ಒಂದೇ ಸೂರಿನಡಿ ಆದಿವಾಸಿಗಳ ಹಲವು ಸೇವೆ

ಹುಣಸೂರು ತಾಲೂಕು ನಾಗಪುರ ಹಾಡಿಯಲ್ಲಿ ನಿರ್ಮಿಸಲಾಗುತ್ತಿರುವ ವಿವಿಧೋದ್ದೇಶ ಕೇಂದ್ರಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿದರು. ಗಣೇಶ್ ಕುಮಾರಸ್ವಾಮಿ, ಕಾಂತರಾಜು, ಗಂಗಾಧರ್ ಇತರರಿದ್ದರು.
ಹುಣಸೂರು ತಾಲೂಕು ನಾಗಪುರ ಹಾಡಿಯಲ್ಲಿ ನಿರ್ಮಿಸಲಾಗುತ್ತಿರುವ ವಿವಿಧೋದ್ದೇಶ ಕೇಂದ್ರಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿದರು. ಗಣೇಶ್ ಕುಮಾರಸ್ವಾಮಿ, ಕಾಂತರಾಜು, ಗಂಗಾಧರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿಕೆ
  • ವಿವಿಧೋದ್ದೇಶ ಕೇಂದ್ರಗಳ ಪರಿಶೀಲನೆ
ಹುಣಸೂರು: ಕೇಂದ್ರ ಸರ್ಕಾರವು ಆದಿವಾಸಿ ಗಿರಿಜನರು ವಾಸಿಸುವ ಹಾಡಿಗಳಲ್ಲಿ ಒಂದೇ ಸೂರಿನಡಿ ಹಲವು ಸೇವೆಗಳನ್ನು ನೀಡುವ ಸಲುವಾಗಿ ನಿರ್ಮಿಸಲಾಗುತ್ತಿರುವ ವಿವಿಧೋದ್ದೇಶ ಕೇಂದ್ರಗಳು ಆದಿವಾಸಿಗಳು ಹಲವು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕೇಂದ್ರವಾಗಲಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.
ತಾಲೂಕಿನ ವಿವಿಧ ಹಾಡಿಗಳಲ್ಲಿ ಪ್ರಧಾನಮಂತ್ರಿ ಜನಜಾತಿ ಆದಿವಾಸಿ ಮಹಾನ್ಯಾಯ ಅಭಿಯಾನದಡಿ 5.40 ಕೋಟಿ ರೂ.ಗಳ ವೆಚ್ಚದಡಿ ನಿರ್ಮಿಸಲಾಗುತ್ತಿರುವ ವಿವಿಧೋದ್ದೇಶ ಕೇಂದ್ರ(ತಾಲೂಕಿನಲ್ಲಿ ಒಟ್ಟು 6 ಕೇಂದ್ರಗಳು)ಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ನಾಗಪುರ ಹಾಡಿಯಲ್ಲಿ ಮಾತನಾಡಿದರು.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆದಿವಾಸಿಗಳ ಸ್ವಾಭಿಮಾನಕ್ಕೆ ಪೂರಕವಾಗಿ ಆದಿವಾಸಿ ನಾಯಕ ಬಿರ್ಸಾ ಮುಂಡಾ ಜಯಂತಿ ಆಚರಣೆಯನ್ನು ಆದಿವಾಸಿ ಜನಜಾತಿ ದಿನವಾಗಿ ಅರ್ಥಪೂರ್ಣವಾಗಿ ಆಚರಿಸಲು ಆರಂಭಿಸಿತು. ಆದಿವಾಸಿಗಳ ಸಮಗ್ರ ಅಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇಂದಿಗೂ ಗಿರಿಜನರು ವಾಸಿಸುವ ಹಾಡಿಗಳಲ್ಲಿ ಮೂಲಸೌಕರ್ಯಗಳ ಕೊರತೆ, ಸರ್ಕಾರಿ ಸೇವೆಗಳ ಅಲಭ್ಯದಂತಹ ಪರಿಸ್ಥಿತಿ ಇದ್ದು, ಇದನ್ನು ನಿವಾರಿಸಲು ಆದಿವಾಸಿಗಳ ಮನೆ ಬಾಗಿಲಿಗೆ ಸೇವೆ ನೀಡುವ ಸದುದ್ದೇಶದಿಂದ ವಿವಿಧೋದ್ದೇಶ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದರು.
ಅಕ್ಷರ, ಆರೋಗ್ಯ ಸಿಗಲಿದೆ: ಪ್ರತಿ ವಿವಿಧೋದ್ದೇಶ ಕೇಂದ್ರವನ್ನು 60 ಲಕ್ಷ ರೂ.ಗಳ ವೆಚ್ಚದಡಿ ನಿರ್ಮಿಸಲಾಗುತ್ತಿದ್ದು, ಕೇಂದ್ರದಲ್ಲಿ ನಾಲ್ಕು ಕೊಠಡಿಗಳು ಒಳಗೊಂಡಿದ್ದು, ಎಎನ್‌ಎಂ ಕೇಂದ್ರ(ಆರೋಗ್ಯ) ಅಂಗನವಾಡಿ ಕೇಂದ್ರ, ಪ್ರಾಥಮಿಕ ಶಾಲಾ ಕೊಠಡಿ, ಆದಿವಾಸಿ ಸ್ವಸಹಾಯ ಸಂಘ ಇತರ ಸಂಘಗಳ ಸಭೆ ಸಮಾರಂಭಗಳಿಗಾಗಿ ಮೀಸಲಿರುವ ದೊಡ್ಡ ಹಾಲ್ ಸೇರಿದಂತೆ ಪುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಶೌಚಗೃಹಗಳ ವ್ಯವಸ್ಥೆ ಮಾಡಲಾಗಿದೆ. ನೀರು ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕೇಂದ್ರದ ಮೂಲಕ ಗಿರಿಜನರಿಗೆ ಸರ್ಕಾರಿ ಸೇವೆ ಸಿಗುವಂತೆ ಮತ್ತು ಆಸಕ್ತ ಗಿರಿಜನರು ವ್ಯಾಪಾರ, ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗುವುದು. ಆ ಮೂಲಕ ಆರ್ಥಿಕಾಭಿವೃದ್ಧಿ ಹೊಂದಲು ಅನುಕೂಲವಾಗಲಿದೆ. ಕೇಂದ್ರದ ಸದ್ಬಳಕೆಯನ್ನು ಗಿರಿಜನರು ಮಾಡಿಕೊಳ್ಳಬೇಕೆಂದು ಕೋರಿದರು.
ಭೇಟಿ ವೇಳೆ ತಾಲೂಕು ಗಿರಿಜನ ಕಲ್ಯಾಣಾಧಿಕಾರಿ ಗಂಗಾಧರ್, ಮುಖಂಡರಾದ ಗಣೇಶ್ ಕುಮಾರಸ್ವಾಮಿ, ಬಿಜೆಪಿ ತಾಲೂಕು ಅಧ್ಯಕ್ಷ ಕಾಂತರಾಜು, ನಗರಮಂಡಲ ಅಧ್ಯಕ್ಷ ನಾರಾಯಣ್, ನಿರ್ಮಿತಿ ಕೇಂದ್ರದ ಎಇಇ ರಕ್ಷಿತ್ ಸೇರಿದಂತೆ ಗಿರಿಜನ ಮುಖಂಡರು, ನಾಗಪುರ ಆಶ್ರಮ ಶಾಲಾ ಮಕ್ಕಳು ಮತ್ತು ನಿವಾಸಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net