ಮತದಾರರ ಹೆಸರು ಕೈತಪ್ಪದಂತೆ ಎಚ್ಚರವಹಿಸಿ

ನಂಜನಗೂಡು ನಗರದಲ್ಲಿ ಹಮ್ಮಿಕೊಂಡಿದ್ದ ಎಸ್‌ಐಆರ್ ಕುರಿತ ಕಾರ್ಯಾಗಾರದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿದರು. ಕಳಲೆ ಕೇಶವಮೂರ್ತಿ, ಕುರಹಟ್ಟಿ ಮಹೇಶ್, ಸಿ.ಎಂ.ಶಂಕರ್, ಶ್ರೀಕಂಠ ನಾಯಕ ಇದ್ದರು.
ನಂಜನಗೂಡು ನಗರದಲ್ಲಿ ಹಮ್ಮಿಕೊಂಡಿದ್ದ ಎಸ್‌ಐಆರ್ ಕುರಿತ ಕಾರ್ಯಾಗಾರದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿದರು. ಕಳಲೆ ಕೇಶವಮೂರ್ತಿ, ಕುರಹಟ್ಟಿ ಮಹೇಶ್, ಸಿ.ಎಂ.ಶಂಕರ್, ಶ್ರೀಕಂಠ ನಾಯಕ ಇದ್ದರು.
Published on
ನಂಜನಗೂಡು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ಅರ್ಹ ಮತದಾರರ ಹೆಸರು, ಮತದಾರರ ಪಟ್ಟಿಯಿಂದ ಕೈತಪ್ಪದಂತೆ ನೋಡಿಕೊಳ್ಳಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಸಲಹೆ ನೀಡಿದರು.
ನಗರದಲ್ಲಿ ನಗರ ಬ್ಲಾಕ್ ಕಾಂಗ್ರೆಸ್, ಗ್ರಾಮಾಂತರ, ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಬೂತ್‌ಲೆವೆಲ್ ಏಜೆಂಟರಿಗೆ ಎಸ್‌ಐಆರ್ ಸಂಬಂಧ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅರ್ಹ ಮತದಾರರ ಹೆಸರುಗಳು, ಮತದಾರರ ಪಟ್ಟಿಯಿಂದ ಕೈತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಅರ್ಹ ಮತದಾರರ ಹಕ್ಕು ಸಂರಕ್ಷಿಸುವ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸೋಣ ಎಂದು ಹೇಳಿದರು.
ನಂತರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ, ಎನ್ಯುಮರೇಷನ್ ಅರ್ಜಿ ಭರ್ತಿ ಮಾಡುವ ವಿಧಾನ, ಬೂತ್ ಮಟ್ಟದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಸುಮಾರು 15 ವರ್ಷಗಳಿಂದ ದೇಶದ ಜನಸಂಖ್ಯೆ ಹಾಗೂ ಮತದಾರರ ನಿಖರ ಮಹಿತಿ ಇಲ್ಲದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಂತ ಹಂತವಾಗಿ ಎಸ್‌ಐಆರ್ ಕಾರ್ಯ ಕೈಗೆತ್ತಿಕೊಂಡಿದೆ. ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿದಾಗ ನಿಖರ ಮಾಹಿತಿಯನ್ನು ನೀಡಬೇಕು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ಶಂಕರ್, ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠ ನಾಯಕ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಮಾರುತಿ, ಕಳಲೆ ರಾಜೇಶ್, ಉಪ್ಪಿನಹಳ್ಳಿ ಶಿವಣ್ಣ, ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net