

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಾಧ್ಯಮ ಸಲಹೆಗಾರ ಕೆ.ಸಿ. ಸದಾನಂದ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸೋಮವಾರ ರಾತ್ರಿ ಹೃದಯಾಘಾತವಾದ ತಕ್ಷಣ ಬೆಂಗಳೂರು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಪತ್ನಿ, ಪುತ್ರ, ಅಪಾರ ಬಂಧು ಬಳಗವನ್ನು ಸದಾನಂದ ಅಗಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಕ್ರಿಯಾಶೀಲವಾಗಿದ್ದ ಚನ್ನಪಟ್ಟಣದ ಸದಾನಂದ, ಸಂಜೆವಾಣಿ ಸೇರಿದಂತೆ ಹಲವು ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು.
ಎಚ್.ಡಿ.ಕುಮಾರಸ್ವಾಮಿ ಅವರ ನಂಬಿಕಸ್ಥನಾಗಿದ್ದ ಸದಾನಂದ, ಈಗಲೂ ಅವರ ಮಾಧ್ಯಮ ಕಾರ್ಯದರ್ಶಿಯಾಗಿಯೇ ಕೆಲಸ ಮಾಡುತ್ತಿದ್ದರು.
ಸಂತಾಪ: ಕೆ.ಸಿ.ಸದಾನಂದ ಅವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.