2.07 ಲಕ್ಷ ಅರ್ಹ ಮತದಾರರ ಗುರುತು

ತಿ.ನರಸೀಪುರದ ಮಹದೇವಪ್ಪ ಸ್ಮಾರಕ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತ ಕಾರ್ಯಾಗಾರದಲ್ಲಿ ತಹಸೀಲ್ದಾರ್ ಟಿ.ಜೆ.ಸುರೇಶಾಚಾರ್ ಮಾತನಾಡಿದರು. ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕುರಿತು ಬಿಎಲ್‌ಒ ,ಮೇಲ್ವಿಚಾರಕರು, ಅಧಿಕಾರಿಗಳು, ಪಕ್ಷದ ಮುಖಂಡರು ಹಾಗೂ ಮತದಾರರು ಇದ್ದರು.
ತಿ.ನರಸೀಪುರದ ಮಹದೇವಪ್ಪ ಸ್ಮಾರಕ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತ ಕಾರ್ಯಾಗಾರದಲ್ಲಿ ತಹಸೀಲ್ದಾರ್ ಟಿ.ಜೆ.ಸುರೇಶಾಚಾರ್ ಮಾತನಾಡಿದರು. ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕುರಿತು ಬಿಎಲ್‌ಒ ,ಮೇಲ್ವಿಚಾರಕರು, ಅಧಿಕಾರಿಗಳು, ಪಕ್ಷದ ಮುಖಂಡರು ಹಾಗೂ ಮತದಾರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಟಿ.ಜೆ.ಸುರೇಶಾಚಾರ್ ಮಾಹಿತಿ
  • 5,155 ಮಂದಿಯನ್ನು ಗುರುತಿಸುವ ಕಾರ್ಯ ಬಾಕಿ
ತಿ.ನರಸೀಪುರ: ತಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,12,735 ಮತದಾರರು ಇದ್ದು, ಇದುವರೆಗೆ 2,07,580 ಅರ್ಹ ಮತದಾರರನ್ನು ಗುರುತಿಸಲಾಗಿದೆ ಎಂದು ತಹಸೀಲ್ದಾರ್ ಟಿ.ಜೆ. ಸುರೇಶಾಚಾರ್ ತಿಳಿಸಿದರು.
ನಂಜನಗೂಡು ರಸ್ತೆಯ ಮಹದೇವಪ್ಪ ಸ್ಮಾರಕ ಭವನದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದ ಕುರಿತು ಸೋಮವಾರ ಆಯೋಜಿಸಿದ್ದ ಅಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಮತದಾರರ ಸಭೆಯಲ್ಲಿ ಮಾತನಾಡಿದರು. ಇನ್ನೂ 5,155 ಮತದಾರರನ್ನು ಗುರುತಿಸುವ ಕಾರ್ಯ ಬಾಕಿ ಇದ್ದು, ಈ ಕಾರ್ಯವನ್ನು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಮನೆ ಮನೆಗೆ ತೆರಳಿ ಕೈಗೊಳ್ಳಲಿದ್ದಾರೆ ಎಂದರು.
ಮತದಾರರ ಪಟ್ಟಿಯು ಸಮರ್ಪಕ ಹಾಗೂ ದೋಷರಹಿತವಾಗಿರಲು ಎಲ್ಲ ಮತದಾರರ ವಿವರಗಳನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬಿಎಲ್‌ಒಗಳು ಜೂನ್ ಅಂತ್ಯದೊಳಗೆ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದು, ಸಾರ್ವಜನಿಕರು ಅಗತ್ಯ ದಾಖಲೆ ಒದಗಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಮತದಾರರ ಪಟ್ಟಿಗೆ ಹೊಸದಾಗಿ ಅರ್ಹರಾಗಿರುವ ಮತದಾರರ ಹೆಸರು ಸೇರ್ಪಡೆ, ಮತದಾರರ ವಿವರಗಳ ತಿದ್ದುಪಡಿ ಹಾಗೂ ಅನರ್ಹ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವ ಕುರಿತು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಯಿತು. 18 ವರ್ಷ ವಯಸ್ಸು ಪೂರ್ಣಗೊಳಿಸಿರುವ ಎಲ್ಲ ಅರ್ಹ ನಾಗರಿಕರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ವಿಶೇಷ ಗಮನ ಹರಿಸುವಂತೆ ಸೂಚಿಸಲಾಯಿತು.
ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಯಿತು. ಮೃತರು, ಸ್ಥಳಾಂತರಗೊಂಡವರು ಹಾಗೂ ನಕಲಿ ದಾಖಲೆಗಳ ಆಧಾರದ ಮೇಲೆ ಸೇರ್ಪಡೆಯಾಗಿರುವ ಹೆಸರುಗಳನ್ನು ನಿಯಮಾನುಸಾರ ಪರಿಶೀಲಿಸಿ ಕೈಬಿಡುವಂತೆ ಸೂಚನೆ ನೀಡಲಾಯಿತು.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ನಿಖರತೆ ಮತ್ತು ಪಾರದರ್ಶಕತೆ ಕಾಪಾಡುವುದು ಅತ್ಯಂತ ಮುಖ್ಯವಾಗಿದ್ದು, ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಯಿತು. ಸಾರ್ವಜನಿಕರಿಂದ ಸಲ್ಲಿಕೆಯಾಗುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ, ಮತದಾರರಿಗೆ ಅಗತ್ಯ ಮಾಹಿತಿ ಮತ್ತು ಮಾರ್ಗದರ್ಶನ ಒದಗಿಸುವಂತೆ ಸೂಚನೆ ನೀಡಲಾಯಿತು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಚುನಾವಣಾ ಸಿಬ್ಬಂದಿ ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳು ಭಾಗವಹಿಸಿ ಪರಿಷ್ಕರಣೆ ಕಾರ್ಯದ ಪ್ರಗತಿ ಕುರಿತು ಚರ್ಚಿಸಿದರು. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಸಚಿವರ ಆಪ್ತ ಕಾರ್ಯದರ್ಶಿ ಬಸವರಾಜು, ಬಿಜೆಪಿಯ ಎನ್. ಲೋಕೇಶ್, ಜೆಡಿಎಸ್ ಮುಖಂಡ ಸೋಸಲೆ ಶಿವಕುಮಾರ್, ಬಿಎಸ್ಪಿ ಪುಟ್ಟಸ್ವಾಮಿ, ದೊಡ್ಡೇಬಾಗಿಲು ಎಂ.ಮಲ್ಲಿಕಾರ್ಜುನ ಸ್ವಾಮಿ, ಉಮಾಪತಿ , ಕೆಬ್ಬೇ ಶಿವಸ್ವಾಮಿ, ಕೊಳತ್ತೂರು ಕೆ.ಎನ್. ಕುಮಾರ್, ಚಿದರವಳ್ಳಿ ಚಂದ್ರಶೇಖರ್, ಮಹದೇವ, ಚಿನ್ನಸ್ವಾಮಿ, ಸೋಮಣ್ಣ, ಬಿಳಿಗಿರಿ ಸ್ವಾಮಿ,ಬಿ.ಎಂ. ಮನೋಹರ, ನಂದೀಶ್, ನಾಗರಾಜು, ಗುರುಪ್ರಸಾದ್, ಎಂ ಕುಮಾರ, ಶಿವರಾಜು, ಯೋಗೇಂದ್ರ ಸೇರಿದಂತೆ ವಿವಿಧ ಪಕ್ಷದ ಮುಖಂಡರುು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net