ಹುಣಸೂರು ತಾಲೂಕು ಕಣಗಾಲು ಸರ್ಕಾರಿ ಶಾಲೆಯ ಇಕೋ ಕ್ಲಬ್ ವತಿಯಿಂದ ಆಯೋಜಿಸಿದ್ದ ಕ್ಷೇತ್ರ ಅಧ್ಯಯನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೃಷಿ ಪದ್ಧತಿ ಕುರಿತು ಮಾಹಿತಿ ಪಡೆದರು. ಕೆ.ಪಿ.ರಾಘವೇಂದ್ರ, ಶ್ರೀನಿವಾಸ್, ಹರೀಶ್, ಭವಾನಿ, ಮಮತಾ ಇದ್ದರು.
ಹುಣಸೂರು: ಆಧುನಿಕ ಕೃಷಿ ಪದ್ಧತಿಯೊಂದಿಗೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಕೃಷಿ ಇಲಾಖೆಯ ಜಲಾನಯನ ಸಹಾಯಕ ಕೆ.ಪಿ.ರಾಘವೇಂದ್ರ ತಿಳಿಸಿದರು.
ತಾಲೂಕಿನ ಕರಣಕುಪ್ಪೆ ಕ್ಲಸ್ಟರ್ ವ್ಯಾಪ್ತಿಯ ಕಣಗಾಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್ ವತಿಯಿಂದ ಆಯೋಜಿಸಿದ್ದ ಕ್ಷೇತ್ರ ಅಧ್ಯಯನ ಕಾರ್ಯಕ್ರಮದಡಿ ರೈತ ಮಹೇಶ್‌ಕುಮಾರ್‌ರ ತೋಟಕ್ಕೆ ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಿದ್ದ ವೇಳೆ ಕೃಷಿ ಪದ್ಧತಿ ಕುರಿತು ಮಾಹಿತಿ ನೀಡಿದರು. ಸಾವಯವ ಕೃಷಿ ಭೂಮಿಯನ್ನು ಉಳಿಸುತ್ತದೆ. ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್ ಗೊಬ್ಬರ, ಜೀವಾಮೃತ ಬಳಕೆ, ಎರೆಗೊಬ್ಬರ, ಎರೆ ಜಲ ಬಳಕೆ ಇವೇ ಮುಂತಾದವು ಸಾವಯವ ಕೃಷಿಯ ಪದ್ಧತಿಗಳು. ಅನ್ನ ಕೊಡುವ ಭೂಮಿಯನ್ನು ಆರೋಗ್ಯಪೂರ್ಣವಾಗಿರಿಸಿಕೊಳ್ಳಲು ಈ ಕ್ರಮಗಳನ್ನು ಅನುಸರಿಸುವುದು ಅಗತ್ಯ. ರಾಸಾಯನಿಕ ಗೊಬ್ಬರಗಳ ಹಿತಮಿತ ಬಳಕೆ, ಆಧುನಿಕ ಕೃಷಿ ಪದ್ಧತಿ ಯಂತ್ರಗಳು, ಸಲಕರಣೆಗಳ ಪೂಕರ ಬಳಕೆಯೂ ಗುಣಮಟ್ಟ ಮತ್ತು ಇಳುವರಿ ಹೆಚ್ಚಳಕ್ಕೆ, ನೀರಿನ ಸದ್ಬಳಕೆಗೆ ಅನುಕೂಲವಾಗಲಿದೆ ಎಂದರು.\
ಮಸಾಲೆ ಪದಾರ್ಥಗಳ ಗಿಡಗಳಾದ ಲವಂಗ, ಚಕ್ಕೆ, ಮೆಣಸು, ಏಲಕ್ಕಿ, ಜಾಯಿಕಾಯಿ, ಪತ್ರೆ ಗಿಡಗಳ ಕುರಿತು ಮಾಹಿತಿ ನೀಡಿದರು. ಮುಖ್ಯ ಶಿಕ್ಷಕ ಶ್ರೀನಿವಾಸ್, ಶಿಕ್ಷಕರಾದ ಧರ್ಮರಾಜ್, ಹರೀಶ್, ಭವಾನಿ, ಮಮತಾ, ತೋಟದ ಮಾಲೀಕ ಮಹೇಶ್ ಕುಮಾರ್ ಇದ್ದರು.