ಪೊಲೀಸರಿಂದ ಸಾಹಿತಿ ಹಂಪನಾ ವಿಚಾರಣೆ: ಮಂಡ್ಯ ಎಸ್ಪಿ ವಿಷಾದ

Hampana
Published on

ಬೆಂಗಳೂರು: ಕೇಂದ್ರ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದ ಹಿರಿಯ ಸಂಶೋಧಕ, ಸಾಹಿತಿ ಹಂ.ಪ. ನಾಗರಾಜಯ್ಯ ಅವರನ್ನು ಮಂಡ್ಯ ಪಶ್ಚಿಮ ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಂತೆ ಪೊಲೀಸ್​ ನಡೆಗೆ ಸಾಹಿತ್ಯ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಹಂ.ಪ. ನಾಗರಾಜಯ್ಯ ಅವರನ್ನ ಠಾಣೆಗೆ ಕರೆಸಿದ್ದಕ್ಕೆ ಮಂಡ್ಯ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ಪರಶುರಾಮ ವಿಷಾದ ವ್ಯಕ್ತಪಡಿಸಿದ್ದಾರೆ.

ಹಂ.ಪ.ನಾಗರಾಜಯ್ಯ ಅವರು ಖ್ಯಾತ ಸಾಹಿತಿಗಳು ಹಾಗೂ ಹಿರಿಯ ನಾಗರೀಕರಾಗಿದ್ದು, ಅವರು ಪೊಲೀಸ್​ ಠಾಣೆಗೆ ಬಂದು ಹೇಳಿಕೆ ನೀಡುವ ಸನ್ನಿವೇಶ ಉದ್ಭವಿಸಿದ ಬಗ್ಗೆ ವಿಷಾದ ವ್ಯಕ್ತಪಡಿಸಲಾಗಿದೆ. ಹಾಗೂ ಈ ಘಟನೆಯ ಬಗ್ಗೆ ವಿಚಾರನೆ ನಡೆಸಿ ವರದಿ ಸಲ್ಲಿಸುವಂತೆ ಮಂಡ್ಯ ಉಪ ವಿಭಾಗದ ಡಿಎಸ್​ಪಿ ಅವರಿಗೆ ಸೂಚಿಸಲಾಗಿದೆ ಎಂದು ಎಸ್ಪಿ ಅವರು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿರಿ ನನ್ನ ಮನೆಗೆ ನುಗ್ಗಿ ಬಲವಂತವಾಗಿ ಮಗಳಿಗೆ ತಾಳಿ ಕಟ್ಟೇಬಿಟ್ಟ: ಪ್ಲೀಸ್​.. ನನ್ನ ಮಗಳನ್ನು ಕಾಪಾಡಿ…

ಜ.17ರಂದು ನಡೆದ ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ್ದ ಸಾಹಿತಿ ಹಂಪನಾ, ನಮ್ಮ ಪ್ರಜಾಪ್ರಭುತ್ವ ಅಂತ್ಯತ ಕೆಟ್ಟ ಸ್ಥಿತಿಗೆ ಬಂದು‌ ನಿಂತಿದೆ. ರೈತರು 50 ದಿನಗಳ ಕಾಲ ಚಳಿಯನ್ನೂ ಲೆಕ್ಕಿಸದೆ ದೆಹಲಿಯಲ್ಲಿ ಹೋರಾಟ ಮಾಡಿದದರೂ ಕೇಂದ್ರ ಸರ್ಕಾರ ರೈತಪರ- ಜನಪರವಾಗಿ ವರ್ತಿಸುತ್ತಿಲ್ಲ. ಧರ್ಮರಾಯನ ಮುಖವಾಡ ಧರಿಸಿ ದುರ್ಯೋಧನನಂತೆ ವರ್ತಿಸುತ್ತಿದೆ. ಗೋಮುಖ ವ್ಯಾಘ್ರನಂತಿದೆ ಎಂದು ಟೀಕಿಸಿದ್ದರು.

ಅಲ್ಲದೆ ನಾನು ನಾನು ಯಾವುದೇ ಪಕ್ಷದ ಪರವಾಗಿಲ್ಲ. ಕೆಂಗಲ್ ಹನುಮಂತಯ್ಯ , ದೇವರಾಜ ಅಸರು ಅವರು ನನ್ನ ಕರೆದ್ರು‌ ನಾನು ರಾಜಕೀಯಕ್ಕೆ ಹೋಗಿಲ್ಲ. ಕೇಂದ್ರ ಸರ್ಕಾರ ಬಹಳ ಯಶಸ್ವಿಯಾಗಿ ಮೇಲೆ‌ ಬಂತು. ಕ್ಲೈಮ್ಯಾಕ್ಸ್ ತಲುಪಿದ ಮೇಲೆ ಆ್ಯಂಟಿ ಕ್ಲೈಮ್ಯಾಕ್ಸ್ ರೀತಿ ಆಗುತ್ತಿದೆ. ಕೇಂದ್ರ ಸರ್ಕಾರ ಸೇಡಿನ ಪ್ರತೀಕಾರದ ರಾಜಕಾರಣವನ್ನು ಬಿಡಬೇಕು ಎಂದಿದ್ದರು. ಈ ಹೇಳಿಕೆ ಖಂಡಿಸಿ ಹಂ.ಪ.ನಾಗರಾಜಯ್ಯ ಅವರ ವಿರುದ್ಧ ಬಿಜೆಪಿ ಕಾರ್ಯಕರ್ತ ಮಾ.ರವಿ ಎಂಬುವರು ಜ.19ರಂದು ದೂರು ನೀಡಿದ್ದರು. ಹಂ.ಪ.ನಾಗರಾಜಯ್ಯ ಅವರು ಪ್ರಧಾನಿ ಮಂತ್ರಿಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ, ಅಲ್ಲದೆ ಜನತೆಗೆ ತಪ್ಪು ಸಂದೇಶ ನೀಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ವಿವರಿಸಿದ್ದರು. ಇದನ್ನೂ ಓದಿರಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಡಾ.ದೊಡ್ಡರಂಗೇಗೌಡ ಆಯ್ಕೆ

ಜ.20ರಂದು ದೂರವಾಣಿ ಮೂಲಕ ಹಂ.ಪ.ನಾಗರಾಜಯ್ಯ ಅವರಿಗೆ ದೂರಿನ ಅರ್ಜಿಯ ಬಗ್ಗೆ ಮಂಡ್ಯ ಪಶ್ಚಿಮ ಠಾಣೆ ಪಿಎಸ್​ಐ ಮಾಹಿತಿ ನೀಡಿದ್ದರು. ಜ.21ರಂದು ಠಾಣೆಗೆ ಹಾಜರಾಗಿದ ಹಂ.ಪ.ನಾಗರಾಜಯ್ಯ ಅವರಿಂದ ಪೊಲೀಸರು ಹೇಳಿಕೆ ಪಡೆದು ಕಳುಹಿಸಿದ್ದರು.

ಈ ವಿಷಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ ‘‘ಕನ್ನಡದ ಹಿರಿಯ ಸಾಹಿತಿಯೊಬ್ಬರನ್ನು ಹೀಗೆ ವಿಚಾರಣೆಗೆ ಕರೆಸಿದ್ದೇ ತಪ್ಪು. ಸರ್ಕಾರದ ವಿರುದ್ಧ ಯಾರೂ ಮಾತನಾಡಬಾರದು ಎಂಬುದು ಸರ್ವಾಧಿಕಾರಿ ಧೋರಣೆ. ಪೊಲೀಸರು ಕೂಡಲೇ ಕ್ಷಮೆ ಯಾಚಿಸಬೇಕು’’ ಎಂದು ಕನ್ನಡ ಸಾಹಿತ್ಯ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಮಂಡ್ಯ ಎಸ್ಪಿ ವಿಷಾದ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net