ನಂಜನಗೂಡು: ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ತಲುಪಿಸುವ ಉದ್ದೇಶದಿಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ವತಿಯಿಂದ ಸ್ಪಂದನ ಆಸ್ಪತ್ರೆ ಸಹಯೋಗದಲ್ಲಿ ನಂಜನಗೂಡು ತಾಲೂಕಿನ ಚಿಕ್ಕಹೊಮ್ಮ ಗ್ರಾಮದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಪರಶಿವಮೂರ್ತಿ, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವೆ ಶ್ಲಾಘನೀಯವಾಗಿದೆ. ಆರೋಗ್ಯ, ಶಿಕ್ಷಣ, ಸ್ವಾವಲಂಬನೆ ಸೇರಿದಂತೆ ನೂರಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದು, ಗ್ರಾಮೀಣ ಜನರ ಬದುಕಿನ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಗ್ರಾಪಂ ಸದಸ್ಯ ಪ್ರಕಾಶ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ದೊರೆಯುವ ಎಲ್ಲ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳು ನಿಯಮಾನುಸಾರ ಸದುಪಯೋಗಪಡಿಸಿಕೊಳ್ಳಬೇಕು. ಯೋಜನೆಯ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಗ್ರಾಮಾಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಶಿಬಿರದಲ್ಲಿ ಸ್ಪಂದನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಬ್ದುಲ್ ಹಾಗೂ ವೈದ್ಯಕೀಯ ಸಿಬ್ಬಂದಿ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿ, ಅಗತ್ಯ ಸಲಹೆ ಹಾಗೂ ಚಿಕಿತ್ಸೆ ಕುರಿತು ಮಾರ್ಗದರ್ಶನ ನೀಡಿದರು.
ಗ್ರಾಮದ ಮುಖಂಡರಾದ ನಾಗಲಿಂಗಪ್ಪ, ದಳಪತಿ ಪುಟ್ಟಸ್ವಾಮಿ, ಮಲ್ಲಯ್ಯ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶಮಾ, ಸೇವಾ ಪ್ರತಿನಿಧಿ ಶೋಭಾಮಣಿ, ಜ್ಞಾನವಿಕಾಸ ಕೇಂದ್ರ ಹಾಗೂ ಸಂಘದ ಸದಸ್ಯರು ಮತ್ತು ಗ್ರಾಮದ ಅನೇಕ ಮಹಿಳೆಯರು ಹಾಗೂ ಗ್ರಾಮಸ್ಥರು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು.