More

    ನೋಂದಣಿ ದಾಖಲೆಗಿಲ್ಲ ಸುರಕ್ಷತೆ: ಸಬ್ ರಿಜಿಸ್ಟ್ರಾರ್ ಕಚೇರಿ ಸಿ.ಡಿ.ಗಳಿಗೆ ಹಾನಿ, ಬಹುತೇಕ ಅನುಪಯುಕ್ತ

    ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

    ರಾಜ್ಯ ಸರ್ಕಾರದ ಬೊಕ್ಕಸವನ್ನು ತುಂಬುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮತ್ತೊಂದು ಅವಾಂತರ ಬೆಳಕಿಗೆ ಬಂದಿದ್ದು, ಜನರು ಕರಾರು ನೋಂದಣಿ ದಾಖಲೆಗಳಿಗೆ ಸುರಕ್ಷತೆ ಇಲ್ಲದಂತಾಗಿದೆ. 1997-98ರಿಂದ ಕಾವೇರಿ ಯೋಜನೆ (2004) ಪ್ರಾರಂಭಕ್ಕೂ ಮೊದಲು ನೋಂದಣಿಯಾದ ದಾಖಲೆ ಗಳನ್ನು ಸ್ಕಾ್ಯನಿಂಗ್ ಮಾಡಿ ಸಂಗ್ರಹಿಸಿದ್ದ ಸಿ.ಡಿ.ಗಳು ಸಂಪೂರ್ಣ ನಾಶವಾಗಿವೆ. ಸಾರ್ವಜನಿಕರಿಗೆ ದೃಢೀಕೃತ ಪ್ರತಿ ನೀಡಲು ಸಿ.ಡಿ. ತೆರೆದಾಗ ಅದರಲ್ಲಿನ ಮಾಹಿತಿ ಲಭ್ಯವಾಗುತ್ತಿಲ್ಲ. ಪರಿಣಾಮ, 1997-98ರಿಂದ 2004ರ ನಡುವೆ ಉಪ ನೋಂದಣಿ ಕಚೇರಿಯಲ್ಲಿ ನಡೆದಿರುವ ಕರಾರು ನೋಂದಣಿಗಳ ದೃಢೀಕೃತ ಪ್ರತಿಗಳು ಸಾರ್ವಜನಿಕರಿಗೆ ಲಭ್ಯವಿಲ್ಲದಂತಾ ಗಿದೆ. ಲಕ್ಷಾಂತರ ರೂ. ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಡೆದಿರುವ ಅಧಿಕಾರಿಗಳು ಜನರ ದಾಖಲೆಗಳನ್ನು ಸುರಕ್ಷತೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ.

    ಕಾವೇರಿ ತಂತ್ರಾಂಶ ಯೋಜನೆ ಬರುವ ಮೊದಲು ಕರಾರು ನೋಂದಣಿ ದಾಖಲೆಗಳನ್ನು ಸ್ಕಾ್ಯನಿಂಗ್ ಮಾಡಿ ಇಂಟಿಗ್ರಾ ಸಿ.ಡಿ.ಗಳಲ್ಲಿ ಸಂಗ್ರಹಿಸಲಾಗಿತ್ತು. ಸರ್ವರ್ ಮತ್ತು ಹಾರ್ಡ್​ಡಿಸ್ಕ್ ವ್ಯವಸ್ಥೆ ಇರಲಿಲ್ಲ. ಸಿ.ಡಿ.ಯಲ್ಲಿ ಸಂಗ್ರಹಿಸಲಾಗಿದೆ ಎಂಬ ಕಾರಣಕ್ಕೆ ಬಹುತೇಕ ಉಪ ನೋಂದಣಿ ಕಚೇರಿಗಳಲ್ಲಿ ನಕಲು ಪ್ರತಿಗಳನ್ನೇ ಇಟ್ಟುಕೊಂಡಿರಲಿಲ್ಲ. ಹೀಗಾಗಿ ಸಾವಿರಾರು ನೋಂದಣಿ ದಾಖಲೆಗಳು ನಾಶವಾಗಿವೆ. ಸಾರ್ವಜನಿಕರು ಕೋರ್ಟ್ ವಿಚಾರಣೆ ಇನ್ನಿತರ ವಿಷಯಕ್ಕೆ ನಕಲು ಪ್ರತಿಗಳನ್ನು ಪಡೆಯಲು ಉಪ ನೋಂದಣಿ ಕಚೇರಿಗಳಲ್ಲಿ ಸಾಧ್ಯವಾಗುತ್ತಿಲ್ಲ. ಮೊದಲೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಇದೀಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು 21 ಅಧಿಕಾರಿಗಳ ತಜ್ಞರ ಸಮಿತಿ ರಚನೆ ಮಾಡಿದೆ.

