ದನ ಕೊಳ್ಳಲು ಹಣವಿಲ್ಲ ಎಂಬ ಚಿಂತೆಯಲ್ಲಿದ್ದವರ ಬ್ಯಾಂಕ್​ ಖಾತೆಗೆ ಬಂತು 2 ಕೋಟಿ ರೂಪಾಯಿ!; ಕಾರಣ 'ಕೌ ಇನ್​ಸ್ಪೆಕ್ಟರ್' ಝಾನ್ಸಿ..

Cow
Published on

ಬೆಂಗಳೂರು: 'ಉಂಡೂ ಹೋದ ಕೊಂಡೂ ಹೋದ' ಚಿತ್ರದಲ್ಲಿ ನಟ ಅನಂತ್​ನಾಗ್ ಅಭಿನಯಿಸಿದ್ದ ಕೌ ಇನ್​ಸ್ಪೆಕ್ಟರ್ ಪಾತ್ರವನ್ನು ಈ ಝಾನ್ಸಿ ನೆನಪಿಸಿದರೂ ಅಚ್ಚರಿ ಏನಿಲ್ಲ. ಏಕೆಂದರೆ ಅಲ್ಲಿನ ಆ ಪಾತ್ರವೇ ಅಂಥದ್ದು. ಅದನ್ನೇ ಹೋಲುವಂತೆ ಈಕೆ ರೈತರೊಬ್ಬರಿಗೆ ದನದ ಸಾಲದ ಹೆಸರಲ್ಲಿ ಮೋಸ ಮಾಡಿದ್ದಾಳೆ.

ದನದ ಸಾಲ ಕೊಡಿಸುವುದಾಗಿ ರೈತರೊಬ್ಬರಿಂದ ಖಾತೆ ವಿವರ ಪಡೆದು ಅಕ್ರಮ ವಹಿವಾಟು ನಡೆಸಿರುವ ಈಕೆ ಇದೀಗ ಆ ಕೃಷಿಕರನ್ನು ಫಜೀತಿಗೆ ಸಿಲುಕಿಸಿದ್ದಾಳೆ. ಈಕೆ ಮಾಡಿರುವ ಕಿತಾಪತಿಗೆ ಈ ರೈತರಿಗೆ 40 ಲಕ್ಷ ರೂ. ತೆರಿಗೆ ಕಟ್ಟುವಂತೆ ನೋಟಿಸ್ ಬಂದಿದೆ.

ಬೆಂಗಳೂರಿನ ಯಲಹಂಕ ತಾಲೂಕು ಚೊಕ್ಕನಹಳ್ಳಿ ಗ್ರಾಮದ ರೈತ ಮುನಿರಾಜು ಎಂಬವರು ಮೋಸ ಹೋದವರು. ಹಸು ಖರೀದಿಗೆಂದು ಮುಂದಾಗಿದ್ದ ಮುನಿರಾಜು ಅವರಿಗೆ ತಮ್ಮ ಕುಟುಂಬಕ್ಕೆ ಪರಿಚಿತವಾಗಿರುವ ಝಾನ್ಸಿ ಎಂಬಾಕೆ ತಾನು ಸರ್ಕಾರದಿಂದ ಹಸು ಕೊಳ್ಳಲು ಸಾಲ ಕೊಡಿಸುವುದಾಗಿ ನಂಬಿಸಿದ್ದರು. ಮಾತ್ರವಲ್ಲ ಅದಕ್ಕೆ ಮುನಿರಾಜು ಮತ್ತು ಅವರ ಹೆಂಡತಿಯ ಬ್ಯಾಂಕ್ ಖಾತೆ, ಪಾಸ್​ಬುಕ್​, ಆಧಾರ್ ವಿವರ ಇತ್ಯಾದಿ ಪಡೆದಿದ್ದರು. ಕೆಲವು ದಿನಗಳ ಬಳಿಕ ಒಂದು ಒಟಿಪಿ ಬರುತ್ತೆ, ಅದನ್ನು ಹೇಳಿದರೆ ಸಾಕು ಎಂದಿದ್ದರು.

ಆಕೆ ಹೇಳಿದ್ದಂತೆ ಆಗಸ್ಟ್ 20ರಂದು ಒಟಿಪಿ ಬಂದಿದ್ದು, ಮುನಿರಾಜು ಅವರು ಅದನ್ನು ಹೇಳಿದ್ದರು. ಅ. 12ರಂದು ಮುನಿರಾಜುವನ್ನು ಸಂಪರ್ಕಿಸಿದ ತೆರಿಗೆ ಅಧಿಕಾರಿಗಳು ನಿಮ್ಮ ಖಾತೆಯಲ್ಲಿ 2 ಕೋಟಿ ರೂ. ವಹಿವಾಟು ಆಗಿದ್ದು, ಅದಕ್ಕಾಗಿ 40 ಲಕ್ಷ ರೂ. ತೆರಿಗೆ ಕಟ್ಟಬೇಕು ಎಂದು ನೋಟಿಸ್ ಕೊಟ್ಟಿದ್ದರು. ಆಗಲೇ ಮುನಿರಾಜು ಅವರಿಗೆ ಮೋಸ ಹೋಗಿದ್ದು ಗೊತ್ತಾಗಿದ್ದು, ಈ ಕುರಿತು ಬಾಗಲೂರು ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net