More

    ವಿಜಯಾನಂದ ಚಿತ್ರದಲ್ಲಿ ವಿಭಿನ್ನ ಶೈನ್; ಉತ್ತರ ಕರ್ನಾಟಕದ ಘಾಟಿ ಹುಡುಗನ ಪಾತ್ರದಲ್ಲಿ ನಟನೆ

    ಬೆಂಗಳೂರು: ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಚಿತ್ರ ಹಲವು ವಿಶೇಷತೆಗಳಿಂದ ಕೂಡಿದೆ. ಕನ್ನಡಿಗರೇ ನಿರ್ವಿುಸಿರುವ, ಕನ್ನಡದ ಸಾಧಕನ ಕುರಿತ ಮೊದಲ ಬಯೋಪಿಕ್, ಕನ್ನಡಿಗರ ಮೊದಲ ಪ್ಯಾನ್ ಇಂಡಿಯಾ ಬಯೋಪಿಕ್ ಎಂಬ ಹೆಗ್ಗಳಿಕೆ ಚಿತ್ರಕ್ಕೆ ಸಲ್ಲುತ್ತದೆ. ಈಗಾಗಲೇ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಹೀಗೆ ಐದು ಭಾಷೆಗಳಲ್ಲು ಟೀಸರ್, ಟ್ರೇಲರ್ ಮತ್ತು ಹಾಡು ವೈರಲ್ ಆಗಿವೆ. ವಿಆರ್​ಎಲ್ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಡಾ. ಆನಂದ ಸಂಕೇಶ್ವರ ನಿರ್ವಿುಸಿರುವ ‘ವಿಜಯಾನಂದ’ ಚಿತ್ರವನ್ನು ರಿಷಿಕಾ ಶರ್ಮಾ ನಿರ್ದೇಶಿಸಿದ್ದಾರೆ.

    ಕೆಲವು ದಿನಗಳ ಹಿಂದಷ್ಟೇ ಬಿಡುಗಡೆಯಾದ ‘ವಿಜಯಾನಂದ’ಚಿತ್ರದ ಟ್ರೇಲರ್ ಯೂಟ್ಯೂಬ್​ನಲ್ಲಿ ವೈರಲ್ ಆಗಿದೆ. ಕನ್ನಡದಲ್ಲಿ ನಟ ಶೈನ್ ಶೆಟ್ಟಿ ಲುಕ್ ಮತ್ತು ಉತ್ತರ ಕರ್ನಾಟಕ ಶೈಲಿಯ ಡೈಲಾಗ್ ನೋಡಿ ಅಭಿಮಾನಿಗಳು ಖುಷಿಗೊಂಡಿದ್ದಾರೆ. ‘ಕಾಂತಾರ’ ಚಿತ್ರದಲ್ಲಿ ಮಂಗಳೂರು ಕನ್ನಡ ಮಾತನಾಡಿದ್ದ ಶೈನ್, ‘ವಿಜಯಾನಂದ’ ಚಿತ್ರದಲ್ಲಿ ಉತ್ತರ ಕರ್ನಾಟಕದ ಘಾಟಿ ಶೈಲಿಯಲ್ಲಿ ಮಿಂಚಿದ್ದಾರೆ.

    ತಮ್ಮ ಪಾತ್ರದ ಬಗ್ಗೆ ಹೇಳಿಕೊಳ್ಳುವ ಅವರು, ‘ಡಾ. ವಿಜಯ ಸಂಕೇಶ್ವರ ಸರ್ ಸಂದರ್ಶನಗಳಲ್ಲಿ, ಸುದ್ದಿಗೋಷ್ಠಿಯಲ್ಲಿ ಹೇಳಿದಂತೆ ಸಿನಿಮಾಗಾಗಿ ಹೊಸದಾಗಿ ಈ ಚಿತ್ರದಲ್ಲಿ ಏನೂ ಸೇರಿಸಿಲ್ಲ. ಅವರ ನಿಜ ಜೀವನದಲ್ಲಿ ನಡೆದಿರುವ ಗಲಾಟೆಯನ್ನೇ ಫೈಟ್ ರೀತಿ ತೋರಿಸಿದ್ದೇವೆ. ನಮ್ಮ ಬೆಳವಣಿಗೆ ಸಹಿಸದ ಕೆಲವರು, ಅವರನ್ನು ಮೀರಿ ಬೆಳೆಯಬಾರದು ಎಂಬ ದುರಾಲೋಚನೆಯಿಂದ ಅಡ್ಡಗಾಲು ಹಾಕುವ ಪಾತ್ರ. ಒಂದು ರೀತಿಯ ದೌಲತ್ತು, ಖಡಕ್ ಆದ ಪಾತ್ರ ನನ್ನದು. ಘಾಟಿ ಬಾಡಿ ಲಾಂಗ್ವೇಜ್, ಆಟಿಟ್ಯೂಡ್ ಇರುವ ಪಾಟೀಲ ಎಂಬ ಪಾತ್ರ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ. ‘ಕಾಂತಾರ’ ಚಿತ್ರದಲ್ಲಿ ಅವರ ಪಾತ್ರ 1970ರ ದಶಕದಲ್ಲಿ ಬರುತ್ತದೆ.

    ಅದೇ ರೀತಿ ‘ವಿಜಯಾನಂದ’ ಚಿತ್ರದಲ್ಲು ಸಹ 1970ರ ದಶಕದ ಮಧ್ಯದಲ್ಲಿ ನಡೆಯುವ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಂತ ಶೈನ್​ಗೆ ಮಂಗಳೂರು ಭಾಷೆ ಸರಳ, ಉತ್ತರ ಕರ್ನಾಟಕ ಭಾಷೆ ಕಷ್ಟವಾಗಲಿಲ್ಲವಂತೆ. ‘ನನ್ನ ತಾಯಿ ಊರು ಹಾವೇರಿ. ಅಲ್ಲಿ ಅಜ್ಜನ ಹೋಟೆಲ್ ಇತ್ತು. ಆಗಾಗ ಊರಿಗೆ ಹೋಗುತ್ತಿದ್ದ ಕಾರಣ, ಅಲ್ಲಿನ ಭಾಷೆಯಲ್ಲೂ ಮಾತನಾಡುತ್ತಿದ್ದೆ. ಜತೆಗೆ ಚಿತ್ರೀಕರಣಕ್ಕೂ ಮುನ್ನ ವರ್ಕ್​ಶಾಪ್ ಕೂಡ ಮಾಡಿದೆವು. ಒಬ್ಬ ನಟನಿಗೆ ಒಂದೇ ರೀತಿಯ ಪಾತ್ರಗಳಿಗೆ ಅಂಟಿಕೊಳ್ಳದೇ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ನಟಿಸುವ ಆಸೆ ಇರುತ್ತದೆ. ಅಂತಹ ಒಂದು ಪಾತ್ರದಲ್ಲಿ ಅಭಿನಯಿಸಿದ, ಅದಕ್ಕಿಂತ ಹೆಚ್ಚಾಗಿ ಡಾ. ವಿಜಯ ಸಂಕೇಶ್ವರ ಅವರಂತಹ ದಿಗ್ಗಜರ ಬಯೋಪಿಕ್​ನಲ್ಲಿ ನಟಿಸಿದ ಖುಷಿಯಿದೆ’ ಎನ್ನುತ್ತಾರೆ ಶೈನ್. ‘ಕಾಂತಾರ’ ಚಿತ್ರದ ಅದ್ಭುತ ಯಶಸ್ಸಿನ ಬಗ್ಗೆ ಮಾತನಾಡುವ ಶೈನ್,

    ‘‘ಕಾಂತಾರ’ ಚಿತ್ರದಲ್ಲಿ ನಾನು ನಿರೀಕ್ಷೆ ಮಾಡಿದ್ದಕ್ಕಿಂತ ದೊಡ್ಡ ಮಟ್ಟದ ಪ್ರತಿಕ್ರಿಯೆ ಬಂತು. ಆ ಬಳಿಕ ಈಗ ‘ವಿಜಯಾನಂದ’ ಚಿತ್ರದಲ್ಲಿ ನಟಿಸಿದ್ದೇನೆ. ಕನ್ನಡಿಗರೇ ಕನ್ನಡದ ಸಾಧಕನ ಕುರಿತು ನಿರ್ವಿುಸಿರುವ ಮೊದಲ ಪ್ಯಾನ್ ಇಂಡಿಯಾ ಬಯೋಪಿಕ್ ಇದು. ‘ಕಾಂತಾರ’ ಚಿತ್ರಕ್ಕೆ ಸಿಕ್ಕಂತೆಯೇ ಈ ಚಿತ್ರಕ್ಕೂ ಯಶಸ್ಸು ಸಿಗುವ ನಿರೀಕ್ಷೆಯಿದೆ’ ಎಂದು ಹೇಳಿಕೊಳ್ಳುತ್ತಾರೆ. ಶೈನ್ ಶೆಟ್ಟಿ ಸದ್ಯ ಕೋಮಲ್ ನಾಯಕನಾಗಿರುವ ‘ಕಾಲಾಯ ನಮಃ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದು, ಡಿ. 9ರಂದು ‘ವಿಜಯಾನಂದ’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts