ಮ್ಯಾಪಿಂಗ್‌ಗೆ ಸಿಗದ 7,800 ಮತದಾರರು

ಹುಣಸೂರು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ತಹಸೀಲ್ದಾರ್ ಜೆ.ಮಂಜುನಾಥ್ ಮಾತನಾಡಿದರು. ಬಿಇಒ ಕಾಳನಾಯಕ, ಇಒ ಕೆ.ಹೊಂಗಯ್ಯ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಬೋರೇಗೌಡ ಇದ್ದರು.
ಹುಣಸೂರು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ತಹಸೀಲ್ದಾರ್ ಜೆ.ಮಂಜುನಾಥ್ ಮಾತನಾಡಿದರು. ಬಿಇಒ ಕಾಳನಾಯಕ, ಇಒ ಕೆ.ಹೊಂಗಯ್ಯ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಬೋರೇಗೌಡ ಇದ್ದರು.
Published on
ಹುಣಸೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್)ಯ ನಿರ್ಣಾಯಕ ಘಟ್ಟ ಜೂ.30ರಿಂದ ಆರಂಭಗೊಳ್ಳಲಿದ್ದು, ಬಿಎಲ್‌ಒಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕಿದೆ ಎಂದು ಸಹಾಯಕ ನೋಂದಣಾಧಿಕಾರಿ ಹಾಗೂ ತಹಸೀಲ್ದಾರ್ ಜೆ.ಮಂಜುನಾಥ್ ಸೂಚಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಚುನಾವಣಾ ವಿಭಾಗದ ವತಿಯಿಂದ ಆಯೋಜಿಸಿದ್ದ ಎಸ್‌ಐಆರ್ ಪ್ರಕ್ರಿಯೆಯ ಅಂತಿಮ ಹಂತದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಈಗಾಗಲೇ ಮ್ಯಾಪಿಂಗ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಮ್ಯಾಪಿಂಗ್ ವೇಳೆ 7,800 ಮತದಾರರು ಸಿಕ್ಕಿಲ್ಲ. 2.51 ಲಕ್ಷಕ್ಕೂ ಅಧಿಕ ಮತದಾರರನ್ನು ಗುರುತಿಸಲಾಗಿದೆ. ಜೂ.30ರಿಂದ ಆರಂಭಗೊಳ್ಳಲಿರುವ ಮನೆ ಮನೆ ಭೇಟಿ ಕಾರ್ಯದ ವೇಳೆ ಮತದಾರರಿಗೆ ಮತದಾರರ ಗಣತಿ ನಮೂನೆ(ಎನ್ಯೂಮರೇಷನ್ ಫಾರಂ) ನೀಡಿ ಅವರಿಂದ ಭರ್ತಿ ಮಾಡಿದ ನಮೂನೆ ಸ್ವೀಕರಿಸುವ ಕಾರ್ವನ್ನು ಯಶಸ್ವಿಯಾಗಿ ನಡೆಸಿರಿ. ಈ ಎಲ್ಲ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ಸ್ಥಾಪಿಸಿರುವ ನೂತನ ಆಪ್‌ನಲ್ಲಿ ನೀವು ಅಪ್‌ಲೋಡ್ ಮಾಡಬೇಕು. ನಿಮ್ಮ ಪ್ರತಿಯೊಂದು ಚಟುವಟಿಕೆಗಳನ್ನು ನೀವು ಬರವಣಿಗೆ ಮೂಲಕ ದಾಖಲೆ ಮಾಡಿಕೊಳ್ಳಿರಿ. ಮೂರು ಬಾರಿಯೂ ಮನೆ ಭೇಟಿ ವೇಳೆ ಮತದಾರರಿಲ್ಲದ ಸಂದರ್ಭದಲ್ಲಿ ಬಿಎಲ್‌ಎಗಳಿಗೆ ಮಾಹಿತಿ ನೀಡಿ ಮತದಾರರ ಸುಳಿವು ದೊರಕಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ಸಿಗದಿದ್ದ ಪಕ್ಷಕ್ಕೆ ಮತದಾರರ ಮನೆ ಗೋಡೆಗೆ ಕೆಂಪು ಸ್ಟಿಕರ್ ಅಂಟಿಸಿರಿ ಎಂದರು.
ಮನೆ ಭೇಟಿ ವೇಳೆ ದ್ವಿಪತ್ರಿಯಲ್ಲಿ ನೀಡುವ ನಮೂನೆಯ ಒಂದನ್ನು ನೀವು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಮತದಾರರಿಲ್ಲದೆ ಇರುವ ಮನೆಗಳ ನಮೂನೆಗಳು ಮತ್ತು ಮತದಾರರಿಂದ ವಾಪಸ್ ಪಡೆದ ನಮೂನೆಗಳೆಲ್ಲವನ್ನೂ ತಿಂಗಳ ನಂತರ ಚುನಾವಣಾ ವಿಭಾಗಕ್ಕೆ ನೀಡುವುದು ನಿಮ್ಮ ಕರ್ತವ್ಯ. ಮನೆಗಳಿಗೆ ಭೇಟಿ ವೇಳೆ ಮ್ಯಾಪಿಂಗ್‌ನಲ್ಲಿ ಸಿಗದ 7,800 ಮತದಾರರ ಪೈಕಿ ಸಿಕ್ಕರೆ ಆಗಲೂ ಮ್ಯಾಪಿಂಗ್ ಮಾಡುವ ಅವಕಾಶವಿದೆ. ಯಾವುದೇ ರಾಜಕೀಯ ಪಕ್ಷಗಳ ಬಿಎಲ್‌ಎಗಳೊಂದಿಗೆ ನಿಮ್ಮ ಕರ್ತವ್ಯದ ಕುರಿತು ಮಾತ್ರ ಮಾಹಿತಿ ನೀಡಿರಿ ಮತ್ತು ಸಮಸ್ಯೆಯನ್ನು ತಿಳಿಸಿರಿ. ಇದನ್ನು ಹೊರತುಪಡಿಸಿ ಇನ್ಯಾವುದೇ ಮಾತುಕತೆ ಮಾಡಬೇಡಿ ಎಂದು ಕಿವಿಮಾತು ಹೇಳಿದರು.
ತಾಲೂಕು ಪಂಚಾಯಿತಿ ಇಒ ಕೆ.ಹೊಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಕಾಳನಾಯಕ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಬೋರೇಗೌಡ, ಚುನಾವಣಾ ವಿಭಾಗದ ಶಿರಸ್ತೇದಾರ್ ಪ್ರಕಾಶ್, ಸಿಬ್ಬಂದಿ ಗುರು, ಬಿಎಲ್‌ಒಗಳು, ಮೇಲ್ವಿಚಾರಕರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net