ರಾಜ್ಯ ಮತ್ತು ಜಿಲ್ಲಾಮಟ್ಟದ ಪ್ರಶಸ್ತಿ ವಿಜೇತ ಶಿಕ್ಷಕರರಿಗೆ ಸನ್ಮಾನ
ಪಿರಿಯಾಪಟ್ಟಣ: ಶಿಕ್ಷಣದಲ್ಲಿ ನೈತಿಕತೆ ಎಷ್ಟು ಮುಖ್ಯವೋ ಜೀವನ ಕ್ರಮವನ್ನು ಬೋಧಿಸುವ ತಂತ್ರಜ್ಞಾನವು ಅಷ್ಟೇ ಮುಖ್ಯ ಎಂಬುದು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಅಭಿಪ್ರಾಯವಾಗಿತ್ತು ಎಂದು ರೋಟರಿ ಪಿರಿಯಾಪಟ್ಟಣ ಮಿಡ್ ಟೌನ್ ಅಧ್ಯಕ್ಷ ಬಲರಾಮ್ ತಿಳಿಸಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಪಟ್ಟಣದ ರೋಟರಿ ಮಿಡ್‌ಟೌನ್ ವತಿಯಿಂದ ರೋಟರಿ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಜಿಲ್ಲಾಮಟ್ಟದ ಪ್ರಶಸ್ತಿ ವಿಜೇತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.
ಉತ್ತಮ ಶಿಕ್ಷಣ ಪಡೆದು ವಿದ್ಯಾವಂತರಾಗುವ ಮೂಲಕ ಅವರ ಭವಿಷ್ಯ ಉಜ್ವಲವಾಗಿರಲಿ ಎಂಬ ಆಶಯದೊಂದಿಗೆ ಮಕ್ಕಳನ್ನು ಪಾಲಕರು ಶಾಲೆಗಳಿಗೆ ಕಳಿಸುತ್ತಾರೆ. ಮಕ್ಕಳ ಅಭಿರುಚಿಗೆ ತಕ್ಕಂತೆ ಪ್ರೋತ್ಸಾಹ ನೀಡುವ ಮೂಲಕ ಗುಣಮಟ್ಟದ ಶಿಕ್ಷಣ ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದರು.
ಪಾಲಕರ ಖಾಸಗಿ ಶಾಲೆಗಳ ವ್ಯಾಮೋಹದಿಂದ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಲು ಹಿಂದೇಟು ಹಾಕುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವುದು ಎಂಬ ವಿಶ್ವಾಸ ಮೂಡಿಸುವುದು ಪ್ರತಿಯೊಬ್ಬ ಶಿಕ್ಷಕನ ಗುರಿಯಾಗಬೇಕು ಎಂದರು.
ಮಾಜಿ ಸಹಾಯಕ ಪ್ರಾಂತಪಾಲ ಸತ್ಯನಾರಾಯಣ ಮಾತನಾಡಿ, ಸಮಗ್ರ ಸಾರ್ವಜನಿಕ ಶಿಕ್ಷಣಕ್ಕಾಗಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯೂ ತನಗೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣದ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸುವ ಅನಿವಾರ್ಯತೆ ಇದ್ದು ಸರ್ಕಾರಗಳು ಶಿಕ್ಷಕರಿಗೆ ಹೊಣೆಗಾರಿಕೆಯಿಂದ ಮುಕ್ತಿಗೊಳಿಸಿ ಪ್ರಬುದ್ಧ ಶಿಕ್ಷಣ ನೀಡುವ ಅವಕಾಶ ನೀಡಬೇಕಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದ ಶಿಕ್ಷಕರಾದ ನಾಗಶೆಟ್ಟಿ, ಕೆ.ಪಿ.ಲಿಲ್ಲಿ ಮೇರಿ, ಎಸ್.ಡಿ.ಮೋಹನಕುಮಾರ್, ಟಿ.ಸುಧಾಮಣಿ ಮತ್ತು ರೋಟರಿ ಪಿರಿಯಾಪಟ್ಟಣ ಮಿಡ್ ಟೌನ್ ಸದಸ್ಯರು, ಶಿಕ್ಷಕರಾದ ಗುರುದತ್ ಮತ್ತು ಆರ್.ಮಹದೇವ್ ಅವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಪುರಸ್ಕರಿಸಲಾಯಿತು.
ರೋಟರಿ ಪಿರಿಯಾಪಟ್ಟಣ ಮಿಡ್ ಟೌನ್ ಕಾರ್ಯದರ್ಶಿ ಬಿ.ಎಸ್.ಹರೀಶ್, ಸದಸ್ಯರಾದ ರಾಜೇಗೌಡ. ಬಿ.ಆರ್.ಸತೀಶಕುಮಾರ್, ಕೆ.ಆರ್.ನಾಗರಾಜು, ಕೆ.ಎಂ.ವಿನಯ್ ಶೇಖರ್, ಟಿ.ಚಂದ್ರು, ಶ್ರೀಕಾಂತ್, ಕೃಷ್ಣೇಗೌಡ, ಜ್ಯೋತಿ ಗೌಡ, ಭರತ್, ಪ್ರತೀಪ್ ಇತರರು ಇದ್ದರು.