ಬ್ಯಾಂಕ್‌ಗೆ ಬೀಗ ಜಡಿದು ರೈತರ ಪ್ರತಿಭಟನೆ

ಸಾಲ ಮರು ಪಾವತಿ ಮಾಡಿದ ರೈತರಿಗೆ ಹೊಸ ಸಾಲ ನೀಡುವುದರಲ್ಲಿ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ರೈತರು ಬ್ಯಾಂಕ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಸಾಲ ಮರು ಪಾವತಿ ಮಾಡಿದ ರೈತರಿಗೆ ಹೊಸ ಸಾಲ ನೀಡುವುದರಲ್ಲಿ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ರೈತರು ಬ್ಯಾಂಕ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಲ ವಿತರಣೆಯಲ್ಲಿ ವಿಳಂಬ ಖಂಡನೆ
  • ತಕ್ಷಣ ಸಾಲ ನೀಡುವಂತೆ ಆಗ್ರಹ
ಹನಗೋಡು: ಸಾಲ ಮರು ಪಾವತಿ ಮಾಡಿದ ರೈತರಿಗೆ ಹೊಸ ಸಾಲ ನೀಡುವುದರಲ್ಲಿ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಗುರುವಾರ ರೈತರು ಬ್ಯಾಂಕ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಗೆ ನೇತೃತ್ವ ವಹಿಸಿದ್ದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎನ್. ನಾಗರಾಜ್ ಮಾತನಾಡಿ, ಕಳೆದ ವರ್ಷ ಸುಮಾರು 220 ರೈತರು ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿದ್ದಾರೆ. ಸಾಲ ಮರುಪಾವತಿ ಮಾಡಿದ ರೈತರಿಗೆ ಹೊಸ ಸಾಲ ನೀಡುವುದಾಗಿ ಬ್ಯಾಂಕ್ ಆಡಳಿತ ಮಂಡಳಿ ಭರವಸೆ ನೀಡಿದ್ದರೂ ಇದೀಗ ವಿನಾಕಾರಣ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.
ಬ್ಯಾಂಕ್‌ನ ಭರವಸೆ ನಂಬಿಕೊಂಡು ಅನೇಕ ರೈತರು ಕೈ ಸಾಲ ಮಾಡಿಕೊಂಡಿದ್ದಾರೆ. ಆದರೆ ಇದೀಗ ಬ್ಯಾಂಕ್ ಸಾಲ ನೀಡದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಅರ್ಹ ರೈತರಿಗೆ ಹೊಸ ಸಾಲ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಬ್ಯಾಂಕ್ ರೈತರಿಗೆ ಸಾಲ ನೀಡುವುದನ್ನು ಕೈಬಿಟ್ಟಿದ್ದು, ಅರ್ಜಿ ಸಲ್ಲಿಸಿದವರಿಗೆ ಅನಗತ್ಯ ತೊಂದರೆ ನೀಡುತ್ತಿದೆ. ಸರ್ಕಾರ ಈ ಹಿಂದೆ ಸಹಕಾರಿ ಸಂಘಗಳ ಸಾಲ ಹಾಗೂ ಬಡ್ಡಿ ಮನ್ನಾ ಮಾಡಿದ್ದರೂ, ಅದರ ಸೌಲಭ್ಯವನ್ನು ರೈತರಿಗೆ ಸರಿಯಾಗಿ ನೀಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರೈತರಿಗೆ ಸಾಲ ನೀಡುವ ಕುರಿತು ಸ್ಪಷ್ಟ ಭರವಸೆ ಸಿಗುವವರೆಗೂ ಸ್ಥಳ ಬಿಟ್ಟು ತೆರಳುವುದಿಲ್ಲ ಎಂದು ಪಟ್ಟು ಹಿಡಿದ ರೈತರು, ಬ್ಯಾಂಕ್ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಬ್ಯಾಂಕ್‌ಗೆ ಬೀಗ ಜಡಿದರು. ಬಳಿಕ ಬ್ಯಾಂಕ್ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪಡಿತರ ವಿತರಣೆಗಾಗಿ ಬಂದಿದ್ದ ಲಾರಿಯನ್ನು ತಡೆದು, ಅಕ್ಕಿಯನ್ನು ಗೋದಾಮಿಗೆ ಇಳಿಸದಂತೆ ತಡೆಯುವ ಮೂಲಕ ಪ್ರತಿಭಟನೆ ತೀವ್ರಗೊಳಿಸಿದರು. ನಂತರ ಲಾರಿಯನ್ನು ಹಿಂದಿರುಗಿಸಲಾಯಿತು.
ಪ್ರತಿಭಟನೆಯಲ್ಲಿ ಕಾಳೇಗೌಡ, ಅಲೆಕ್ಸ್, ಲೋಕೇಶ್, ಶಂಕರೇಗೌಡ, ಕೃಷ್ಣೇಗೌಡ, ಸಂತೋಷ, ಮಹದೇವ್, ಬಿರೇಗೌಡ, ರಾಜೇಶ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
ಈ ಕುರಿತು ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೀಗೌಡ, ಹುಣಸೂರು ತಾಲೂಕಿನ ಹಲವು ಸಹಕಾರ ಬ್ಯಾಂಕ್‌ಗಳಲ್ಲಿ ಕಾರ್ಯನಿರ್ವಹಣಾಧಿಕಾರಿಗಳಿಂದ ಕೋಟ್ಯಂತರ ರೂಪಾಯಿ ದುರುಪಯೋಗವಾಗಿದೆ. ಹನಗೋಡು ಸಹಕಾರ ಬ್ಯಾಂಕ್‌ನಲ್ಲೂ ಹಿಂದಿನ ಅಧಿಕಾರಿಯಿಂದ ಹಣ ದುರುಪಯೋಗವಾಗಿರುವ ಕಾರಣ ಸಾಲ ವಿತರಣೆಯಲ್ಲಿ ವಿಳಂಬವಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ವಿಷಯ ತಂದು ತುರ್ತಾಗಿ ಸಾಲ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ಜೆ.ಮಂಜುನಾಥ್ ಮಾತನಾಡಿ, ರೈತರಿಗೆ ಅನ್ಯಾಯವಾಗಿರುವುದು ನಿಜ. ಆದರೆ ಬಡವರಿಗೆ ನೀಡುವ ಪಡಿತರ ವಿತರಣೆಗೆ ಅಡ್ಡಿಪಡಿಸುವುದು ಸರಿಯಲ್ಲ. ಸಹಕಾರ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದರು.
ಬ್ಯಾಂಕ್ ಆಡಳಿತಾಧಿಕಾರಿ ನವೀನ್ ಮಾತನಾಡಿ, ಹಿಂದಿನ ಕಾರ್ಯನಿರ್ವಹಣಾಧಿಕಾರಿಯಿಂದ ಕೋಟ್ಯಂತರ ರೂಪಾಯಿ ದುರುಪಯೋಗವಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಅನ್ಯಾಯಕ್ಕೊಳಗಾದ ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನೊಂದು ವಾರದೊಳಗೆ ರೈತರಿಗೆ ಸಾಲ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net