ತಿ.ನರಸೀಪುರ : ಪಟ್ಟಣದ ಆಲಗೂಡು ಬಳಿ ರಾಷ್ಟ್ರೀಯ ಹೆದ್ದಾರಿ ಕೊಳ್ಳೇಗಾಲ ಚಾಮರಾಜನಗರ ಮುಖ್ಯರಸ್ತೆಯಲ್ಲಿ ಮುಂದೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಖಾಸಗಿ ಬಸ್ ಬಳಿಕ ಎದುರಿಗೆ ಬರುತ್ತಿದ್ದ ದಂಪತಿ ಇದ್ದ ಸ್ಕೂಟರ್‌ಗೆ ಗುದ್ದಿದ ಪರಿಣಾಮ ಪತಿ ಸಾವಿಗೀಡಾಗಿದ್ದು, ಪತ್ನಿ ಹಾಗೂ ಮಗ ಗಾಯಗೊಂಡಿದ್ದಾರೆ.
ತಾಲೂಕಿನ ವಾಟಾಳು ಗ್ರಾಮದ ಲೇಟ್ ಸೀನೆಗೌಡರ ಪುತ್ರ ಮಂಜು(48) ಮೃತರು. ಪತ್ನಿ ರೂಪಾ(38) ಹಾಗೂ ಪುತ್ರ ಅಜಯ್(15) ತೀವ್ರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಳವಳ್ಳಿ ತಾಲೂಕಿನ ಪೂರಿಗಾಲಿ ಗ್ರಾಮದಲ್ಲಿರುವ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಮೇ 13 ರಂದು ಮಗಳ ಮದುವೆ ಮುಗಿಸಿಕೊಂಡು ಸ್ಕೂಟರ್‌ನಲ್ಲಿ ವಾಟಾಳು ಗ್ರಾಮಕ್ಕೆ ಮಗನ ಜತೆ ದಂಪತಿ ತೆರಳುತ್ತಿದ್ದರು. ಆಲಗೂಡು ಬಳಿ ಚೌಹಳ್ಳಿಗೆ ಹೋಗುವ ಅಡ್ಡರಸ್ತೆಗೆ ಹೊಂದಿಕೊಂಡಿರುವ ಕೆರೆಯ ಸಮೀಪ ಎದುರುಗಡೆ ಕಾರು ಬರುತ್ತಿತ್ತು. ಅದರ ಹಿಂಬದಿ ಖಾಸಗಿ ಬಸ್ ವೇಗದಿಂದ ಬಂದು ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಬಳಿಕ ತಕ್ಷಣ ಬಸ್ ಬಲಕ್ಕೆ ತಿರುಗಿ ಮುಖ್ಯ ರಸ್ತೆ ಎಡಬದಿಯಲ್ಲಿ ಬರುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನು ಸ್ಥಳೀಯರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಮಂಜು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.