More

    4 ಲಕ್ಷ ಮಕ್ಕಳಲ್ಲಿ ಅಪೌಷ್ಟಿಕತೆ: ಕರೊನಾ 3ನೇ ಅಲೆ ಬಂದರೆ ಅಪಾಯ..

    | ಪಂಕಜ ಕೆ.ಎಂ. ಬೆಂಗಳೂರು

    ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಸಂಪೂರ್ಣ ನಿಯಂತ್ರಣಕ್ಕೆ ಬರುವ ಮುನ್ನವೇ ಡೆಲ್ಟಾ ಪ್ರಕರಣಗಳು ಸದ್ದು ಮಾಡುತ್ತಿದ್ದು, ಈಗಾಗಲೇ ತಜ್ಞರು ಮೂರನೇ ಅಲೆಯ ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಕೋವಿಡ್ ನಂತರ ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಶೇ.30 ಹೆಚ್ಚಳವಾಗಿದೆ ಎಂಬ ಅಂಶ ಬೆಳಕಿಗೆ ಬಂದಿದ್ದು, ಪಾಲಕರಲ್ಲಿ ಆತಂಕ ಹೆಚ್ಚಾಗಿದೆ.

    ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ರಾಜ್ಯ ಶಾಖೆಯ ಮಕ್ಕಳ ಆರೋಗ್ಯ ಸ್ಥಾಯಿ ಸಮಿತಿ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ) ರಾಜ್ಯಾದ್ಯಂತ ಸಂಗ್ರಹಿಸಿರುವ ಮಾಹಿತಿ ಪ್ರಕಾರ 6 ವರ್ಷದೊಳಗಿನ 4 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮೂರನೇ ಅಲೆಯಲ್ಲಿ ಈ ಮಕ್ಕಳಿಗೆ ಸೋಂಕು ತಗಲುವ ಸಾಧ್ಯತೆಗಳು ಹೆಚ್ಚಿದ್ದು, ಹಾಗಾದಲ್ಲಿ ಸೋಂಕಿತ ಮಕ್ಕಳ ಸಾವಿನ ಪ್ರಮಾಣ ಹೆಚ್ಚಲಿದೆ ಎಂದು ಮಕ್ಕಳ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

    4 ಲಕ್ಷ ಮಕ್ಕಳಿಗೆ ಅಪೌಷ್ಟಿಕತೆ: ರಾಜ್ಯಾದ್ಯಂತ 34.74 ಲಕ್ಷ ಮಕ್ಕಳು ಅಂಗವಾಡಿ ಕೇಂದ್ರಗಳಲ್ಲಿ ದಾಖಲಾತಿ ಹೊಂದಿದ್ದಾರೆ. ಅವರಲ್ಲಿ 3.87 ಲಕ್ಷ (ಶೇ. 11.14) ಮಕ್ಕಳು ಅಪೌಷ್ಟಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಉಳಿದಂತೆ 6-18 ವರ್ಷದ ಮಕ್ಕಳಲ್ಲೂ ಅಪೌಷ್ಟಿಕತೆ ಪ್ರಕರಣಗಳು ಹೆಚ್ಚಿದ್ದು, ಸಮೀಕ್ಷೆ ನಡೆಯುತ್ತಿದೆ. ಈಗಾಗಲೇ ಅಪೌಷ್ಟಿಕತೆಯಿಂದ ಬಸವಳಿದಿರುವ ಈ ಮಕ್ಕಳು ನಿಶಕ್ತರಾಗಿದ್ದಾರೆ. ಹೀಗಿರುವಾಗ ಇಂತಹ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡರೆ ಗುಣಮುಖರಾಗುವುದು ಸುಲಭಸಾಧ್ಯವಲ್ಲ ಎನ್ನುತ್ತಾರೆ ಐಎಂಎ ರಾಜ್ಯ ಶಾಖೆಯ ಮಕ್ಕಳ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ. ಶ್ರೀನಿವಾಸ್. 2.10 ಲಕ್ಷ ಮಕ್ಕಳಿಗೆ ಸೋಂಕು

    ರಾಜ್ಯದಲ್ಲಿ ಎರಡನೇ ಅಲೆಯಲ್ಲಿ (ಮಾ. 24 ರಿಂದ ಜು.1ರವರೆಗೆ) 98 ದಿನಗಳಲ್ಲಿ 2,10,353 ಮಕ್ಕಳು ಸೋಂಕಿನಿಂದ ಬಳಲಿದ್ದಾರೆ. 80 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ 0-9 ವರ್ಷದ 59,542 (35 ಸಾವು) ಹಾಗೂ 10-18 ವರ್ಷದ 1,50,811(45)ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ. ಇದಲ್ಲದೆ ಲಕ್ಷಣ ರಹಿತ ಸೋಂಕಿತ (ಎ ಸಿಮ್ಟಮ್ಯಾಟಿಕ್) ಮಕ್ಕಳಲ್ಲಿ ಸೋಂಕಿಗೆ ಒಳಗಾದ ಬಹಳಷ್ಟು ಮಕ್ಕಳು ಎರಡು ವಾರಗಳ ನಂತರ ಮಲ್ಟಿಸಿಸ್ಟಮ್ ಇನ್​ಫ್ಲಮೇಟರಿ ಸಿಂಡ್ರೋಮ್ (ಎಂಐಎಸ್) ನಿಂದ ಬಳಲುತ್ತಿದ್ದಾರೆ. ಸೋಂಕಿತ ಮಕ್ಕಳಲ್ಲಿ ಮರಣ ಪ್ರಮಾಣ ಶೇ. 0.1 ಇದೆಯಾದರೂ, ಮೂರನೇ ಅಲೆಯಲ್ಲಿ ಸೋಂಕು ಹಾಗೂ ಸಾವಿನ ಪ್ರಮಾಣ ಹೆಚ್ಚುವ ಸಾಧ್ಯತೆಗಳಿವೆ ಎನ್ನುತ್ತಾರೆ ತಜ್ಞರು.

    ಅಪೌಷ್ಟಿಕ ಮಕ್ಕಳಲ್ಲಿ ಸೋಂಕು ತೀವ್ರತೆ ಹೆಚ್ಚು: ರಾಜ್ಯದ ಬಹತೇಕ ಮಕ್ಕಳು ಅಂಗನವಾಡಿಯಲ್ಲಿನ ನೀಡುವ ಪೌಷ್ಟಿಕ ಆಹಾರ ಮತ್ತು ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನೇ ಅವಲಂಬಿಸಿದ್ದರು. ಆದರೆ ಕೋವಿಡ್ ನಂತರದಲ್ಲಿ ಅಂಗನವಾಡಿ ಕೇಂದ್ರಗಳು ಹಾಗೂ ಶಾಲೆಗಳು ನಡೆಯುತ್ತಿಲ್ಲವಾದ್ದರಿಂದ ಇದನ್ನೇ ನಂಬಿಕೊಂಡಿದ್ದ ಮಕ್ಕಳಿಗೆ ಸರಿಯಾದ ಆಹಾರ ದೊರೆಯದೆ ಅಪೌಷ್ಟಿಕತೆ ಹೆಚ್ಚಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಈ ಸಮಸ್ಯೆ ಹೆಚ್ಚು ವರದಿಯಾಗಿದೆ. ಈ ಸಮಸ್ಯೆ ಎದುರಿಸುತ್ತಿರುವ ಮಕ್ಕಳಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿ ಮರಣ ಪ್ರಮಾಣ ಹೆಚ್ಚಾಗಲಿದೆ. ಹಾಗಾಗಿ ಈ ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸುವ ಅಗತ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ.

    ಪೂರ್ಣ ಹಾಜರಿಗೆ ಸೂಚನೆ: ರಾಜ್ಯದಲ್ಲಿ ಕರೊನಾ ನಿಯಂತ್ರಣಕ್ಕೆ ಬಂದಿರುವುದರಿಂದ ಸಚಿವಾಲಯದ ಎಲ್ಲ ಇಲಾಖೆಗಳಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿ ಶೇ.100 ಹಾಜರಾತಿ ಯೊಂದಿಗೆ ಕಾರ್ಯನಿರ್ವಹಿಸ ಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ನಡುವೆ, ದೃಷ್ಟಿ ಹೀನ, ಹಾಗೂ ಇತರೆ ದೈಹಿಕ ಅಂಗವೈಕಲ್ಯ ಹೊಂದಿರುವ ಅಧಿಕಾರಿ, ಸಿಬ್ಬಂದಿ, ಗರ್ಭಿಣಿಯರು ಜುಲೈ 19ರವರೆಗೆ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ.

