ಕ್ಷೇತ್ರ, ಮತದಾರರ ಹಿತರಕ್ಷಣೆ ಮುಖ್ಯ: ಶಾಸಕ ಎಂ. ಸತೀಶ್ ರೆಡ್ಡಿ

Satish Reddy
Published on

ಬೊಮ್ಮನಹಳ್ಳಿ: ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವ ವ್ಯಕ್ತಿ ನಾನಲ್ಲ. ಅದೇನಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಕೆಲಸ. ನನಗೆ ಕ್ಷೇತ್ರದ ಜನರ ಹಿತರಕ್ಷಣೆ ಮುಖ್ಯ ಎಂದು ಶಾಸಕ ಎಂ. ಸತೀಶ್ ರೆಡ್ಡಿ ಹೇಳಿದ್ದಾರೆ.

ಬೊಮ್ಮನಹಳ್ಳಿ ಕ್ಷೇತ್ರದ ಸಿಂಗಸಂದ್ರ ವ್ಯಾಪ್ತಿಯಲ್ಲಿ ಸಾವಿರಾರು ಜನರ ಜತೆ ಭರ್ಜರಿ ರೋಡ್ ಶೋ ನಡೆಸಿ ಮಾತನಾಡಿದರು. ಬೊಮ್ಮನಹಳ್ಳಿಯಲ್ಲಿ ನಾವು ಶಾಂತಿಯಿಂದ ಇದ್ದೇವೆ. ಆದರೆ ಕಾಂಗ್ರೆಸ್​ನವರು ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗರಿಗೆ ಒಂದು ಅಂಬೇಡ್ಕರ್ ಜಯಂತಿಯನ್ನು ಮಾಡುವ ಯೋಗ್ಯತೆ ಇಲ್ಲ. ನಾವು ಸಾವಿರಾರು ಜನ ದಲಿತರನ್ನು ಸೇರಿಸಿ ಅಂಬೇಡ್ಕರ್ ಜಯಂತಿಯನ್ನು ಪ್ರತಿ ವರ್ಷ ಮಾಡುತ್ತಾ ಬಂದಿದ್ದೇವೆ ಎಂದರು.

ಶಾಂತಿ ಕದಡುವ ಅಭ್ಯರ್ಥಿ ಠೇವಣಿ ಕಳೆದುಕೊಳ್ಳುತ್ತಾರೆ

ಕಾಂಗ್ರೆಸ್​ನವರು ಮಾತು ಎತ್ತಿದರೆ ಅಂಬೇಡ್ಕರ್ ಬಗ್ಗೆ ಹೇಳುತ್ತಾರೆ. ಆದರೆ ಲೋಕಸಭೆಯಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಯಾರು ಎನ್ನುವುದು ಜನತೆಗೆ ತಿಳಿದಿದೆ. ಮೋಸ ಮಾಡಿ ಮತ ಪಡೆಯಲು ಅವಿದ್ಯಾವಂತರು ಇಲ್ಲಿ ಯಾರೂ ಇಲ್ಲ ಎಂದು ಹೇಳಿದರು.

ಕ್ಷೇತ್ರದಲ್ಲಿ ಗೂಂಡಾಗಳನ್ನು ಕರೆದುಕೊಂಡು ಬಂದು ಗಲಾಟೆ ಮಾಡಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬೆಲೆ ತೆರಬೇಕಾಗುತ್ತದೆ. ಯಾಕೆಂದರೆ ಕ್ಷೇತ್ರದಲ್ಲಿ ಶಾಂತಿ ಕದಡುವ ಅಭ್ಯರ್ಥಿ ಠೇವಣಿ ಕಳೆದುಕೊಳ್ಳುತ್ತಾರೆ. ದಲಿತರು ಮಾತ್ರವಲ್ಲ, ಎಲ್ಲ ಜಾತಿ ಯವರು ನನ್ನ ಜತೆಗಿರುವುದರಿಂದ ಮತ್ತೆ ಗೆದ್ದು ಬರುತ್ತೇನೆ ಎಂದರು.

75 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು

ಪಾಲಿಕೆ ಮಾಜಿ ಸದಸ್ಯ ಕೇಬಲ್ ಶ್ರೀನಿವಾಸ್ ಮಾತನಾಡಿ, ಕಾಂಗ್ರೆಸ್ ಪಕ್ಷದವರು ಡಂಬಾಚಾರ ಮಾಡಿಕೊಂಡು ಓಡಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಸತೀಶ್ ರೆಡ್ಡಿ ಅವರ ಕೈ ಹಿಡಿಯಲಿದೆ. ಈ ಬಾರಿ ಅವರು 75 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆದ್ದು ಬರುತ್ತಾರೆ. ಇದಕ್ಕೆ ಕಾರ್ಯಕರ್ತರಾದ ನಾವು ಹಗಲಿರುಳು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಸಿಂಗಸಂದ್ರ ವಾರ್ಡ್​ನ ಪ್ರಮುಖ ಬೀದಿಗಳಲ್ಲಿ ಸಾವಿರಾರು ಜನ ಪ್ರಚಾರದಲ್ಲಿ ಭಾಗಿಯಾಗಿದ್ದರು. ಬೃಹತ್ ಹಾರ ಹಾಕುವ ಮೂಲಕ ಸತೀಶ್ ರೆಡ್ಡಿಗೆ ಸ್ವಾಗತ ಕೋರಿದರು. ವಾರ್ಡ್ ಅಧ್ಯಕ್ಷರಾದ ಪ್ರತಿಕ್ಷಾ ರೆಡ್ಡಿ, ಗಣೇಶ್, ಉಮಾ, ರಾಣಿ ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net