ಕಿರುತೆರೆ ಜೊತೆ ಹಿರಿತೆರೆ ಜೊತೆಯಲಿ; ಡಬಲ್ ರೈಡಿಂಗ್​ನಲ್ಲಿ ತ್ರಿಬಲ್ ರೈಡಿಂಗ್ ಮೇಘಾ

Megha Shetty
Published on

ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು

‘ಜೊತೆಜೊತೆಯಲಿ’ ಧಾರಾವಾಹಿಯ ಮೂಲಕ ಅನು ಎಂದೇ ಮನೆಮಾತಾಗಿರುವ ನಟಿ ಮೇಘಾ ಶೆಟ್ಟಿ. ಸದ್ಯ ‘ತ್ರಿಬಲ್ ರೈಡಿಂಗ್’ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಕಳೆದ ವಾರ ಚಿತ್ರ ಬಿಡುಗಡೆಯಾಗಿದ್ದು, ಈಗ ಅವರು ಪ್ರಚಾರದಲ್ಲಿ ಬಿಜಿಯಿದ್ದಾರೆ. ಮೈಸೂರು, ಮಂಡ್ಯ, ಚನ್ನಪಟ್ಟಣ, ಶಿರಾ, ತುಮಕೂರಿನಲ್ಲಿ ಪ್ರಚಾರ ನಡೆಸಿ ಸದ್ಯ ದಾವಣಗೆರೆಯಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಆ ಬಿಜಿಯ ನಡುವೆಯೇ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು ಮೇಘಾ.

‘ಸದ್ಯ ‘ತ್ರಿಬಲ್ ರೈಡಿಂಗ್’ ಪ್ರಚಾರದ ಓಡಾಟದಲ್ಲಿದ್ದೇನೆ. ಎಲ್ಲಿಗೆ ಹೋದರೂ ನನ್ನನ್ನು ಅನು ಎಂದೇ ಗುರುತು ಹಿಡಿದು, ಕರೆಯುತ್ತಾರೆ. ನನ್ನ ನಿಜವಾದ ಹೆಸರು ತುಂಬ ಜನರಿಗೆ ಗೊತ್ತೇಯಿಲ್ಲ’ ಎಂದು ನಗುತ್ತಾ ಮಾತು ಪ್ರಾರಂಭಿಸುವ ಮೇಘಾ, ‘ನಾನು ಮೊದಲು ಆಯ್ಕೆಯಾಗಿದ್ದು ‘ತ್ರಿಬಲ್ ರೈಡಿಂಗ್’ ಚಿತ್ರಕ್ಕೆ. ಆದರೆ ಮೊದಲು ಬಿಡುಗಡೆಯಾಗಿದ್ದು ‘ದಿಲ್ ಪಸಂದ್’. ‘ಜೊತೆಜೊತೆಯಲಿ’ ಧಾರಾವಾಹಿಯಲ್ಲಿ ಮುಗ್ಧ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಅದೇ ರೀತಿಯ ಪಾತ್ರ ‘ತ್ರಿಬಲ್ ರೈಡಿಂಗ್’ ಚಿತ್ರಕ್ಕೂ ಬೇಕಿತ್ತು. ನಿರ್ದೇಶಕ ಮಹೇಶ್ ಒಮ್ಮೆ ಭೇಟಿಯಾಗಿ ಚಿತ್ರ, ಪಾತ್ರದ ಬಗ್ಗೆ ತಿಳಿಸಿದರು. ನನಗೂ ಇಷ್ಟವಾಯಿತು’ ಎಂದು ಚೊಚ್ಚಲ ಚಿತ್ರಕ್ಕೆ ಆಯ್ಕೆಯಾದ ಬಗ್ಗೆ ಹೇಳಿಕೊಳ್ಳುತ್ತಾರೆ ಮೇಘಾ. ಅವರು ನಟಿಸಿದ ಈ ಎರಡು ಚಿತ್ರಗಳೂ ನವೆಂಬರ್ ತಿಂಗಳಲ್ಲಿ, ಎರಡು ವಾರಗಳ ಅಂತರದಲ್ಲಿ ಬಿಡುಗಡೆಯಾಗಿದ್ದು, ಇನ್ನೂ ಎರಡು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮೇಘಾ ಶೆಟ್ಟಿ.

‘ಬನಾರಸ್’ ಬಳಿಕ ನಿರ್ದೇಶಕ ಜಯತೀರ್ಥ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ‘ಕೈವ’. ಧನ್ವೀರ್ ಈ ಚಿತ್ರದ ನಾಯಕನಾಗಿದ್ದು, ಅವರಿಗೆ ಮೇಘಾ ನಾಯಕಿಯಾಗಿದ್ದಾರೆ. ‘ಸಸ್ಪೆನ್ಸ್ ಕಥಾಹಂದರ ಹೊಂದಿರುವ ಕಾರಣ, ‘ಕೈವ’ ಚಿತ್ರದ ನನ್ನ ಪಾತ್ರದ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ’ ಎನ್ನುವ ಮೇಘಾ, ಪ್ಯಾನ್ ಇಂಡಿಯಾ ಮೂಡಿಬರುತ್ತಿರುವ ಸಡಗರ ರಾಘವೇಂದ್ರ ನಿರ್ದೇಶನದ ‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’ ಚಿತ್ರದಲ್ಲಿ ಕವೀಶ್ ಶೆಟ್ಟಿಗೆ ಜೋಡಿಯಾಗಿದ್ದಾರೆ. ಇಲ್ಲಿ ಅವರು ಹಳ್ಳಿಯ ಬಜಾರಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಿರುತೆರೆ, ಹಿರಿತೆರೆ ಹೇಗೆ ಸಂಭಾಳಿಸುತ್ತಿದ್ದೀರಿ? ಎಂದರೆ ಮೇಘಾ, ‘ನನ್ನ ಧಾರಾವಾಹಿ ಮತ್ತು ಸಿನಿಮಾ ತಂಡಗಳೆರಡೂ ತುಂಬ ಸಪೋರ್ಟ್ ಮಾಡುತ್ತಿದ್ದಾರೆ. ಅವರೇ ಮಾತನಾಡಿಕೊಂಡು ಡೇಟ್ಸ್ ಹೊಂದಿಸಿಕೊಳ್ಳುತ್ತಾರೆ. ಧಾರಾವಾಹಿಯಲ್ಲಿ ಏನಾದರೂ ತುರ್ತು ಚಿತ್ರೀಕರಣವಾಗಬೇಕಾದರೆ, ಅವರು ಸಿನಿಮಾ ತಂಡಕ್ಕೆ ತಿಳಿಸುತ್ತಾರೆ. ಸಿನಿಮಾ ಕೆಲಸವೇನಾದರೂ ಬೇಗ ಆಗಬೇಕೆಂದರೆ ಅವರು ಧಾರಾವಾಹಿ ತಂಡಕ್ಕೆ ತಿಳಿಸುತ್ತಾರೆ. ಹೀಗಾಗಿ ಎರಡೂ ಕಡೆ ಸಮಸ್ಯೆಯಾಗುತ್ತಿಲ್ಲ’ ಎನ್ನುತ್ತಾರೆ. ಇಂತಹ ಮೇಘಾಗೆ ಕನಸಿನ ಪಾತ್ರ ಅಂತಿಲ್ಲವಂತೆ, ಅವರು ಹೇಳುವಂತೆ ‘ಕಲಾವಿದರಿಗೆ ಎಲ್ಲ ಪಾತ್ರಗಳೂ ವಿಶೇಷವೇ...’

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net