    ಸ್ಥೂಲಕಾಯ ಮಕ್ಕಳಿಗೂ ಅಪಾಯ: ಗ್ರಾಮೀಣ ಪ್ರದೇಶದ ಮಕ್ಕಳು ಅಪೌಷ್ಟಿಕ ಸಮಸ್ಯೆ ಎದುರಿಸುತ್ತಿದ್ದರೆ. ನಗರ ಪ್ರದೇಶದ ಬಹಳಷ್ಟು ಮಕ್ಕಳು ಚಟುವಟಿಕೆಗಳಿಲ್ಲದೆ ಸ್ಥೂಲಕಾಯ (ಒಬೆಸಿಟಿ) ಸಮಸ್ಯೆ ಹೊಂದಿದ್ದಾರೆ. ಹಾಗೆಂದು ಈ ಮಕ್ಕಳು ಆರೋಗ್ಯವಂತರು ಎಂದು ಹೇಳಲಾಗದು. ಮಕ್ಕಳು ಸೇವಿಸುವ ಆಹಾರ ದೇಹಕ್ಕೆ ಸೂಕ್ತ ರೀತಿಯಲ್ಲಿ ಪೋಷಕಾಂಶಗಳನ್ನು ಒದಗಿಸಲು ಚಟುವಟಿಕೆ ಬಹಳ ಮುಖ್ಯ. ಅದಿಲ್ಲವಾದರೆ ಆಹಾರದ ಉಪಯೋಗ ಆಗುವುದಿಲ್ಲ. ಹಾಗಾಗಿ ಸ್ಥೂಲಕಾಯ ಹೊಂದಿರುವ ಮಕ್ಕಳನ್ನೂ ಸಹ ಅಪೌಷ್ಟಿಕ ಮಕ್ಕಳೆಂದೇ ಗುರುತಿಸಲಾಗುವುದು ಎಂದು ಡಾ. ಶ್ರೀನಿವಾಸ್ ತಿಳಿಸಿದರು.

    ರಾಜ್ಯದಲ್ಲಿ ಕೋವಿಡ್ ನಂತರ ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ಶೇ.30 ಹೆಚ್ಚಳವಾಗಿದೆ. 6 ವರ್ಷದೊಳಗಿನ ಸುಮಾರು 4 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಹೊಂದಿರುವ 7 -18 ವರ್ಷದ ಮಕ್ಕಳ ಸಮೀಕ್ಷೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಮೂರನೇ ಅಲೆ ಬಂದಲ್ಲಿ ಈ ಮಕ್ಕಳಿಗೆ ಅಪಾಯ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅವರಿಗೆ ಪೌಷ್ಟಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ.

    | ಡಾ. ಶ್ರೀನಿವಾಸ್ ಅಧ್ಯಕ್ಷರು ಐಎಂಎ ರಾಜ್ಯ ಶಾಖೆಯ ಮಕ್ಕಳ ಆರೋಗ್ಯ ಸ್ಥಾಯಿ ಸಮಿತಿ

    ಕೋವಿಡ್ ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಅವರಿಗೆ 14 ದಿನ ಪೌಷ್ಟಿಕ ಆಹಾರ ಹಾಗೂ ಚಿಕಿತ್ಸೆ ನೀಡುವ ಪ್ರಾಯೋಗಿಕ ಕಾರ್ಯಕ್ರವನ್ನು ಬಳ್ಳಾರಿ ಮತ್ತು ವಿಜಯಪುರದಲ್ಲಿ ಹಮ್ಮಿಕೊಳ್ಳಲಾಗಿದೆ. ಇದರ ಯಶಸ್ಸು ಆಧರಿಸಿ ರಾಜ್ಯಾದ್ಯಂತ ಈ ಕಾರ್ಯಕ್ರಮ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು.

    | ಡಾ. ಅಶೋಕ್ ದಾತರ್ ರಾಜ್ಯ ಶಾಖೆ ಅಧ್ಯಕ್ಷರು, ಇಂಡಿಯನ್ ಅಸೋಸಿಯೇಷನ್ ಆಫ್ ಪೀಡಿಯಾಟ್ರಿಕ್ಸ್

    ಎರಡೂ ಡೋಸ್ ಲಸಿಕೆ ಪಡೆದವರಿಗಿಂತಲೂ ಇವರಲ್ಲೇ ಹೆಚ್ಚು ರೋಗನಿರೋಧಕ ಶಕ್ತಿ!; ಯಾರಿವರು?

    ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts