ಸಂಘರ್ಷ ತಡೆದ ಚೈನ್ ಲಿಂಕ್ಡ್ ಮೆಷ್

ಸಂಘರ್ಷ ತಡೆದ ಚೈನ್ ಲಿಂಕ್ಡ್ ಮೆಷ್
ಸಂಘರ್ಷ ತಡೆದ ಚೈನ್ ಲಿಂಕ್ಡ್ ಮೆಷ್
Published on

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ವನ್ಯಜೀವಿ-ಮಾನವ ಸಂಘರ್ಷ ನಿಯಂತ್ರಣಕ್ಕೆ ಇಲಾಖೆ ಜಾರಿಗೆ ತಂದಿದ್ದ ಮತ್ತೊಂದು ಹೊಸಪ್ರಯೋಗ ಚೈನ್ ಲಿಂಕ್ಡ್ ಮೆಷ್ ಯೋಜನೆ ಯಶಸ್ವಿಯಾಗಿದೆ. 8 ತಿಂಗಳ ಹಿಂದೆ ಪ್ರಾಯೋಗಿಕವಾಗಿ ಜಾರಿಗೊಂಡಿದ್ದ ಯೋಜನೆಯಿಂದ ಸಂಘರ್ಷ ಶೂನ್ಯಕ್ಕೆ ಇಳಿದಿರುವುದು ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ.

ಉದ್ಯಾನದ ಅಂತರಸಂತೆ ವಲಯ ವ್ಯಾಪ್ತಿಯ ದಮ್ಮನಕಟ್ಟೆ-ತಾರಕ ಡ್ಯಾಂ ಮಧ್ಯದ 3.5 ಕಿ.ಮೀ. ಉದ್ದ ಚೈನ್ ಲಿಂಕ್ಡ್ ಮೆಷ್ ಅನ್ನು ಜನವರಿಯಿಂದ ಅಳವಡಿಸಲಾಗಿದೆ. ಬೆಂಗಳೂರು ಮೂಲದ ಚಾಕಲೇಟ್ ಫೌಂಡೇಷನ್ ಸಂಸ್ಥೆಯ ಮುಖ್ಯಸ್ಥ ಶ್ರೀಧರ್ ಚೈನ್ ಲಿಂಕ್ಡ್ ಮೆಷ್ ಅಳವಡಿಕೆ ಕಾರ್ಯದ ಸಂಪೂರ್ಣ ಹೊಣೆ ಹೊತ್ತು ಪೂರ್ಣಗೊಳಿಸಿದ್ದರು. ಅಂದಿನ ವಲಯ ಅರಣ್ಯಾಧಿಕಾರಿ ಸಿದ್ದರಾಜು ಹೆಚ್ಚಿನ ಆಸ್ಥೆ ವಹಿಸಿ ಮೆಷ್ ಅಳವಡಿಕೆ ಯಶಸ್ವಿಗೊಳಿಸಿದ್ದರು.

ದಶಕಗಳ ಹಿಂದೆ ದೇಶದಲ್ಲೇ ಮೊದಲ ಬಾರಿಗೆ ರಾಷ್ಟ್ರೀಯ ಉದ್ಯಾನವನದಂಚಿನಲ್ಲಿ ಮಾನವ ವನ್ಯಜೀವಿ ಸಂಘರ್ಷ ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್ ಅಳವಡಿಸಿದ ಖ್ಯಾತಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹೊಂದಿದೆ. ದಶಕಗಳಲ್ಲಿ ಒಂದು ನೂರು ಕಿಮೀಗೂ ಅಧಿಕ ಉದ್ದದ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಮಾನವ ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಹೊಸ ಹೊಸ ತಂತ್ರಜ್ಞಾನಗಳ ಬಳಕೆ ಮಾಡುತ್ತಿದೆ. ಆನೆ ಕಂದಕ ನಿರ್ಮಾಣದಿಂದ ಆರಂಭಗೊಂಡು ಇಂದಿನ ಎಐ ತಂತ್ರಜ್ಞಾನಗಳ ಬಳಕೆಯೂ ಆಗುತ್ತಿದೆ. ರೋಪ್ ಬ್ಯಾರಿಕೇಡ್, ಸೋಲಾರ್ ಫೆನ್ಸಿಂಗ್, ಹ್ಯಾಂಗಿಂಗ್ ಫೆನ್ಸಿಂಗ್, ಶಕ್ತಿಶಾಲಿ ಗರುಡ ಕ್ಯಾಮರಾ ಅಳವಡಿಕೆ, ವಿವಿಧ ಶಬ್ದಗಳನ್ನು ಒಳಗೊಂಡ ಫಾರ್ಮ್‌ಗಾರ್ಡ್ ತಂತ್ರಜ್ಞಾನ ಇವೆಲ್ಲವನ್ನೂ ಅಲ್ಲಲ್ಲಿ ಅಳವಡಿಸಿ ಪರಿಣಾಮಗಳನ್ನು ಇಲಾಖೆ ಗಮನಿಸುತ್ತಿದೆ. ಈಗ ಚೈನ್‌ಲಿಂಕ್ಡ್ ಮೆಷ್‌ಗಳ ಅಳವಡಿಕೆ ಪ್ರಾಯೋಗಿಕವಾಗಿ ನಡೆದಿದ್ದು, ಯೋಜನೆ ಪರಿಣಾಮಕಾರಿಯಾಗಿರುವುದು ಇಲಾಖೆಗೆ ಯೋಜನೆಯನ್ನು ಮುಂದುವರಿಸಲು ಹುಮ್ಮಸ್ಸು ನೀಡಿದೆ. ಹಲವು ಯೋಜನೆಗಳನ್ನು ಜಾರಿಗೊಳಿಸಿ ಸಾಲ್ಯ ಕಂಡಿದ್ದು, ವಿಫಲವಾದ ಯೋಜನೆಗಳು ಕೂಡ ಇವೆ. ಆದರೆ ಸಂಘರ್ಷದ ಅಂತ್ಯಕ್ಕಾಗಿ ಇಲಾಖೆ ಕ್ರಮ ವಹಿಸುತ್ತಿರುವುದು ಮುಂದುವರಿದಿದೆ.

ಬಂಡೀಪುರ ಹುಲಿ ರಕ್ಷಿತಾರಣ್ಯ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೊದಲ ಬಾರಿಗೆ ಈ ಯೋಜನೆ ಜಾರಿಗೊಳಿಸಲಾಯಿತು. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹೆಡಿಯಾಲ ವಲಯ ವ್ಯಾಪ್ತಿಯ ಕಾಳನಮುಂಟಿ ಪ್ರದೇಶದಲ್ಲಿ 2.5 ಕಿ.ಮೀ.ಉದ್ದದ ಚೈನ್ ಲಿಂಕ್ಡ್ ಮೆಷ್ ಅಳವಡಿಸಲಾಗಿದೆ. ನಾಗರಹೊಳೆ ಉದ್ಯಾನವನದ ದಮ್ಮನಕಟ್ಟೆ ಬೀಟ್ ತಾರಕ ವಲಯ ವ್ಯಾಪ್ತಿಯಲ್ಲಿ 3.5 ಕಿ.ಮೀ.ಉದ್ದದ ಮೆಶ್ ಅಳವಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net