರು ಕರೆತಂದಿದ್ದ 500ಕ್ಕೂ ಹೆಚ್ಚು ಕುರಿಗಳನ್ನು ದೇವಾಲಯದ ಸುತ್ತ ಮೂರು ಸುತ್ತು ಪ್ರದಕ್ಷಣೆ ಹಾಕಿಸಲಾಯಿತು. ಕುರಿಗಳು ಅಡ್ಡದಿಡ್ಡ ಓಡಾಡಬಾರದೆಂದು ಗ್ರಾಮದ ಯುವಕರು ಅಲ್ಲಲಿ ಅಡ್ಡಲಾಗಿ ನಿಂತು ಕುರಿಗಳು ಜೋರಾಡಿ ಓಡಿದವು.
ನಂತರ ಎತ್ತಿನ ಗಾಡಿಯಲ್ಲಿ ಡ್ರಂಗಳಲ್ಲಿ ತಂದಿದ್ದ ನೀರನ್ನು ತೊಟ್ಟಿಗೆ ಹಾಕಲಾಯಿತು. ಅರ್ಚಕರು ಸಾಂಕೇತಿಕವಾಗಿ ಓಕುಳಿಯಾಡುವ ನಾಲ್ಕೈದು ಹುಡುಗರಿಗೆ ಪೂಜೆ ಸಲ್ಲಿಸಿ ಹೂವಿನ ಹಾರವನ್ನು ಕೊರಳಿಗೆ ಹಾಕಿ ಓಕುಳಿಯಾಡಲು ಒಪ್ಪಿಗೆ ಸೂಚಿಸಿದರು. ನಂತರ ಎಲ್ಲರೂ ನೀರನ್ನು ಬಿಂದಿಗೆಯಲ್ಲಿ ತುಂಬಿಸಿಕೊಂಡು ಒಬ್ಬರ ಮೇಲೊಬ್ಬರು ಎರಚಿಕೊಳ್ಳಲು ಪ್ರಾರಂಭಿಸಿದರು. ಮಹಿಳೆಯರು ದೂರದಲ್ಲಿ ನಿಂತು ನೋಡಿ ಸಂತಸಪಟ್ಟರೆ, ಪಡ್ಡೆ ಹುಡುಗರು ಗ್ರಾಮದ ಬೀದಿ ತುಂಬೆಲ್ಲಾ ಓಡಾಡಿಕೊಂಡು ನೀರು ಎರಚಿಕೊಂಡರು. ಓಕುಳಿಯಾಟಕ್ಕಾಗಿ ಮನೆ ಮುಂದೆ ತುಂಬಿಸಿಟ್ಟಿದ್ದ ನೀರನ್ನು ತೆಗೆದು ಎರಚಿಕೊಂಡು ಸಂತಸಪಟ್ಟರು.
ಗ್ರಾಮದ ಮುಖಂಡರಾದ ಎನ್.ಮಹದೇವಯ್ಯ, ದೊರೆಸ್ವಾಮಿಗೌಡ, ಚಿಕ್ಕಮಲ್ಲೇಗೌಡ, ಅವಿನಾಶನಾಯಕ, ಮೋದೂರು ಗ್ರಾಮ, ಮೋದೂರು ಎಂ.ಕೊಪ್ಪಲು ಮತ್ತು ಮೋದೂರು ಪಿ.ಕೊಪ್ಪಲು ಗ್ರಾಮಸ್ಥರು ಪಾಲ್ಗೊಂಡಿದ್ದರು.