ನಟಿ ರಚಿತಾ ರಾಮ್​ ಮುಖದಲ್ಲೀಗ ಮತ್ತೆ ಖುಷಿಯ ಡಿಂಪಲ್​; ಬೇಸರದ ಮಧ್ಯೆಯೇ 'ಏಕ್​ಲವ್​​ಯಾ'ಗೂ ಸಂತೋಷ!

Rachitha Ram
Published on

ಬೆಂಗಳೂರು: ನಟಿ ರಚಿತಾ ರಾಮ್​ ಕಳೆದೆರಡು ದಿನಗಳಿಂದ ಟ್ರೋಲ್​ಗೆ ಒಳಗಾಗಿದ್ದಾರೆ, ಟೀಕೆಗೂ ತುತ್ತಾಗಿದ್ದಾರೆ. ಅದು 'ಲವ್ ಯೂ ರಚ್ಚು' ಸಿನಿಮಾದಲ್ಲಿನ ಹಾಡಿನಲ್ಲಿ ಮಾದಕ ದೃಶ್ಯದಲ್ಲಿ ಅಭಿನಯಿಸಿದ್ದಕ್ಕೆ ಸಮರ್ಥನೆಯಾಗಿ ಫಸ್ಟ್​ ನೈಟ್​ ಉದಾಹರಣೆ ಕೊಟ್ಟಿದ್ದ ಅವರ ಹೇಳಿಕೆ ವೈರಲ್ ಆಗಿತ್ತು. ಅದೇ ಕಾರಣಕ್ಕೆ ಅವರನ್ನು ಚಿತ್ರರಂಗದಿಂದ ಬ್ಯಾನ್​ ಮಾಡಬೇಕು ಎಂದು ಕೆಲವರು ಆಗ್ರಹಿಸಿದ್ದೂ ಆಗಿದೆ. ಸಾಲದ್ದಕ್ಕೆ ಇಂದು ಮತ್ತೆ ಅವರೊಂದಿಗೆ ನಿರ್ದೇಶಕ ಪ್ರೇಮ್​, ನಟಿ-ನಿರ್ಮಾಪಕಿ ರಕ್ಷಿತಾ ಕೂಡ ಟ್ರೋಲ್​ ಆಗಿದ್ದರು, ಟೀಕೆಗೊಳಗಾಗಿದ್ದರು. ಹೀಗಾಗಿ ರಚಿತಾ ಮಾತ್ರವಲ್ಲದೆ 'ಏಕ್​ಲವ್​​ಯಾ' ಚಿತ್ರತಂಡ ಬೇಸರಕ್ಕೆ ಒಳಗಾಗಿದ್ದರೂ, ಈಗ ಅವರೆಲ್ಲರ ಮುಖದಲ್ಲಿ ನಗುವೊಂದು ಮೂಡಿದೆ.

ರಕ್ಷಿತಾ ನಿರ್ಮಾಣ, ಪ್ರೇಮ್​ ನಿರ್ದೇಶನ, ರಕ್ಷಿತಾ ಸೋದರ ರಾಣಾ, ರಚಿತಾ ರಾಮ್​ ಮತ್ತು ರೀಷ್ಮಾ ಅಭಿನಯಿಸಿರುವ 'ಏಕ್​ಲವ್​​ಯಾ' ಚಿತ್ರದ 'ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತ' ಎಂಬ ಹಾಡೊಂದನ್ನು ನಿನ್ನೆಯಷ್ಟೇ ಬಿಡುಗಡೆ ಮಾಡಲಾಗಿತ್ತು. ಪ್ರೇಮ್​ ಸಾಹಿತ್ಯ, ಅರ್ಜುನ್​ ಜನ್ಯ ಸಂಗೀತ, ಮಂಗ್ಲಿ ಮತ್ತು ಕೈಲಾಶ್​ ಖೇರ್ ಗಾಯನದ ಈ ಹಾಡನ್ನು ಸಾಹಿತ್ಯಕ್ಕೆ ತಕ್ಕಂತೆ ಸ್ವಲ್ಪ ಜೋಶ್​ನಲ್ಲೇ ನಿನ್ನೆ ಬಿಡುಗಡೆ ಮಾಡಲಾಗಿತ್ತು.

ಈ ಸಮಾರಂಭದಲ್ಲಿ ಪುನೀತ್ ರಾಜಕುಮಾರ್ ಅವರ ಫೋಟೋ ಇಟ್ಟು ಚಿತ್ರತಂಡದಿಂದ ಶ್ರದ್ಧಾಂಜಲಿಯನ್ನೂ ಸಲ್ಲಿಸಲಾಗಿತ್ತು. ಆದರೆ ಹಾಡು ಬಿಡುಗಡೆ ಸಂದರ್ಭದಲ್ಲಿ ಶಾಂಪೇನ್​ ಬಳಲಾಗಿದೆ, ಅಲ್ಲಿಯೇ ಅಪ್ಪು ಫೋಟೋ ಇತ್ತು, ಇದರಿಂದ ಪುನೀತ್​​ಗೆ ಅವಮಾನ ಆಗಿದೆ ಎಂದು ಒಂದಷ್ಟ ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಇದೇ ದೊಡ್ಡ ಸುದ್ದಿ ಆಗುತ್ತಿದ್ದಂತೆ ನಿರ್ದೇಶಕ ಪ್ರೇಮ್, ನಿರ್ಮಾಪಕಿ ರಕ್ಷಿತಾ, ನಟಿ ರಚಿತಾ ರಾಮ್​ ಮೂವರೂ ಅದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ, ಹಾಡಿನ ಸನ್ನಿವೇಶಕ್ಕೆ ತಕ್ಕಂತೆ ಅದನ್ನು ಬಳಸಲಾಗಿದೆ ಎಂದು ಹೇಳಿ ಕ್ಷಮೆಯನ್ನೂ ಕೋರಿದ್ದರು.

ಹಾಡಿನ ಬಿಡುಗಡೆ ಸಂದರ್ಭದಲ್ಲಿ ನಡೆದ ಒಂದು ಅಚಾತುರ್ಯದಿಂದ ಉಂಟಾದ ಸಮಸ್ಯೆಯಿಂದ ವ್ಯಕ್ತವಾದ ವಿರೋಧ-ಅಸಮಾಧಾನದಿಂದಾಗಿ 'ಏಕ್​ಲವ್​ಯಾ' ಚಿತ್ರತಂಡ ಬೇಸರಕ್ಕೆ ಒಳಗಾಗಿತ್ತು. ಇದೀಗ ಅವರೆಲ್ಲರ ಮುಖದಲ್ಲಿ ಅದೇ ಹಾಡು ನಗು ಮೂಡಿಸುವಂತೆ ಮಾಡಿದೆ. ಅಂದರೆ ಹಾಡು ಬಿಡುಗಡೆಯಾದ ಒಂದೇ ದಿನದಲ್ಲಿ 26 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಕಂಡಿದ್ದಲ್ಲದೆ, ಈಗ ಯೂಟ್ಯೂಬ್​ನಲ್ಲಿ ಟಾಪ್​ ಟ್ರೆಂಡಿಂಗ್​ನಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net