ಮದ್ದೂರಿನಲ್ಲಿ ತಾಯಿ, ಮಕ್ಕಳು ಸಾವು ಪ್ರಕರಣ: ಗಂಡನ ಫೋನ್​ನಲ್ಲಿ ಬಯಲಾದ ರಹಸ್ಯವೇ ಈ ದುರಂತಕ್ಕೆ ಕಾರಣ

Mandya Case
Published on

ಮಂಡ್ಯ: ತಾಯಿಯೊಬ್ಬಳು ತನ್ನ ಮೂವರು ಮಕ್ಕಳಿಗೆ ವಿಷವುಣಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮದ್ದೂರಿನ ಜನತೆಯನ್ನು ನಿನ್ನೆ ಆಘಾತಕ್ಕೆ ದೂಡಿತ್ತು. ಕೌಟುಂಬಿಕ ಕಲಹವೇ ಈ ಹೃದಯ ವಿದ್ರಾವಕ ಘಟನೆಗೆ ಕಾರಣ ಎನ್ನಲಾಗಿತ್ತು. ಇದೀಗ ಮತ್ತಷ್ಟು ಸಂಗತಿಗಳು ಬಯಲಾಗಿದ್ದು, ಗಂಡನ ಅಕ್ರಮ ಸಂಬಂಧವೇ ಈ ಮಹಾ ದುರಂತಕ್ಕೆ ಕಾರಣ ಎಂಬುದು ಇದೀಗ ಬಯಲಾಗಿದೆ.

ಉಸ್ನಾ ಕೌಸರ್ (30) ಎಂಬಾಕೆಯೇ ತನ್ನ ಮೂರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಹಿಳೆ. ಮದ್ದೂರಿನ ಹೊಳೆಬೀದಿಯಲ್ಲಿ ವಾಸವಿದ್ದ ಉಸ್ನಾ ಕೌಸರ್ ತನ್ನ ಮಕ್ಕಳಾದ ಹ್ಯಾರಿಸ್ (7), ಆಲಿಸಾ (4) ಮತ್ತು ಅನಮ್ ಫಾತಿಮಾ (2) ಎಂಬ ಪುಟ್ಟ ಮಕ್ಕಳನ್ನು ಕೊಂದು ಪ್ರಾಣ ಬಿಟ್ಟಿದ್ದಾಳೆ.

ಕಣ್ಣೆದುರೇ ಮಕ್ಕಳು ಮೃತಪಟ್ಟ ಬಳಿಕ ಉಸ್ನಾ ಕೌಸರ್ ನೇಣುಬಿಗಿದುಕೊಂಡು ಮೃತಪಟ್ಟಿದ್ದಾಳೆ. ಗಂಡ ಅಖಿಲ್ ಅಹಮದ್ ಅಕ್ರಮ ಸಂಬಂಧಕ್ಕೆ ಬೇಸತ್ತು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಏನು ಅರಿಯದ ಕಂದಮ್ಮಗಳು ಸಹ ಅಪ್ಪನ ಅನಾಚಾರಕ್ಕೆ ಬಲಿಯಾಗಿವೆ.

ಅಂದಹಾಗೆ ಅಖಿಲ್​ ಅಹಮದ್​ ಚನ್ನಪಟ್ಟಣದಲ್ಲಿ ಕಾರ್ ಮೆಕಾನಿಕ್ ಆಗಿದ್ದ. ಮುದ್ದಾದ ಕುಟುಂಬವಿದ್ದರೂ ಪರಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಯಾವಾಗ ಆತನ ಮೊಬೈಲ್​ನಲ್ಲಿ ಪರಸ್ತ್ರೀಯ ಬೆತ್ತಲೆ ಚಿತ್ರ ಹಾಗೂ ಆತನ ಫೋಟೋಗಳು ಪತ್ತೆಯಾದವು, ಆಗ ಕೌಸರ್​ ಪ್ರಶ್ನೆ ಮಾಡಿದ್ದಳು. ಇದೇ ವಿಚಾರಕ್ಕೆ ಮನೆಯಲ್ಲಿ ಜೋರು ಗಲಾಟೆ ನಡೆದಿತ್ತು. ನಂತರ ಇಬ್ಬರನ್ನು ಪಾಲಕರು ರಾಜಿ ಮಾಡಿದ್ದರು. ಅಕ್ರಮ ಸಂಬಂಧ ಬಿಡುವುದಾಗಿ‌ ಅಖಿಲ್ ಮಾತು ಕೊಟ್ಟಿದ್ದ.

ನಿನ್ನೆ ಉರುಫ್ ಹಿನ್ನೆಲೆ ಬೇಗ ಮನೆಗೆ ಬರ್ತೀನಿ ಎಂದು ಅಖಿಲ್​ ಕೆಲಸಕ್ಕೆ‌ ಹೋಗಿದ್ದ. ಆದರೆ, ಹೇಳಿದಂತೆ ಸಂಜೆ ಬೇಗ ಮನೆಗೆ ಬರಲಿಲ್ಲ. ಇದರಿಂದಾಗಿ ಕೌಸರ್ ಮತ್ತು ಅಖಿಲ್ ನಡುವೆ ಫೋನ್‌ ಮೂಲಕವೇ ಮತ್ತೆ ಜಗಳ ನಡೆದಿತ್ತು. ಖಾಸಗಿ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ಕೌಸರ್, ಗಂಡನ ನಡೆಯಿಂದ ತೀವ್ರವಾಗಿ ಬೇಸತ್ತಿದ್ದಳು. ಸಂಜೆ ಮನೆಗೆ ಬಂದ ಕೌಸರ್​ ಅನ್ನದಲ್ಲಿ ಮಕ್ಕಳಿಗೆ ವಿಷ ಹಾಕಿ, ತಿನ್ನಿಸಿ, ಅವರು ಸತ್ತ ಬಳಿಕ ತಾನೂ ನೇಣಿಗೆ ಶರಣಾಗಿದ್ದಾಳೆ.

ಕೌಸರ್​ ಆತ್ಮಹತ್ಯೆ ಮಾಡಿಕೊಂಡಿಲ್ಲ, ಗಂಡ ಅಖಿಲ್ ಕೊಲೆ ಮಾಡಿದ್ದಾನೆ ಎಂದು ಕೌಸರ್ ಪೋಷಕರು ಆರೋಪ ಮಾಡಿದ್ದಾರೆ. ಘಟನೆಯ ಬೆನ್ನಲ್ಲೇ ಅಖಿಲ್ ಅಹಮದ್ ಹಾಗೂ ಕುಟುಂಬ ನಾಪತ್ತೆಯಾಗಿದೆ. ಈ ಸಂಬಂಧ ಮದ್ದೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net