    ನೋಂದಣಿ ಉಪ ಮಹಾಪರಿವೀಕ್ಷಕರ (ಆಡಳಿತ ಮತ್ತು ಕಾನೂನು) ನೇತೃತ್ವದಲ್ಲಿ ಕಾನೂನು, ಆಡಳಿತ, ತಾಂತ್ರಿಕ ಮತ್ತು ಜಿಲ್ಲಾ ನೋಂದಣಾಧಿಕಾರಿಗಳು ಒಳಗೊಂಡ ಸಮಿತಿ ರಚನೆ ಮಾಡಿದೆ. ನಾಶವಾಗಿರುವ ಅಥವಾ ಕೆಲಸಕ್ಕೆ ಬಾರದ ಸಿ.ಡಿ.ಗಳಿಗೆ ಪರಿಹಾರವನ್ನು ಒಂದು ತಿಂಗಳ ಒಳಗಾಗಿ ಚರ್ಚೆ ನಡೆಸಿ ವರದಿ ನೀಡುವಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ಪಿ. ಮೋಹನ್ ರಾಜ್ ಆದೇಶ ಹೊರಡಿಸಿದ್ದಾರೆ.

    ಹಾರ್ಡ್ ಡಿಸ್ಕ್ ವ್ಯವಸ್ಥೆಗೆ ಒತ್ತಾಯ: ಉಪ ನೋಂದಣಿ ಕಚೇರಿಗಳಲ್ಲಿ ಸಾರ್ವ ಜನಿಕರ ದಾಖಲೆಗಳನ್ನು ಸಂಗ್ರಹಿಸುವಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ರಾಜ್ಯದಲ್ಲಿರುವ 255 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಪ್ರತಿದಿನ 3 ಸಿ.ಡಿ.ಗಳು ಬೇಕಾಗಿವೆ. ವರ್ಷಕ್ಕೆ ಅಂದಾಜು 3 ಲಕ್ಷ ಸಿ.ಡಿ.ಗಳಲ್ಲಿ ದಾಖಲೆಗಳನ್ನು ಸ್ಕಾ್ಯನಿಂಗ್ ಮಾಡಿ ಸಂಗ್ರಹಿಸಲಾಗುತ್ತಿದೆ. ಆದರೆ, ಈ ಸಿ.ಡಿ.ಗಳನ್ನು ಸಂಗ್ರಹಿಸಲು ಸೂಕ್ತ ವ್ಯವಸ್ಥೆಯನ್ನೇ ರೂಪಿಸಿಲ್ಲ. ಅಲ್ಲದೆ, ಕೇಂದ್ರ ಕಚೇರಿಯಿಂದ ಸಿ.ಡಿ.ಗಳ ಪೂರೈಕೆಗೂ ಇಲ್ಲದೆ ಇರುವ ಕಾರಣಕ್ಕೆ ಆಯಾ ಸಬ್ ರಿಜಿಸ್ಟ್ರಾರ್ ಅಧಿಕಾರಿಗಳೇ ಸಿ.ಡಿ. ಖರೀದಿಸಿ ಬಳಸುತ್ತಿದ್ದಾರೆ. ಇವು ಎಷ್ಟು ಗುಣಮಟ್ಟವಾಗಿವೆ ಎಂಬುದು ತಿಳಿದಿಲ್ಲ. ಸಿ.ಡಿ. ಬದಲು ಹಾರ್ಡ್ ಡಿಸ್ಕ್ ವ್ಯವಸ್ಥೆ ಜಾರಿಗೆ ತರಬೇಕೆಂಬುದು ಅಧಿಕಾರಿಗಳ ಒತ್ತಾಯವಾಗಿದೆ.

