ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ನನ್ನ ಮೊದಲ ಆದ್ಯತೆ

ಎಚ್.ಡಿ.ಕೋಟೆಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಶಾಸಕರನ್ನು ಸನ್ಮಾನಿಸಿದರು.
ಎಚ್.ಡಿ.ಕೋಟೆಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಶಾಸಕರನ್ನು ಸನ್ಮಾನಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅನಿಲ್ ಚಿಕ್ಕಮಾದು ಹೇಳಿಕೆ
ಎಚ್.ಡಿ.ಕೋಟೆ: ನಾನು ಶಾಸಕನಾಗಿ ಆಯ್ಕೆಯಾದಾಗಿನಿಂದ ತಾಲೂಕಿನಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಎಚ್.ಡಿ. ಕೋಟೆ ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘ ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳ ಸಂಘದಿಂದ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ತಾಲೂಕು ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಎದ್ದು ಕಾಣುತ್ತಿದ್ದು, ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಔಷಧಗಳ ವಿತರಣೆಗೆ ಬೇಡಿಕೆ ಇಡಲಾಗುವುದು. ಅಲ್ಲದೆ ಒಟ್ಟು 380 ಔಷಧಗಳ ಬೇಡಿಕೆ ಇದ್ದು 80 ಔಷಧಗಳು ಮಾತ್ರ ಸರಬರಾಜಾಗುತ್ತಿರುವುದೂ ಸಹ ನನ್ನ ಗಮನಕ್ಕೆ ಬಂದಿದೆ ಎಂದರು.
ಮಾ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಲೂಕಿಗೆ ಆಗಮಿಸುತ್ತಿದ್ದು, ಆ ಸಂದರ್ಭ ಎಲ್ಲವನ್ನೂ ಅವರೊಂದಿಗೆ ಚರ್ಚಿಸಲಾಗುವುದು. ಅಲ್ಲದೆ ನಿಮಗೂ ಸಹ ಅವರೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಲಾಗುವುದು. ಆಗ ನಿಮ್ಮ ಬೇಡಿಕೆ ಸಲ್ಲಿಸಿ ಎಂದು ತಿಳಿಸಿದರು.
ಎಚ್.ಡಿ.ಕೋಟೆ ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ರಾಮಚಂದ್ರನಾಯಕ ಮಾತನಾಡಿ, ಎಚ್.ಡಿ. ಕೋಟೆ ತಾಲೂಕು ಆರೋಗ್ಯ ಕ್ಷೇತ್ರದಲ್ಲಿ ಪ್ರಥಮ ಸ್ಥಾನದಲ್ಲಿದೆ. ಆದರೆ ಆರೋಗ್ಯ ಇಲಾಖೆಯಲ್ಲಿನ ನೌಕರರ ಸಂಖ್ಯೆ ಹೇರಳವಾಗಿ ಕಡಿಮೆಯಾಗಿದೆ ಎಂದು ಬೇಸರಿಸಿದರು.
ತಾಲೂಕು ಕೇರಳ ಗಡಿಯಲ್ಲಿರುವುದರಿಂದ ಹಾಗೂ ಅರಣ್ಯ ಪ್ರದೇಶ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ನೌಕರರು ತಾಲೂಕಿಗೆ ಬಂದು ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ ಎಂದರು.
ಇಲಾಖೆ ಸಿಬ್ಬಂದಿಗೆ ಏರ್ಪಡಿಸಿದ್ದ ವಿವಿಧ ಆಟೋಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿವಿಧ 16 ಬೇಡಿಕೆಗಳನ್ನು ಈಡೇರಿಸಬೇಕೆಂಬ ಮನವಿ ಪತ್ರವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್, ವೈದ್ಯಾಧಿಕಾರಿ ಸಂಘದ ಅಧ್ಯಕ್ಷ ಡಾ.ಶರತ್, ವೈದ್ಯರಾದ ರೋಹನ್, ಮಹದೇವಸ್ವಾಮಿ, ಕೀರ್ತಿ, ಸೋಮಣ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಜಗದೀಶ್, ಸೋಮಶೇಖರ್, ಚಂದ್ರು, ಪರಮೇಶ್, ಜಯಮ್ಮ, ಉದಯಕುಮಾರ್, ನಾಗೇಂದ್ರ, ನಿವೃತ್ತ ವೈದ್ಯ ಜಯಂತ್, ಡಿವೈಎಸ್‌ಪಿ ರವಿ, ವೃತ್ತ ನಿರೀಕ್ಷಕ ಎಸ್.ಗಂಗಾಧರ್, ಮುಖಂಡರಾದ ಮಧುಕುಮಾರ್, ಅನಿಲ್, ಸುವರ್ಣ, ಮುದ್ದುಮಲ್ಲಯ್ಯ, ಪ್ರಕಾಶ್, ನಾಗರಾಜು, ಪಾಲಾಕ್ಷ, ಎಂ.ನಾಗು, ರವಿರಾಜ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net