ಸಾಲಿಗ್ರಾಮ-ಹಳ್ಳಿಮೈಸೂರು ರಸ್ತೆ ಅಭಿವೃದ್ಧಿಗೆ ಅನುದಾನ

ತಂದ್ರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ತಾಲೂಕು ಅಧಿಕಾರಿಗಳೊಂದಿಗೆ ಶಾಸಕ ಡಿ.ರವಿಶಂಕರ್ ಜನಸಂಪರ್ಕ ಸಭೆ ನಡೆಸಿದರು.
ತಂದ್ರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ತಾಲೂಕು ಅಧಿಕಾರಿಗಳೊಂದಿಗೆ ಶಾಸಕ ಡಿ.ರವಿಶಂಕರ್ ಜನಸಂಪರ್ಕ ಸಭೆ ನಡೆಸಿದರು.
Published on
ಸಾಲಿಗ್ರಾಮ: ಸಾಲಿಗ್ರಾಮ-ಹಳ್ಳಿಮೈಸೂರು ಮುಖ್ಯ ರಸ್ತೆ ಅಭಿವೃದ್ಧಿಗೆ ಮೂರು ತಿಂಗಳಲ್ಲೇ ಅನುದಾನ ನೀಡುತ್ತೇನೆ ಎಂದು ಶಾಸಕ ಡಿ.ರವಿಶಂಕರ್ ಭರವಸೆ ನೀಡಿದರು.
ತಾಲೂಕು ಆಡಳಿತ, ವಿವಿಧ ಇಲಾಖೆಗಳೊಂದಿಗೆ ಬುಧವಾರ ತಂದ್ರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಮುಂಜನಹಳ್ಳಿ ಗ್ರಾಮದಿಂದ ಮುದುಗುಪ್ಪೆ-ಕುಪ್ಪಳ್ಳಿ-ತಂದ್ರೆ ಅಂಕನಹಳ್ಳಿ ಮಾರ್ಗವಾಗಿ ಸಾಲಿಗ್ರಾಮ - ಹಳ್ಳಿಮೈಸೂರು ಮುಖ್ಯ ರಸ್ತೆ ಅಭಿವೃದ್ಧಿಗೆ ಮೂರು ತಿಂಗಳೊಳಗೆ ಅನುದಾನ ನೀಡುತ್ತೇನೆ. ಅಂಬೇಡ್ಕರ್ ಸಮುದಾಯ ಭವನದ ಮೊದಲನೇ ಅಂತಸ್ತಿಗೂ ಅನುದಾನ ನೀಡುತ್ತೇನೆ. ಶೀಘ್ರದಲ್ಲೇ ಗ್ರಾಮದ ಪರಿಮಿತಿಯಲ್ಲಿ ತುರ್ತಾಗಿ ಆಗಬೇಕಾದ ರಸ್ತೆಗಳಿಗೂ ಅನುದಾನ ನೀಡುವೆ. ದೇವಸ್ಥಾನಗಳ ಅಭಿವೃದ್ಧಿಗೂ ಆದ್ಯತೆ ನೀಡುತ್ತೇನೆ ಎಂದರು.
ಮುದುಗುಪ್ಪೆ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣ, ರಸ್ತೆಗಳ ಅಭಿವೃದ್ಧಿ, ಅಂಬೇಡ್ಕರ್ ಸಮುದಾಯ ಭವನದ ಮೊದಲ ಅಂತಸ್ತು ನಿರ್ಮಾಣ ಕಾಮಗಾರಿ, ಗ್ರಾಮ ಪರಿಮಿತಿಯಲ್ಲಿ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಜನರು ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರು.
ತಂದ್ರೆ ಅಂಕನಹಳ್ಳಿ ಗ್ರಾಮದಲ್ಲಿ ತೇರಿನ ರಥ ನಿಲ್ಲಿಲು ಸ್ಥಳ, ಕುರ್ಜು, ಗ್ರಾಮದೊಳಗಿನ ರಸ್ತೆಗಳ ಅಭಿವೃದ್ಧಿಗೆ ಶೀಘ್ರದಲ್ಲೇ ಕ್ರಮವಹಿಸುತ್ತೇನೆ ಎಂದ ಶಾಸಕ ರವಿಶಂಕರ್, ಮುಂದಿನ ಸಭೆಯೊಳಗೆ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ತಂದ್ರೆ ಗ್ರಾಮದಲ್ಲಿ ದೇವಿರಮ್ಮ ದೇವಸ್ಥಾನದಿಂದ ಮುಖ್ಯ ರಸ್ತೆಯವರೆಗೆ ರಸ್ತೆ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು. ನಿಮ್ಮ ಬೇಡಿಕೆಯಂತೆ ದೇವಿರಮ್ಮ ದೇವಸ್ಥಾನದ ಜಾತ್ರೆಯ ಬಾಕಿ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡುವಂತೆ ಸೂಚಿಸಿದ್ದೇನೆ ಎಂದರು.
ತಹಸೀಲ್ದಾರ್ ರುಕೀಯಾ ಬೇಗಂ ಮಾತನಾಡಿ, ಯಾವ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದು ನನಗೆ ದೂರು ನೀಡಿ. ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತೇನೆ. ನೀವು ಕೊಟ್ಟಿರುವ ಅರ್ಜಿಯನ್ನು ನನ್ನ ಗಮನಕ್ಕೂ ತನ್ನಿ. ನಾನೇ ಖುದ್ದು ನಿಮ್ಮ ಕೆಲಸವನ್ನು ಮಾಡಿಸಲು ಮುಂದಾಗುತ್ತೇನೆ. ನಮ್ಮೆಲ್ಲರ ಗುರಿ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವುದು ಎಂದು ಹೇಳಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯ ಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಕಾಂಗ್ರೆಸ್ ವಕ್ತಾರ ಸೈಯದ್ ಜಬೀರ್, ನಗರ ಅಧ್ಯಕ್ಷ ಪ್ರಭಾಕರ್, ರಕ್ಷಾ ಸಮಿತಿ ಸದಸ್ಯ ವಾಸಿಮ್, ತಂದ್ರೆ ಧರ್ಮ, ವಿವಿಧ ಇಲಾಖೆ ಅಧಿಕಾರಿಗಳಾದ ಮಲ್ಲಿಕಾರ್ಜುನ್, ರಾಜೇಶ್, ರಾಮು, ಸುರೇಶ್, ಹರಿಪ್ರಸಾದ್, ಕೆಆರ್‌ಡಿಎಲ್ ಇಂಜಿನಿಯರ್ ಸತೀಶ್, ಬಿಇಒ ಕೃಷ್ಣಪ್ಪ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಪ್ರಸಾದ್, ಮುದುಗುಪ್ಪೆ ಮಹದೇವ್, ಪ್ರಕಾಶ್, ಬಸವಣ್ಣ, ತಂದ್ರೆ ವೆಂಕಟೇಶ್, ಸುಂದರೇಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net