ಶವಗಳ ಮೇಲೆಯೇ ಓಡಾಡಿದ ಜನ... ಬೆಚ್ಚಿಬೀಳಿಸುತ್ತೆ ಶಿವಮೊಗ್ಗದಲ್ಲಿನ ಸ್ಫೋಟದ ಭೀಕರತೆ

shimogga blast
Published on

ಶಿವಮೊಗ್ಗ: ಹುಣಸೊಡು ಬಳಿಯ ಕಲ್ಲುಕ್ವಾರಿ ಮತ್ತು ಕ್ರಷರ್​ನಲ್ಲಿ ಗುರುವಾರ ರಾತ್ರಿ ಸ್ಫೋಟಗೊಂಡದ್ದು ಒಮ್ಮೆ ಮಾತ್ರವಲ್ಲ, ಎರಡು ಭಾರಿ! 10.30ರ ಸುಮಾರಿಗೆ ಒಮ್ಮೆ ಸಣ್ಣ ಪ್ರಮಾಣದಲ್ಲಿ ಸ್ಫೋಟದ ಶಬ್ದ ಬಂದ ಮರುಕ್ಷಣದಲ್ಲೇ ಬಾರೀ ಶಬ್ದ ಕೇಳಿಬಂದಿದೆ. ಮಕ್ಕಳು, ಗರ್ಭಿಣಿಯರು, ಮಹಿಳೆಯರು ಸೇರಿದಂತೆ ಇಡೀ ಊರಿಗೆ ಊರಿನ ಜನರೇ ಆತಂಕಗೊಂಡು ಮನೆಗಳಿಂದ ಹೊರ ಬಂದಿದ್ದಾರೆ. ವಿದ್ಯುತ್​ ಸಂಪರ್ಕವೂ ಕಡಿತಗೊಂಡಿದೆ. ಏನಾಗ್ತಿದೆ ಅನ್ನುವಷ್ಟರಲ್ಲಿ ಇಡೀ ಪ್ರದೇಶ ದಟ್ಟಹೊಗೆ ಆವರಿಸಿದ್ದು, ಗಬ್ಬುವಾಸನೆ ಬಂದಿದೆ.

ಜಿಲೆಟಿನ್​ ತುಂಬಿದ್ದ ಲಾರಿ ಸ್ಫೋಟಗೊಂಡು ಸುಟ್ಟುಕರಕಲಾಗಿದೆ. ಅಲ್ಲಿದ್ದ 50ಕ್ಕೂ ಹೆಚ್ಚಿ ಲಾರಿಗಳು, ಜೆಸಿಬಿಗಳಿಗೂ ಹಾನಿಯಾಗಿದ್ದು, ಇಡೀ ಪ್ರದೇಶ ಬೆಂಕಿಯ ಕೆನ್ನಾಲಗೆಯಲ್ಲಿ ಹೊತ್ತಿ ಉರಿದಿದೆ. ಘಟನೆ ನಡೆದ ಸ್ಥಳದಲ್ಲಿದ್ದವರ ದೇಹ ಛಿದ್ರಛಿದ್ರಗೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇದ್ಯಾವುದರ ಅರಿವು ಇಲ್ಲದ ಸ್ಥಳೀಯ ಗ್ರಾಮಸ್ಥರು, ಕ್ವಾರಿ ಮೇಲೆ ದಾಳಿ ಮಾಡಲೆಂದು ರಾತ್ರಿಯೇ ಹೋಗಿದ್ದರು. ಕತ್ತಲು ಆವರಿಸಿದ್ದರಿಂದ ಮೃತದೇಹಗಳ ಮೇಲೆಯೇ ಓಡಾಡಿದ್ದಾರೆ ಎಂದು ತಿಳಿದುಬಂದಿದೆ.

ಹುಣಸೊಡು, ಬಸವಗಂಗೂರು, ಕಲ್ಲಗಂಗೂರು, ದೇವಕತಿಕೊಪ್ಪ, ಮೊಜಪ್ಪನ ಹೊಸೂರು, ಗೆಜ್ಜೆನಹಳ್ಳಿ ಭಾಗದಲ್ಲಿ‌ 150ಕ್ಕೂ ಹೆಚ್ಚು ಕ್ರಷರ್ ಮತ್ತು ಕ್ವಾರಿಗಳಿವೆ. ಅಬ್ಬಲಗೆರೆಯಿಂದ ಹುಣಸೋಡು, ಕಲ್ಲಗಂಗೂರು, ಹೊಸೂರು, ಗೆಜ್ಜೆನಹಳ್ಳಿ ಮಾರ್ಗವಾಗಿ ಕಿರಿದಾದ ರಸ್ತೆ ಇದ್ದು, ಕ್ರಷರ್​ ಲಾರಿಗಳ ಆರ್ಭಟಕ್ಕೆ ನಿತ್ಯ ಬೆಸ್ತುಬೀಳುತ್ತಿದ್ದ ಜನರು, ಗುರುವಾರ ರಾತ್ರಿ ಸಂಭವಿಸಿದ ಸ್ಫೋಟದ ಶಬ್ದಕ್ಕೆ ಅಕ್ಷರಶಃ ನಲುಗಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ಇದುವರೆಗೂ ಛಿದ್ರಛಿಧ್ರಗೊಂಡ 5 ಮೃತದೇಹಗಳು ಸಿಕ್ಕಿದೆ. ನಿನ್ನೆ ರಾತ್ರಿಯೇ 2 ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net