ಹುಣಸೂರು ತಾಲೂಕು ಚಿಲ್ಕುಂದ ಹರಾಜು ಮಾರುಕಟ್ಟೆಯಲ್ಲಿ ಹರಾಜು ನಿರ್ದೇಶಕ ಬಿ.ಸಿ.ಶ್ರೀನಿವಾಸ್ ಅವರಿಗೆ ರೈತ ಮುಖಂಡರು ಮನವಿ ಸಲ್ಲಿಸಿದರು. ಹೊಸೂರು ಕುಮಾರ್, ಚಂದ್ರೇಗೌಡ, ವಿಕ್ರಂ ಗೌಡ, ಧನಂಜಯ ಇದ್ದರು.
ಹುಣಸೂರು: ತಾಲೂಕಿನ ಚಿಲ್ಕುಂದ ಹರಾಜು ಮಾರುಕಟ್ಟೆಯಲ್ಲಿ ಹೆಚ್ಚುವರಿ ಮಾರುಕಟ್ಟೆ ಕಟ್ಟಡ ಸ್ಥಾಪಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.
ಚಿಲ್ಕುಂದ ಮಾರುಕಟ್ಟೆಗೆ ಮಂಗಳವಾರ ಆಗಮಿಸಿದ್ದ ತಂಬಾಕು ಮಂಡಳಿ ಹರಾಜು ನಿರ್ದೇಶಕ ಬಿ.ಸಿ.ಶ್ರೀನಿವಾಸ್ ಅವರನ್ನು ಭೇಟಿ ಮಾಡಿದ ರೈತ ಮುಖಂಡರು ಹೆಚ್ಚುವರಿ ಕಟ್ಟಡ ಸ್ಥಾಪನೆಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಚಿಲ್ಕುಂದ ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ವೇಳೆ ರೈತರು ತಮ್ಮ ಸರದಿಗಾಗಿ ತಿಂಗಳುಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಈ ಪರಿಸ್ಥಿತಿಯಿಂದಾಗಿ ಮಾರುಕಟ್ಟೆ ಅಂತ್ಯವಾಗುವ ವೇಳೆ ಮಾರಾಟಗಾರರ ಸಂಖ್ಯೆ ಹೆಚ್ಚಾಗಿ ಗೊಂದಲಕ್ಕೆ ಕಾರಣವಾಗುತ್ತಿದೆ. ಮಾರುಕಟ್ಟೆ ಪ್ರಾಂಗಣದಲ್ಲಿ ವಿಶಾಲವಾದ ಜಾಗವಿದ್ದು ಹೆಚ್ಚುವರಿಯಾಗಿ ಮತ್ತೊಂದು ಕಟ್ಟಡ ಸ್ಥಾಪಿಸಲು ಮುಂದಾಗಬೇಕು. ಈ ಕುರಿತು ಮುಂಬರುವ ಮಾರುಕಟ್ಟೆ ಆರಂಭಕ್ಕೂ ಮುನ್ನ ಸಂಬಂಧಪಟ್ಟವರ ಅನುಮತಿ ಪಡೆದು ಕಟ್ಟಡ ನಿರ್ಮಿಸಿ ಮುಂದಿನ ದಿನಗಳಲ್ಲಿ ಗೊಂದಲಗಳಿಗೆ ಅವಕಾಶವಿಲ್ಲದಂತೆ ಮಾರುಕಟ್ಟೆ ನಡೆಯಲು ಅನುವು ಮಾಡಿಕೊಡಬೇಕೆಂದು ಕೋರಿದರು.
ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಉಂಡುವಾಡಿ ಸಿ.ಚಂದ್ರೇಗೌಡ ಮಾತನಾಡಿ, ತಂಬಾಕು ಬೆಳೆಗಾರರಿಗೆ ಮಂಡಳಿ ವತಿಯಿಂದ ನೀಡುವ ಹೆಲ್ತ್ ಫಂಡ್ ಅನ್ನು 5 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದೇವೆ. ಮಂಡಳಿ ಗಮನಿಸಿಲ್ಲ. ಕೂಡಲೇ ಈ ಕುರಿತು ಕ್ರಮವಹಿಸಲಿ. ಎಲ್ಲ ಮಾರುಕಟ್ಟೆ ಪ್ರಾಂಗಣದಲ್ಲಿ ಮೂಲಸೌಕರ್ಯ ಕೊರತ ನೀಗಿಸಿ, ಕ್ಯಾಂಟೀನ್, ರೈತಭವನ ಮತ್ತು ವಿಶ್ರಾಂತಿ ಗೃಹಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಮೋದೂರು ಶಿವಣ್ಣ, ತಂಬಾಕು ಮಂಡಳಿ ಸದಸ್ಯ ವಿಕ್ರಂಗೌಡ, ಪ್ರಭಾಕರ ನಿಲುವಾಗಿಲು, ಚೆಲುವಯ್ಯ ಪಿರಿಯಾಪಟ್ಟಣ, ಪ್ರಕಾಶ್‌ರಾಜ್ ಅರಸ್, ಕಿರಿಜಾಜಿ ಧನಂಜಯ, ಕರಿಗೌಡ, ಬಸವರಾಜು, ಮುತ್ತುರಾಜು, ಹರೀಶ, ಸತೀಶ್ ಹಾಜರಿದ್ದರು.