ಕಪ್ಪುಪಟ್ಟಿ ಧರಿಸಿ ಕೆಪಿಟಿಸಿಎಲ್ ನೌಕರರ ಪ್ರತಿಭಟನೆ

ಸರಗೂರು ಪಟ್ಟಣದ ಕೆಇಬಿ ಕಚೇರಿ ಮುಂಭಾಗದಲ್ಲಿ ವಿದ್ಯುತ್ ಕ್ಷೇತ್ರದ ಖಾಸಗಿಕರಣವನ್ನು ವಿರೋಧಿಸಿ ಸಿಬ್ಬಂದಿ ಬೃಹತ್ ಪ್ರತಿಭಟನೆ ನಡೆಸಿದರು.
ಸರಗೂರು ಪಟ್ಟಣದ ಕೆಇಬಿ ಕಚೇರಿ ಮುಂಭಾಗದಲ್ಲಿ ವಿದ್ಯುತ್ ಕ್ಷೇತ್ರದ ಖಾಸಗಿಕರಣವನ್ನು ವಿರೋಧಿಸಿ ಸಿಬ್ಬಂದಿ ಬೃಹತ್ ಪ್ರತಿಭಟನೆ ನಡೆಸಿದರು.
Published on
ಸರಗೂರು: ವಿದ್ಯುತ್ ಕ್ಷೇತ್ರವನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ಮುಂದಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಆಶ್ರಯದಲ್ಲಿ ನೌಕರರು, ಅಧಿಕಾರಿಗಳು ಕಪ್ಪುಪಟ್ಟಿ ಧರಿಸಿ ಪಟ್ಟಣದ ಕೆಇಬಿ ಕಚೇರಿ ಮುಂಭಾಗದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂತರ ಮಾತನಾಡಿದ ನೌಕರ ಕೃಷ್ಣಯ್ಯ, ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಿದರೆ ಗ್ರಾಹಕರಿಗೆ, ನೌಕರರ ವರ್ಗದವರಿಗೆ ಮಾರಕವಾಗಲಿದ್ದು, ಇದು ಕಾರ್ಮಿಕ ವಿರೋಧಿ ನೀತಿಯಾಗಿದೆ. ರೈತರು, ಜನಸಾಮಾನ್ಯರಿಗೆ ಹೊರೆಯಾಗಲಿದೆ. ಕೃಷಿ ಉದ್ದೇಶಕ್ಕೆ ರೈತರಿಗೆ ನೀಡುತ್ತಿರುವ ಉಚಿತ ವಿದ್ಯುತ್‌ಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಬಡವರಿಗೆ ನೀಡುತ್ತಿರುವ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಉಚಿತ ವಿದ್ಯುತ್‌ಗೆ ಕಡಿವಾಣ ಬೀಳುವ ಸಾಧ್ಯತೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಥಮ ದರ್ಜೆ ಗುತ್ತಿಗೆದಾರ ರಾಘವೇಂದ್ರ ಮಾತನಾಡಿ, ವಿದ್ಯುತ್ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ 60 ಸಾವಿರಕ್ಕೂ ಹೆಚ್ಚು ನೌಕರರು ಹಾಗೂ ಈ ಸಂಸ್ಥೆ ಕಟ್ಟಿ ಬೆಳಸಿದ 40 ಸಾವಿರ ಪಿಂಚಣಿದಾರರಿಗೆ ತೊಂದರೆಯಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣ ಮಾಡಬಾರದು ಎಂದು ಆಗ್ರಹಿಸಿದರು.
ವಿದ್ಯುತ್ ಕ್ಷೇತ್ರವು ಈಗ ಸಂಪೂರ್ಣ ಖಾಸಗೀಕರಣವಾಗುತ್ತಿದೆ. ಈ ಜನವಿರೋಧಿ ನೀತಿಯ ವಿರುದ್ಧ ದೇಶದಾದ್ಯಂತ ಬಳಕೆದಾರರೆಲ್ಲರೂ ಚಳವಳಿ ಪ್ರಾರಂಭಿಸಬೇಕು ಎಂದು ಕರೆ ನೀಡಿದರು.
ವಿದ್ಯುತ್ ಕ್ಷೇತ್ರದಲ್ಲಿನ ಸುಧಾರಣೆಗಳಿಗಾಗಿ ಖಾಸಗಿ ವಲಯದ ಮೇಲೆ ಅತಿಯಾಗಿ ಅವಲಂಬಿತವಾಗುವುದು ದೇಶಕ್ಕೆ ಒಳ್ಳೆಯದಲ್ಲ ಮತ್ತು ದೇಶಕ್ಕೆ ಸಮತೋಲಿತ ವಿಧಾನದ ಅಗತ್ಯವಿದೆ. ಭಾರತದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ವಿದ್ಯುತ್ ವಲಯದ ಸುಧಾರಣೆಗಳ ನಂತರ, ದೇಶದಲ್ಲಿ ಸಾಕಷ್ಟು ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು, ಎಟಿಸಿ ನಷ್ಟಗಳನ್ನು ಕಡಿಮೆ ಮಾಡಲು, ವಿದ್ಯುತ್ ವಲಯವನ್ನು ಚೈತನ್ಯಶೀಲ, ಕಾರ್ಯಸಾಧ್ಯ ಮತ್ತು ಲಾಭದಾಯಕವಾಗಿಸಲು, ಕಡಿಮೆ ಸುಂಕ ಮತ್ತು ಉತ್ತಮ ಗ್ರಾಹಕ ಸೇವೆಗಳ ಮೂಲಕ ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯಲ್ಲಿ ಸ್ಪರ್ಧೆಯ ಪ್ರಯೋಜನಗಳನ್ನು ತರಲು ಅದು ವಿಫಲವಾಗಿದೆ ಎಂದರು.
ಎಇಇ ರಮೇಶ್, ಸಹಾಯಕ ಇಂಜಿನಿಯರ್ ಆಶೋಕ್, ಕೆಇಬಿ ಇಲಾಖೆ ಗುತ್ತಿಗೆದಾರ ಕೆಂಪರಾಜು, ಪ್ರಕಾಶ್, ಕೆಂಗಣ್ಣ, ದೊರೆಸ್ವಾಮಿ, ಶ್ರೀಕಂಠ, ಸಿಬ್ಬಂದಿ ಅಜಿತ್, ಶಿವಕುಮಾರ್, ರಮೇಶ್, ಶಂಭು, ಸನ್ನಿ, ಮಹದೇವ, ದೇವಶಟ್ಟಿ, ಹರಿಣಿ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net