ಸಿಎಂ ತವರು ಜಿಲ್ಲೆಯಲ್ಲಿ ಮೋದಿ ಹವಾ; ಕಾಂಗ್ರೆಸ್ ಭ್ರಷ್ಟಾಚಾರದ ಪಕ್ಷ ಎಂದು ವಾಗ್ದಾಳಿ ನಡೆಸಿದ ಪ್ರಧಾನಿ

Modi Haveri
Published on

ಹಾವೇರಿ: ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ಅಪಮಾನ ಮಾಡಿದೆ. ಕಾಂಗ್ರೆಸ್ ಪಕ್ಷದ ವಿರುದ್ಧ ಲಿಂಗಾಯತ ಸಮುದಾಯಕ್ಕೆ ಸಿಟ್ಟಿದೆ. ಸಮುದಾಯದ ಜನರು ಕಾಂಗ್ರೆಸ್​ಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸಿಎಂ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯಲ್ಲಿ ಪ್ರಧಾನಿ ಮೋದಿ ಚುನಾವಣಾ ಬಹಿರಂಗ ಸಮಾವೇಶದಲ್ಲಿ ಮಾತನಾಡುತ್ತಾ, ಕಾಂಗ್ರೆಸ್​ನವರು ಸುಳ್ಳಿನ ಭರವಸೆ ನೀಡುತ್ತಿದ್ದಾರೆ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ. ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ. ಆದರೆ ಕಾಂಗ್ರೆಸ್ ಅಭಿವೃದ್ಧಿಯ ಚಿಂತನೆಯನ್ನೂ ಮಾಡಲ್ಲ. ಬದಲಾಗಿ ಭ್ರಷ್ಟಾಚಾರವನ್ನೇ ಮಾಡುತ್ತಾ ಬಂದಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಭಯೋತ್ಪಾದಕರನ್ನು ಬೆಂಬಲಿಸುತ್ತದೆ

ಕಾಂಗ್ರೆಸ್ ಎಂಬುದು ಭ್ರಷ್ಟಾಚಾರದ ಪಕ್ಷವಾಗಿದ್ದು, ಭಯೋತ್ಪಾದಕರನ್ನು ಬೆಂಬಲಿಸುತ್ತದೆ. ಕಾಂಗ್ರೆಸ್​ನ ತುಷ್ಟೀಕರಣದಿಂದ ಕರ್ನಾಟಕದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್​ಗೆ ತಕ್ಕ ಪಾಠ ಕಲಿಸಲು ಜನರು ಕಾಯುತ್ತಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಸುಳ್ಳು ಗ್ಯಾರಂಟಿ ಘೋಷಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆದರೆ ಸರ್ಕಾರ ರಚಿಸಿದ ಮೇಲೆ ಯಾವುದೇ ಘೋಷಣೆ ಈಡೇರಿಸಿಲ್ಲ ಎಂದು ಕಿಡಿಕಾರಿದರು.

ಗ್ಯಾರಂಟಿ ಯೋಜನೆಗಳನ್ನು ನಂಬಬೇಡಿ

ಕಾಂಗ್ರೆಸ್ ನೀಡುತ್ತಿರುವ ಸುಳ್ಳು ಗ್ಯಾರಂಟಿಗಳನ್ನು ನಂಬಿ ಜನರು ಮೋಸ ಹೋಗುತ್ತಿದ್ದಾರೆ. 50 ವರ್ಷಗಳಿಂದ ಬಡವರ ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ ಮಾಡಿದೆ. ಆದರೆ ಬಿಜೆಪಿಗೆ ಬಡವರ ಕಲ್ಯಾಣ ಮತ್ತು ಸಶಕ್ತೀಕರಗೊಳಿಸುವುದು ಮೊದಲ ಆದ್ಯತೆ. ಬಡವರಿಗೆ ಉಚಿತ ರೇಷನ್, ಆರೋಗ್ಯ ತಪಾಸಣೆ, ಪಿಎಂ ಆವಾಸ್ ಯೋಜನೆ ಮೂಲಕ ಮನೆ ಕೊಟ್ಟಿದ್ದೇವೆ ಎಂದು ಪ್ರಧಾನಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net