ಎಚ್.ಡಿ.ಕೋಟೆ ಬಸ್ ನಿಲ್ದಾಣದ ಮುಂಭಾಗದಲ್ಲಿ ರಸ್ತೆ ಸುರಕ್ಷತಾ ಅಂಗವಾಗಿ ಬೈಕ್ ಸವಾರರಿಗೆ ಶಾಸಕ ಅನಿಲ್ ಚಿಕ್ಕಮಾದು ಹೆಲ್ಮೆಟ್ ವಿತರಿಸಿದರು. ಪೊಲೀಸ್ ಇನ್‌ಸ್ಪೆಕ್ಟರ್ ಗಂಗಾಧರ್, ಪುರಸಭೆ ಮುಖ್ಯಾಧಿಕಾರಿ ಪಿ.ಸುರೇಶ್, ಪುರಸಭೆ ಮಾಜಿ ಸದಸ್ಯರಾದ ಎಚ್.ಸಿ.ನರಸಿಂಹಮೂರ್ತಿ, ಮಧುಕುಮಾರ್, ಸೌಮ್ಯಾ ಮಂಜುನಾಥ್, ವನಸಿರಿ ಉಮೇಶ್, ಲಾರಿ ಪ್ರಕಾಶ್, ಲಾಟರಿ ನಾಗರಾಜು, ಪೊಲೀಸ್ ಸಿಬ್ಬಂದಿ ಯೋಗೇಶ್, ಸೈಯದ್ ಕಬೀರ್ ಹುದ್ದೀನ್, ಮಹೇಶ್, ಕೃಷ್ಣಮೂರ್ತಿ ಇದ್ದರು.
ಎಚ್.ಡಿ.ಕೋಟೆ: ರಸ್ತೆ ಸುರಕ್ಷತೆ ಬಗ್ಗೆ ಪೊಲೀಸರ ಜತೆ ಸಾರ್ವಜನಿಕರು ಕೈ ಜೋಡಿಸಿದಾಗ ಮಾತ್ರ ಅಪಘಾತಗಳನ್ನು ನಿಯಂತ್ರಣ ಮಾಡಲು ಸಾಧ್ಯ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಪೊಲೀಸ್ ಇಲಾಖೆ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಮಂಗಳವಾರ ವಾಹನ ಸವಾರರಿಗೆ ಕಾನೂನು ಅರಿವು ಮತ್ತು ಹೆಲ್ಮೆಟ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ ವಾರಕ್ಕೆ ಎರಡಾದರೂ ರಸ್ತೆ ಅಪಘಾತದಲ್ಲಿ ಮೃತಪಡುತ್ತಿರುವ ಪ್ರಕರಣ ದಾಖಲಾಗುತ್ತಿದೆ. ಹ್ಯಾಂಡ್‌ಪೋಸ್ಟ್ ವೃತ್ತದಿಂದ ಪಟ್ಟಣದ ಗದ್ದಿಗೆ ವೃತ್ತದವರೆಗೆ ಬೆಳಗ್ಗೆ ಮತ್ತು ಸಂಜೆ ವೇಳೆ ವಾಹನಗಳು ರಸ್ತೆಯಲ್ಲೇ ನಿಂತಿರುತ್ತವೆ. ಇದರಿಂದ ರಸ್ತೆ ದಾಟಲು ಶಾಲಾ- ಕಾಲೇಜು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಜತೆಗೆ ಸವಾರರು ವೇಗವಾಗಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸುತ್ತದೆ. ಹಾಗಾಗಿ ಪ್ರತಿ ತಿಂಗಳು ರಸ್ತೆ ಸುರಕ್ಷತ ಕಾರ್ಯಕ್ರಮ ಮಾಡಿ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಹ್ಯಾಂಡ್‌ಪೋಸ್ಟ್‌ನಿಂದ ಶಾಂತಿಪುರ ಗ್ರಾಮದವರೆಗೆ ಡಬಲ್ ರೋಡ್ ನಿರ್ಮಾಣ ಮಾಡಲು ಸರ್ಕಾರದಿಂದ 9 ಕೋಟಿ ರೂ. ಬಿಡುಗಡೆ ಆಗಿದ್ದು, ಮುಂದಿನ ದಿನಗಳಲ್ಲಿ ಲೋಕೋಪಯೋಗಿ ಇಲಾಖೆ ಸಚಿವರನ್ನು ಕರೆಸಿ ಭೂಮಿಪೂಜೆ ನೆರವೇರಿಸಲಾಗುವುದು. ಜತೆಗೆ ಪಾದಚಾರಿ ಮಾರ್ಗಕ್ಕೆ ಇಂಟರ್‌ಲಾಕ್ ಸಿಸ್ಟಮ್ ಅಳವಡಿಸಲು ಒಂದು ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಪಟ್ಟಣದಲ್ಲಿ ರಸ್ತೆ ಬದಿಯಲ್ಲಿ ವ್ಯಾಪಾರಿಗಳು ತಳ್ಳುಗಾಡಿಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ನಿಯಮ ಮೀರಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಆದ್ದರಿಂದ ಅಂತಹ ತಳ್ಳುಗಾಡಿ ವ್ಯಾಪಾರಿಗಳನ್ನು ಒಂದೆಡೆ ಇಟ್ಟು ವ್ಯಾಪಾರ ಮಾಡಲು ಅನುವಾಗುವಂತೆ ಮಾಡಲಾಗುವುದು ಎಂದರು.
ವಾಹನ ಚಲಾವಣೆ ಬಗ್ಗೆ ಮಾತನಾಡಿದ ಅವರು ಪ್ರಯಾಣಿಕರು ಸಂಚಾರ ಮಾಡುವಾಗ ದ್ವಿಚಕ್ರ ಚಾಲಕರು ಹೆಲ್ಮೆಟ್ ಧರಿಸಬೇಕು. ಕಾರುಗಳಲ್ಲಿ ಸೀಟ್ ಬೆಲ್ಟ್ ಧರಿಸಿ ವಾಹನ ಚಲಾವಣೆ ಮಾಡಬೇಕು ಎಂದು ತಿಳಿಸಿದರು.
ಪೊಲೀಸ್ ಇನ್‌ಸ್ಪೆಕ್ಟರ್ ಗಂಗಾಧರ್ ಮಾತನಾಡಿ, ಪ್ರತಿ ದಿನ ದೇಶವ್ಯಾಪಿ 1400 ಅಪಘಾತಗಳು ಸಂಭವಿಸುತ್ತಿದ್ದು, ಇದರಲ್ಲಿ 40 ಜನರು ಸಾವಿಗೀಡಾಗುತ್ತಿದ್ದಾರೆ. ಹೀಗೆ ಸಾವಿಗೀಡಾದವರಲ್ಲಿ ಬಹುತೇಕ 16 ರಿಂದ 25 ವರ್ಷದವರೇ ಹೆಚ್ಚಾಗಿದ್ದು, ಪ್ರಮುಖವಾಗಿ ರಸ್ತೆ ನಿಯಮಗಳನ್ನು ಪಾಲಿಸದೆ ಇರುವುದು ಕೂಡ ಅಪಘಾತಗಳು ಸಂಭವಿಸಲು ಪ್ರಮುಖ ಕಾರಣವಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಪಿ.ಸುರೇಶ್, ಪುರಸಭೆ ಮಾಜಿ ಸದಸ್ಯರಾದ ಎಚ್.ಸಿ.ನರಸಿಂಹ ಮೂರ್ತಿ, ಮಧುಕುಮಾರ್, ಸೌಮ್ಯಾ ಮಂಜುನಾಥ್, ವನಸಿರಿ ಉಮೇಶ್, ಲಾರಿ ಪ್ರಕಾಶ್, ಲಾಟರಿ ನಾಗರಾಜು, ಪೊಲೀಸ್ ಸಿಬ್ಬಂದಿ ಯೋಗೇಶ್, ಸೈಯದ್ ಕಬೀರ್ ಹುದ್ದೀನ್, ಮಹೇಶ್, ಕೃಷ್ಣಮೂರ್ತಿ ಇದ್ದರು.