ಸಂಭ್ರಮದ ವೈಮಾಳಿಗೆ ಉತ್ಸವ

ವೈಭವದ ವೈಮಾಳಿಗೆ ಆಳು ಪಲ್ಲಕ್ಕಿ ಉತ್ಸವ ಮೂರ್ತಿ.
ವೈಭವದ ವೈಮಾಳಿಗೆ ಆಳು ಪಲ್ಲಕ್ಕಿ ಉತ್ಸವ ಮೂರ್ತಿ.
Published on
ಮೂಗೂರು: ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಕಡೆಯ ದಿನ ಬುಧವಾರ ವೈಮಾಳಿಗೆ ಉತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.
ಚಿಗುರು ಕಡಿಯುವ ಕಾರ್ಯಕ್ರಮದ ಮರು ದಿನ ಅಮ್ಮನವರಿಗೆ ದೇಗುಲದಲ್ಲಿ ವಿಶೇಷ ಹೂವಿನ ಅಲಂಕಾರದೊಂದಿಗೆ ಬೆಳಗ್ಗಿನ ಜಾವ ಅಭಿಷೇಕ, ವಿಶೇಷ ಪೂಜೆಗಳು ನಡೆದವು. ಅಮ್ಮನವರನ್ನು ರಾಜಗೋಪುರದ ಎದುರಿನ ಮಂಟಪದಲ್ಲಿ ಉಯ್ಯಲೆಯಲ್ಲಿದ್ದ ವೇಳೆ ಮಹಿಳೆಯರು ದರ್ಶನ ಪಡೆದು ನಮಿಸಿದರು. ಬಳಿಕ ಗ್ರಾಮದ ಬಂಡಿ ಬೀದಿಯ ನಿವಾಸಿ ಬಸವಣ್ಣ ಸುಕಂದಮ್ಮ ಪ್ರತಿ ವರ್ಷದಂತೆ ಈ ಬಾರಿಯೂ ಆಳು ಪಲ್ಲಕ್ಕಿ ಉತ್ಸವದ ಸೇವಾರ್ಥದಾರರಾಗಿ ಧಾರ್ಮಿಕ ಕಾರ್ಯ ನೇರವೇರಿಸಿದರು.
ಬೆಳಗ್ಗೆ 11 ಗಂಟೆಗೆ ವಿವಿಧ ಹೂವಿನಿಂದ ಅಲಂಕೃತಗೊಂಡ ಸೇವಕಿಯರ ಪಲ್ಲಕ್ಕಿಯಲ್ಲಿ ಅಮ್ಮನವರನ್ನು ಕೂರಿಸಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ತಮಟೆ, ವಾದ್ಯ ಗೋಷ್ಠಿ, ಗೊರವನ ಕುಣಿತ ದೊಂದಿಗೆ ಉತ್ಸವ ಸಾಗಿತು. ದಾರಿಯುದ್ದಕ್ಕೂ ಅಮ್ಮನವರಿಗೆ ಬೆಲ್ಲದಾರತಿ, ಪೂಜೆ ಸಲ್ಲಿಸಿ ಸಿಹಿ ವಿತರಿಸಿದರು. ಅಲ್ಲಲ್ಲಿ ಫಲಾಮೃತ ಪೂಜೆ, ಸಲ್ಲಿಸಿ ಭಕ್ತಿಯಿಂದ ನಮಿಸಿದರು. ದೇವಾಲಯದ ಬಳಿ ಆಗಮಿಸುತ್ತಿದ್ದಂತೆ ಉತ್ಸವದ ಸೇವಾರ್ಥದಾರರು ಪ್ರಸಾದ ವಿತರಿಸಿದರು. ನಂತರ ಅಮ್ಮನವರ ಉತ್ಸವ ಮೂರ್ತಿಯನ್ನು ದೇಗುಲಕ್ಕೆ ಕೊಂಡೊಯ್ದುರು.
ಮಧ್ಯಾಹ್ನ 3.30ರಲ್ಲಿ ಅಮ್ಮನವರ ಉತ್ಸವ ಮೂರ್ತಿಗೆ ವಿವಿಧ ಬಗೆಯ ಹೂವಿನಿಂದ ವಿಶೇಷ ಅಲಂಕಾರದೊಂದಿಗೆ ದೇಗುಲದ ಸುತ್ತ 12 ಸುತ್ತು ಪ್ರದಕ್ಷಿಣೆಯೊಂದಿಗೆ ಉತ್ಸವ ಸಾಗಿತು. ಭಕ್ತರು ಇಷ್ಟಾರ್ಥ ಈಡೇರಲೆಂದು ವೀಳ್ಯದೆಲೆ, ಹೂ, ಹಣ್ಣನ್ನು ಅರ್ಪಿಸಿದರು.
ವೈಮಾಳಿಗೆಯ ಕೊನೆಯ ಸುತ್ತಿನಲ್ಲಿ ಅಮ್ಮನವರ ಅನುಗ್ರಹ ದೊರೆಯುವಂತೆ ಅರ್ಚಕರು ಪಂಚ ಪತ್ರ ಪುಷ್ಪಾರ್ಚನೆ ಮಾಡಿದರು.
ದೇವಾಲಯದಲ್ಲಿ ನೆರೆದಿದ್ದ ಜನತೆ ವೈಮಾಳಿಗ ಉತ್ಸವದ ವೇಳೆ ದಕ್ಷಿಣ ದ್ವಾರದ ಮೂಲಕ ಅಮ್ಮನವರು ಒಳಪ್ರವೇಶಿಸುವಾಗ ಈಡುಗಾಯಿ ಹಾಕಿ ಜೈಕಾರ ಮೊಳಗಿಸಿ ವೈಮಾಳಿಗೆ ಉತ್ಸವದ ವೈಭವವನ್ನು ಕಣ್ತುಂಬಿಕೊಂಡರು. ರಾತ್ರಿ ದೇಗುಲದಲ್ಲಿ ಅಮ್ಮನವರಿಗೆ ಪೂರ್ಣಾಭಿಷೇಕ ಹಾಗೂ ವಿಶೇಷ ಪೂಜೆಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಕುಟುಂಬ ವರ್ಗದವರು ಆಗಮಿಸಿದ್ದರು. ವೈಭವದ ವೈಮಾಳಿಗೆ ಉತ್ಸವದೊಂದಿಗೆ ಮೂಗೂರು ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net