ಬಾಬೂಜಿಗೆ ಅಪಮಾನ ಮಾಡಿದವನ ಬಂಧನಕ್ಕೆ ಒತ್ತಾಯ

ಹುಣಸೂರು ನಗರದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆದಿಜಾಂಬವ ಸಂಘ ಹಾಗೂ ಮಾದಿಗ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಡಿ.ಕುಮಾರ್, ಪರಶುರಾಮ್, ಬಿ.ಶಿವಣ್ಣ, ರಾಯನಹಳ್ಳಿ ಸ್ವಾಮಿ, ಸತೀಶ್ ಕುಮಾರ್ ಇತರರಿದ್ದಾರೆ.
ಹುಣಸೂರು ನಗರದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆದಿಜಾಂಬವ ಸಂಘ ಹಾಗೂ ಮಾದಿಗ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಡಿ.ಕುಮಾರ್, ಪರಶುರಾಮ್, ಬಿ.ಶಿವಣ್ಣ, ರಾಯನಹಳ್ಳಿ ಸ್ವಾಮಿ, ಸತೀಶ್ ಕುಮಾರ್ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಆದಿಜಾಂಬವ ಸಂಘ ಮತ್ತು ಮಾದಿಗ ಹೋರಾಟ ಸಮಿತಿ ಪ್ರತಿಭಟನೆ
  • ತಹಸೀಲ್ದಾರ್‌ಗೆ ಮನವಿ ಸಲ್ಲಿಕೆ
ಹುಣಸೂರು: ನಗರದ ಅಂಬೇಡ್ಕರ್ ಭವನದಲ್ಲಿ ಅಳವಡಿಸಿರುವ ಬಾಬು ಜಗಜೀವನರಾಮ್ ಅವರ ಭಾವಚಿತ್ರವನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿರುವ ತಾಲೂಕಿನ ಹಳೇಬೀಡು ಗ್ರಾಮದ ನಾಗರಾಜು ಎಂಬುವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿ ತಾಲೂಕು ಆದಿಜಾಂಬವ ಸಂಘ ಮತ್ತು ಮಾದಿಗ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ಸಮಾಜದ ಮುಖಂಡರು, ಶೋಷಿತ ಸಮಾಜದ ಬೆಳಕಾದ ಬಾಬೂಜಿಗೆ ಅಪಮಾನ ಮಾಡಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಆದಿಜಾಂಬವ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಕುಮಾರ್ ಮಾತನಾಡಿ, ಏ.7ರಂದು ನಗರದ ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ದಲಿತ ಮುಖಂಡರ ಅಭಿಪ್ರಾಯ ಮಂಡನೆ ನಡೆದ ವೇಳೆ ಎದ್ದು ನಿಂತ ಹಳೇಬೀಡು ನಾಗರಾಜ ಎಂಬ ವ್ಯಕ್ತಿ ಅಂಬೇಡ್ಕರ್ ಭವನದಲ್ಲಿ ಹಾಕಿರುವ ಬಾಬು ಜಗಜೀವನರಾಮ್ ಫೋಟೋವನ್ನು ಕಿತ್ತು ಬಿಸಾಕಿ, ಅವನೊಬ್ಬ ರಾಷ್ಟ್ರನಾಯಕನೇ? ಅವನ ಫೋಟೋವನ್ನು ಅಲ್ಲಿ ಹಾಕಬೇಡಿ ಎಂದು ಕಿರುಚಾಡಿದ್ದಾನೆ. ಈತನ ಈ ನಡವಳಿಕೆ ನಮ್ಮೆಲ್ಲರಿಗೂ ಬೇಸರ ಮತ್ತು ಆತಂಕ ಮೂಡಿಸಿದೆ. ಶೋಷಿತ ಸಮಾಜದ, ದೀನದಲಿತರ ನಾಯಕನಾಗಿ ಬಾಬು ಜಗಜೀವನರಾಮ್ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಅಂತಹವರ ಕುರಿತು ತುಂಬಿದ ಸಭೆಯಲ್ಲಿ ಇಂತಹ ಸಣ್ಣತನದ ಮಾತನಾಡಿರುವುದು ಬೇಸರ ತರಿಸಿದೆ. ತಾಲೂಕು ಆಡಳಿತ ಕೂಡಲೇ ಈತನ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಮಾದಿಗ ಹೋರಾಟ ಸಮಿತಿ ಅಧ್ಯಕ್ಷ ಪರಶುರಾಮ್ ಮಾತನಾಡಿ, ಈ ವ್ಯಕ್ತಿಯ ಮಾತು ನಮ್ಮ ಸಮುದಾಯದ ಹಾಗೂ ರಾಷ್ಟ್ರನಾಯಕರಿಗೆ ಅಪಮಾನ ಮಾಡಿದಂತೆ ಹಾಗೂ ಶೋಷಿತ ಸಮುದಾಯಗಳ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಕೂಡಲೇ ಈತನನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಆದಿಜಾಂಬವ ಸಂಘದ ತಾಲೂಕು ಅಧ್ಯಕ್ಷ ಬಿ.ಶಿವಣ್ಣ ಮಾತನಾಡಿ, ಆದಿಜಾಂಬವ ಸಮಾಜ ವಾಸ ಮಾಡುವ ಗ್ರಾಮಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ಕೂಡಲೇ ತಾಲೂಕು ಆಡಳಿತ ಸಭೆ ನಡೆಸಿ ಈ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಸಮುದಾಯದಲ್ಲಿ ಒಡಕು ಉಂಟು ಮಾಡುತ್ತಿರುವ ಈ ವ್ಯಕ್ತಿಯನ್ನು ಕೂಡಲೇ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಗರಸಭೆ ಮಾಜಿ ಸದಸ್ಯ ಎಚ್.ಕೆ.ಸತೀಶ್‌ಕುಮಾರ್, ತಾಲೂಕು ಆದಿಜಾಂಬವ ಸಂಘದ ಗೌರವಾಧ್ಯಕ್ಷ ರಾಚಯ್ಯ, ಮುಖಂಡರಾದ ಸಣ್ಣಮಾದಯ್ಯ, ಕಾಂತರಾಜು, ಶಿವಮ್ಮ, ಮಾದಿಗ ಹೋರಾಟ ಸಮಿತಿಯ ಬೆಳ್ತೂರು ವೆಂಕಟೇಶ್, ರಾಯನಹಳ್ಳಿ ಸ್ವಾಮಿ, ಶಿವರಾಮು, ಬಸವರಾಜು, ಬನ್ನಿಕುಪ್ಪೆ ಲೋಕೇಶ್, ಸಂತೋಷ್, ಜಾಬಗೆರೆ ಮಹೇಶ್, ಶಿವರಾಜು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೋಹನ್, ಹರೀಶ್, ಆರ್.ಮಹದೇವ, ಶಿವಣ್ಣ ಅಗ್ರಹಾರ, ವಜ್ರೇಶ್ ಕೆ.ಆರ್ ನಗರ, ಸೋಮು, ನಟ, ಬನ್ನಿಕುಪ್ಪೆ ನಾಗಯ್ಯ, ಪರಶುರಾಮ್, ಮಹದೇವ್, ಶಿವಣ್ಣ, ರಾಯನಹಳ್ಳಿ ಚನ್ನ, ಸರಸ್ವತಿಪುರಂ ಜಯಶಂಕರ, ಶೇಖರ್, ಬನ್ನಿಕುಪ್ಪೆ ಸಣ್ಣಸ್ವಾಮಿ, ಲೋಕೇಶ್ ಇತರರು ಇದ್ದರು. ತಹಸೀಲ್ದಾರ್ ಜೆ.ಮಂಜುನಾಥ್‌ರಿಗೆ ಮನವಿ ಸಲ್ಲಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net