    ಕಡತದಲ್ಲೇ ಉಳಿದಿದೆ ಸುರಭಿ ಯೋಜನೆ: ರಾಜ್ಯ ಸರ್ಕಾರ 2017-18ನೇ ಸಾಲಿನ ಬಜೆಟ್​ನಲ್ಲಿ ಹಳೆಯ ಕಡತಗಳ ಸುರಕ್ಷತೆಗೆ ‘ಸುರಭಿ ಯೋಜನೆ’ (ಸೂಕ್ಷ್ಮರಕ್ಷಣಾ ಅಭಿಲೇಖ) ಘೋಷಣೆ ಮಾಡಿ 25 ಕೋಟಿ ರೂ. ಮೀಸಲಿಟ್ಟರೂ ಅನುಷ್ಠಾನಕ್ಕೆ ತರುವಲ್ಲಿ ಹಿರಿಯ ಅಧಿಕಾರಿಗಳು ವಿಳಂಬ ಧೋರಣೆ ತಾಳಿದ್ದಾರೆ. ಕರ್ನಾಟಕ ಈಗಿನ ಭೂಭಾಗಗಳು ಸ್ವಾತಂತ್ರ್ಯಪೂರ್ವದಲ್ಲಿ ಮದ್ರಾಸ್, ಬಾಂಬೆ, ಹೈದರಾಬಾದ್ ಪ್ರಾಂತ್ಯಗಳಲ್ಲಿದ್ದವು. ಉರ್ದು, ತಮಿಳು, ತೆಲುಗು, ಮಲೆಯಾಳಂ, ಮರಾಠಿ ಭಾಷೆಗಳಲ್ಲಿ ದಾಖಲೆಗಳು ಇವೆ. 1867ರಿಂದ 2004ರವರೆಗೆ ಆಸ್ತಿ ಖರೀದಿ, ಮಾರಾಟ, ದಾನ, ವಿಭಾಗ, ಕ್ರಯ ಸಂಬಂಧ ಭೂದಾಖಲೆಗಳನ್ನು ಆಯಾ ತಾಲೂಕು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಬ್ರಿಟಿಷರ ಕಾಲದಂತೆ ಬಟ್ಟೆ ಕಟ್ಟಿ ಸಂಗ್ರಹಿಸಲಾಗಿದೆ. ಡಿಜಿಟಲ್ ಸೌಲಭ್ಯ ತರುವಲ್ಲಿ ಅಧಿಕಾರಿಗಳು ಪೈಲಟ್ ಯೋಜನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

    ಎರಡೂ ಡೋಸ್ ಲಸಿಕೆ ಪಡೆದವರಿಗಿಂತಲೂ ಇವರಲ್ಲೇ ಹೆಚ್ಚು ರೋಗನಿರೋಧಕ ಶಕ್ತಿ!; ಯಾರಿವರು?

    ‘ಕಪಿಲ್​ದೇವ್’ ವರ್ಗಾವಣೆ, ‘ಬೌಂಡರಿ’ ಮೀರಿದ ಸಂಭ್ರಮ!; ಖಾಕಿ ಖದರಿಗೆ ಮುದುರಿತಾ ಕೋವಿಡ್ ನಿಯಮ?

    ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts