ಎಚ್.ಡಿ.ಕೋಟೆ:ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 494 ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಈ ಪೈಕಿ 371 ಹಕ್ಕುಪತ್ರಗಳು ಮರು ಪರಿಶೀಲನೆಗೆ ಬಂದಿದ್ದು, ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ಭರವಸೆ ನೀಡಿದರು.
ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿಯ ಮಚ್ಚೂರು ಹಾಡಿಯಲ್ಲಿ ಬುಧವಾರ ಆಯೋಜಿಸಿದ್ದ ಜನಸ್ಪಂದನಾ ಸಭೆಯಲ್ಲಿ ಮಾತನಾಡಿ, ಉಳಿಕೆ ಹಕ್ಕುಪತ್ರಗಳನ್ನು ನೀಡಲು ಜಿಲ್ಲಾ ಪಂಚಾಯಿತಿ ಸದಸ್ಯರ ಸಹಿ ಬೇಕಾಗಿದೆ. ಆದರೆ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಸದಸ್ಯರಿಲ್ಲದ ಕಾರಣ ಹಕ್ಕುಪತ್ರ ವಿತರಣೆಗೆ ಹಿನ್ನಡೆಯಾಗಿದೆ ಎಂದರು.
ಈ ಭಾಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ವೈದ್ಯರ ನೇಮಕಕ್ಕೆ ಕ್ರಮವಹಿಸಲಾಗುವುದು ಎಂದರು.
ಡಿ.ಬಿ.ಕುಪ್ಪೆಯ ಮುಖಂಡ ತಿರುಪತಿ ಮಾತನಾಡಿ, ಈ ಭಾಗದಲ್ಲಿ ಸರ್ಕಾರದಿಂದ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಇಂಜಿನಿಯರ್ ಮತ್ತು ಗುತ್ತಿಗೆದಾರರು ಸರಿಯಾಗಿ ಕಾಮಗಾರಿ ನಡೆಸಿಲ್ಲ. ಎಲ್ಲ ಕಾಮಗಾರಿಗಳು ಕಳಪೆಯಿಂದ ಕೂಡಿವೆ. ಹಾಡಿಗೆ ಏತನೀರಾವರಿ ಯೋಜನೆಯ ಕಾಮಗಾರಿಗೆ ಹಣ ಮಂಜೂರಾಗಿದ್ದು, ಅರಣ್ಯ ಇಲಾಖೆಯ ಅನುಮತಿ ದೊರೆಯದೆ ಕಾಮಗಾರಿ ನಡೆದಿಲ್ಲ. ಈಗ ಒಪ್ಪಿಗೆ ಸಿಕ್ಕಿದ್ದು, ಗುತ್ತಿಗೆದಾರ ಈಗ ಹಣ ಸಾಲುವುದಿಲ್ಲ ಎಂದು ಕಾಮಗಾರಿ ಆರಂಭಿಸಿಲ್ಲ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಅನಿಲ್ ಚಿಕ್ಕಮಾದು, ಸದನದಲ್ಲಿ ಈ ಕಾಮಗಾರಿಯ ಕುರಿತು ಹೆಚ್ಚು ಹಣ ಮಂಜೂರಾತಿಗೆ ಗಮನ ಸೆಳೆಯಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಸಿ.ಮಂಜುನಾಥ್, ಪರಶಿವಮೂರ್ತಿ, ಅಶೋಕ್, ಬಾಲಯ್ಯ, ಬಲರಾಮ್, ಕಲೀಂ ಪಾಷ, ಸುಬ್ರಹ್ಮಣ್ಯ, ಚೆಲುವರಾಜು, ಅಪ್ಸರ್, ಚಲುವ, ಚಾಮರಾಜು, ಅಜಾರುದ್ದೀನ್, ಎಸಿಎಫ್ ಮಧು, ತಹಸೀಲ್ದಾರ್ ಶ್ರೀನಿವಾಸ್, ತಿರುಪತಿ ಇದ್ದರು.